ಸುಳ್ಳು ಸುದ್ದಿಯಿಂದ ಗ್ಯಾಸ್ ಎಜೆನ್ಸಿಗಳ ಮುಂದೆ ಜನಜಂಗುಳಿ; ಇ ಕೆವೈಸಿ ಮಾಡಲು ಮುಗಿಬಿದ್ದ ಜನ
ಗ್ಯಾಸ್ ಏಜನ್ಸಿಗಳ ಮುಂದೆ ಮುಂಜಾನೆ ಆರು ಗಂಟೆಗೆ ನೂರಾರು ಜನರು ಚಳಿಯನ್ನು ಲೆಕ್ಕಿಸದೇ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾದು ನಿಲ್ಲುತ್ತಿದ್ದಾರೆ. ಈ ಸಮಯದಲ್ಲಿ ತಳ್ಳಾಟ, ನೂಕಾಟಗಳು ಕೂಡ ನಡೆಯುತ್ತಿದ್ದು, ವೃದ್ದರು, ಮಹಿಳೆಯರು ಪಡಬಾರದ ಸಂಕಷ್ಟ ಪಡುತ್ತಿದ್ದಾರೆ. ಇವರ ಸಂಕಷ್ಟಕ್ಕೆ ಕಾರಣವಾಗಿದ್ದು ಇ ಕೆವೈಸಿ ಮತ್ತು ಸುಳ್ಳು ವದಂತಿ. ಅದೇನು ಅಂತೀರಾ? ಇಲ್ಲಿದೆ ನೋಡಿ.
ಕೊಪ್ಪಳ, ಡಿ.28: ಡಿಸೆಂಬರ್ 31 ರೊಳಗೆ ಗ್ಯಾಸ್ ಸಂಪರ್ಕ್ ಪಡೆದವರೆಲ್ಲರೂ ನಿಮಗೆ ಸೇವೆ ನೀಡುವ ಗ್ಯಾಸ್ ಏಜೆನ್ಸಿಯವರ ಬಳಿ ಹೋಗಿ ಇ ಕೆವೈಸಿ ಮಾಡಿಸಬೇಕು. ಇಲ್ಲದಿದ್ದರೆ ನಿಮ್ಮ ಸಬ್ಸಿಡಿ(Subsidy) ಹಣ ಬಂದಾಗುತ್ತದೆ. ಕೆವೈಸಿ ಮಾಡಿಸಿದ್ರೆ ನಿಮಗೆ ಕೇವಲ ಐನೂರು ರೂಪಾಯಿಗೆ ಸಿಲಿಂಡರ್ ಸಿಗುತ್ತೆ. ಇಲ್ಲದಿದ್ದರೆ, ಕಮರ್ಷಿಯಲ್ ಸಿಲಿಂಡರ್ ಬೆಲೆ ನೀಡಿ ಸಿಲಿಂಡರ್ ಖರೀದಿಸಬೇಕು ಎನ್ನುವ ವದಂತಿಯನ್ನು ಹಬ್ಬಿಸಿದ್ದಾರೆ. ಈ ಹಿನ್ನಲೆ ಕೊಪ್ಪಳ(Koppala) ನಗರ ಸೇರಿದಂತೆ ರಾಜ್ಯದ ವಿವಿಧ ಗ್ಯಾಸ್ ಏಜೆನ್ಸಿಗಳ ಅಂಗಡಿಗಳ ಮುಂದೆ ನೂರಾರು ಜನ ಕ್ಯೂ ನಿಲ್ಲುತ್ತಿದ್ದಾರೆ. ಬೆಳ್ಳೆಂಬೆಳಗ್ಗೆ ಆರು ಗಂಟೆಗೆ ತಮ್ಮ ಬೇರೆ ಕೆಲಸಗಳನ್ನು ಕೂಡ ಬಿಟ್ಟು, ಗ್ಯಾಸ್ ಅಂಗಡಿ ಮುಂದೆ ಬಂದು ಕಾಯುತ್ತಿದ್ದಾರೆ.
ಈ ವದಂತಿ ಬಾಯಿಂದ ಬಾಯಿಗೆ ಅನೇಕರಿಗೆ ಹಬ್ಬಿದ್ರೆ, ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹರದಾಡುತ್ತಿರುವ ವದಂತಿಯನ್ನು ನಂಬಿ, ತಾವು ಗ್ಯಾಸ್ ಸಂಪರ್ಕ ಪಡಿದಿರುವ ಏಜೆನ್ಸಿಗಳ ಮುಂದೆ ಬಂದು ಇ ಕೆವೈಸಿ ಮಾಡಲು ಮುಗಿಬೀಳುತ್ತಿದ್ದಾರೆ. ಇನ್ನು ದಿಢೀರನೆ ನೂರಾರು ಜನ ಬರುತ್ತಿರುವುದರಿಂದ ಏಜೆನ್ಸಿಗಳ ಅಂಗಡಿಗಳು ಜನರಿಂದ ತುಂಬಿ ತುಳಕುತ್ತಿವೆ.
ಇದನ್ನೂ ಓದಿ:ಚಿತ್ರದುರ್ಗ: ಚಿನ್ನದ ನಾಣ್ಯ ಸಿಗುತ್ತವೆ ಎಂಬ ವದಂತಿ;ರಾಷ್ಟ್ರೀಯ ಹೆದ್ದಾರಿ ಬಳಿ ಶೋಧ ಕಾರ್ಯದಲ್ಲಿ ತೊಡಗಿದ ಜನ
ಸಬ್ಸಿಡಿ ಬಂದಾಗುತ್ತೆ ಎಂಬ ವದಂತಿ
ಮೂರೇ ದಿನದಲ್ಲಿ ಇ ಕೆವೈಸಿ ಮಾಡಿಸಬೇಕು. ಇಲ್ಲದಿದ್ದರೆ ಸಬ್ಸಿಡಿ ಬಂದಾಗುತ್ತೆ ಅಂತ ಹೇಳಿದ್ರು. ಹೀಗಾಗಿ ಮುಂಜಾನೆ ಆರು ಗಂಟೆಗೆ ಕೊಪ್ಪಳ ನಗರದಲ್ಲಿರುವ ಗ್ಯಾಸ್ ಏಜೆನ್ಸಿ ಮುಂದೆ ಬಂದು ನಿಂತಿದ್ದೇನೆ. ಆದರೂ ನನ್ನ ಪಾಳಿ ಬರುತ್ತಿಲ್ಲ. ಜನ ಹೊಡದಾಡುತ್ತಿದ್ದಾರೆ, ಕೆವೈಸಿ ಮಾಡಲು ಪರದಾಡುವಂತಾಗಿದೆ ಎಂದು ಮಲ್ಲಮ್ಮ ಎನ್ನುವ ಮಹಿಳೆ ನೋವು ತೊಂಡಿಕೊಂಡಿದ್ದಾಳೆ.
ಯಾತಕ್ಕಾಗಿ ಇಕೈವೈಸಿ, ಅದಕ್ಕಿರೋ ಸಮಯವೇನು?
ಇನ್ನು ಕೇಂದ್ರ ಸರ್ಕಾರ ಗ್ಯಾಸ್ ಸಂಪರ್ಕ್ ಪಡೆದವರು ಇ ಕೆವೈಸಿ ಮಾಡಿಸುವುದನ್ನು ಕಡ್ಡಾಯ ಮಾಡಿದೆ. ಹಾಗಂತ ಅದಕ್ಕೆ ಡಿಸೆಂಬರ್ 31 ಕೊನೆಯ ದಿನ ಎಂದು ಘೋಷಣೆ ಮಾಡಿಲ್ಲ. ಈ ಹಿಂದೆ ಡಿಸೆಂಬರ್ 31 ಕೊನೆಯ ದಿನ ಎಂದು ಹೇಳಿದರೂ ಕೂಡ ಅದನ್ನು ಮತ್ತೆ ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. ಆದರೂ ಕೂಡ ಡಿಸೆಂಬರ್ 31 ಕೊನೆಯ ದಿನ ಎಂದು ತಿಳಿದ ಜನ, ಇ ಕೆವೈಸಿ ಮಾಡಿಸಲು ಮುಗಿಬೀಳುತ್ತಿದ್ದಾರೆ.
ಕೆವೈಸಿ ಮಾಡಿಸಿದ್ರೆ ಕಡಿಮೆ ಬೆಲೆಗೆ ಸಿಲಿಂಡರ್ ಎಂಬ ವದಂತಿ
ಇ ಕೆವೈಸಿ ಮಾಡಿಸಿದ್ರೆ ಕಡಿಮೆ ಬೆಲೆಗೆ ಸಿಲಿಂಡರ್ ಸಿಗುತ್ತದೆ ಎನ್ನುವುದು ಕೂಡ ಸುಳ್ಳು, ಕೆಲವರು ಒಂದೇ ಹೆಸರಿನಲ್ಲಿ ಎರಡೆರಡು ಗ್ಯಾಸ್ ಸಂಪರ್ಕ ಪಡೆದಿದ್ದಾರೆ. ಅಂತವರನ್ನು ಪತ್ತೆ ಮಾಡಲು, ಮತ್ತು ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರು, ಸಬ್ಸಿಡಿಗೆ ಯಾರೆಲ್ಲ ಅರ್ಹತೆ ಹೊಂದಿದ್ದಾರೆ ಎನ್ನುವುದನ್ನು ತಿಳಿಯಲು ಕೇಂದ್ರ ಸರ್ಕಾರ ಇ ಕೆವೈಸಿ ಯನ್ನು ಕಡ್ಡಾಯ ಮಾಡಿದೆಯಂತೆ. ಗ್ರಾಹಕರು ತಮಗೆ ಸಮಯವಿದ್ದಾಗ ಏಜೆನ್ಸಿಗಳ ಅಂಗಡಿಗೆ ಬಂದು, ತಮ್ಮ ಆಧಾರ ಕಾರ್ಡ್ ಮತ್ತು ಗ್ಯಾಸ್ ಬುಕ್ನ್ನು ತಂದು, ಹೆಬ್ಬಟ್ಟನ್ನು ನೀಡಿ ಸುಲಭವಾಗಿ ಇ ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ. ಇದಕ್ಕೆ ಯಾವುದೇ ಹಣವನ್ನು ಕೂಡ ಚಾರ್ಜ್ ಮಾಡುವುದಿಲ್ಲ ಎಂದು ಕೊಪ್ಪಳದ ಭಾರತ್ ಗ್ಯಾಸ್ ಏಜನ್ಸಿ ಮಾಲೀಕ ರಾಘವೇಂದ್ರ ಕುಲಕರ್ಣಿ ಅವರು ಹೇಳುತ್ತಿದ್ದಾರೆ.
ಗ್ಯಾಸ್ ಸಂಪರ್ಕ ಪಡೆದವರು ಇ ಕೆವೈಸಿ ಬಗ್ಗೆ ಸಾಮಾಜಿಕ ತಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲ ವದಂತಿಗಳನ್ನು ನಂಬಿ ಇದೀಗ ಜನ ಸಂಕಷ್ಟ ಪಡುತ್ತಿದ್ದಾರೆ. ಹೀಗಾಗಿ ಜನರಲ್ಲಿ ಮೂಡಿರುವ ಗೊಂದಲ ನಿವಾರಣೆ ಮಾಡುವ ಕೆಲಸವನ್ನು ಅಧಿಕಾರಿಗಳು ಮತ್ತು ಗ್ಯಾಸ್ ಏಜೆನ್ಸಿಗಳ ಸಿಬ್ಬಂದಿ ಮಾಡಬೇಕಿದೆ. ಆ ಮೂಲಕ ಜನರು ಪಡುತ್ತಿರುವ ತಾಪತ್ರಯಗಳಿಗೆ ಪರಿಹಾರ ಕಲ್ಪಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Thu, 28 December 23