ಕೊಪ್ಪಳದಲ್ಲಿ ಅನಧಿಕೃತ ರೆಸಾರ್ಟ್​ಗಳ ಹಾವಳಿ: ಸರ್ಕಾರಕ್ಕೆ ಕೋಟ್ಯಂತರ ರೂ ವಂಚನೆ

ಕೊಪ್ಪಳ ಜಿಲ್ಲೆಯಲ್ಲಿ ಅನೇಕ ಅನಧಿಕೃತ ರೆಸಾರ್ಟ್‌ಗಳು ಕಾನೂನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ ತೆರಿಗೆ ನಷ್ಟವಾಗುತ್ತಿದೆ. ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸದೇ ರೆಸಾರ್ಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಸ್ಥಳೀಯರು ಮತ್ತು ಪರಿಸರವಾದಿಗಳು ಈ ಅಕ್ರಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಬೇಕಾಗಿದೆ.

ಕೊಪ್ಪಳದಲ್ಲಿ ಅನಧಿಕೃತ ರೆಸಾರ್ಟ್​ಗಳ ಹಾವಳಿ: ಸರ್ಕಾರಕ್ಕೆ ಕೋಟ್ಯಂತರ ರೂ ವಂಚನೆ
ಕೊಪ್ಪಳದಲ್ಲಿ ಅನಧಿಕೃತ ರೆಸಾರ್ಟ್​ಗಳ ಹಾವಳಿ: ಸರ್ಕಾರಕ್ಕೆ ಕೋಟ್ಯಂತರ ರೂ ವಂಚನೆ
Updated By: ಗಂಗಾಧರ​ ಬ. ಸಾಬೋಜಿ

Updated on: Feb 14, 2025 | 10:26 PM

ಕೊಪ್ಪಳ, ಫೆಬ್ರವರಿ 14: ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿವೆ. ಹೀಗಾಗಿ ದೇಶ ವಿದೇಶಗಳಿಂದ ಪ್ರವಾಸಿಗರು ಜಿಲ್ಲೆಗೆ ಬರ್ತಾರೆ. ಇದೇ ಕಾರಣದಿಂದ ಜಿಲ್ಲೆಯಲ್ಲಿ ನಾಯಿ ಕೊಡೆಗಳಂತೆ ರೆಸಾರ್ಟ್​ಗಳು (resorts) ಆರಂಭವಾಗಿವೆ. ಆದರೆ ಬಹುತೇಕ ರೆಸಾರ್ಟ್​ಗಳು ಅನಧಿಕೃತವಾಗಿ ನಡೆಯುತ್ತಿದ್ದು, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತೀವೆ.

ಬಿದಿರಿನಿಂದ ಮಾಡಿರೋ ಹಟ್ ಗಳು, ಇನ್ನೊಂದಡೆ ಪ್ರವಾಸಿಗರನ್ನು ಆಕರ್ಷಿಸುತ್ತಿರೋ ವಿಭಿನ್ನ ಬಗೆಯ ರೆಸ್ಟೋರೆಂಟ್ ಗಳು. ಇಲ್ಲಿ ಟೆಂಟ್ ಹೌಸ್ ಸೇರಿದಂತೆ ಆನಂದದಾಯಕವಾಗಿ ಕಾಲ ಕಳೆಯಲು ಎಸಿ ಕೊಠಡಿಗಳು ಕೂಡ ಸಿಗುತ್ತವೆ. ಪ್ರಕೃತಿಯ ನಡುವೆ ನಿರ್ಮಾಣವಾಗಿರೋ ಈ ರೆಸಾರ್ಟ್ ಗಳು ಇರೋದು, ಯಾವುದೋ ಮಲೆನಾಡಿನಲ್ಲಲ್ಲಾ, ಬದಲಾಗಿ ಕೊಪ್ಪಳ ಜಿಲ್ಲೆಯಲ್ಲಿ.

ಇದನ್ನೂ ಓದಿ: ಕೊಪ್ಪಳ: ಸರ್ಕಾರಿ ಶಾಲೆಗಳಿಗೆ ಹುಳುವಿರುವ ಧಾನ್ಯ ಪೂರೈಕೆ

ಕೊಪ್ಪಳ ತಾಲೂಕಿನ ಬಸ್ಸಾಪುರ, ಗಂಗಾವತಿ ತಾಲೂಕಿನ ಸಾಣಾಪುರ ಸೇರಿದಂತೆ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಇದೀಗ ರೆಸಾರ್ಟ್​ಗಳ ಹಾವಳಿ ಹೆಚ್ಚಾಗಿದೆ. ಒಂದಕ್ಕಿಂತ ಒಂದು ಭಿನ್ನ ರೆಸಾರ್ಟ್​ಗಳು ಆರಂಭವಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಈ ಭಾಗದಲ್ಲಿ ಇದೀಗ ಆರವತ್ತಕ್ಕೂ ಹೆಚ್ಚು ರೆಸಾರ್ಟ್ ಗಳು ತಲೆ ಎತ್ತಿವೆ. ದೇಶ ವಿದೇಶಗಳಿಂದ ಕೂಡಾ ಪ್ರವಾಸಿಗರು ಇಲ್ಲಿಗೆ ಬರ್ತಾರೆ. ಸಮೀಪದಲ್ಲಿರುವ ಹಂಪೆ, ಆಂಜನಾದ್ರಿ, ಆನೆಗೊಂದಿಗೆ ಬರೋ ಪ್ರವಾಸಿಗರು, ರಾತ್ರಿ ಸಮಯವನ್ನು ಆನಂದದಾಯಕವಾಗಿ ಕಳೆಯಲು ರೆಸಾರ್ಟ್ ಗಳಿಗೆ ಬರ್ತಾರೆ.

ಅನಧಿಕೃತವಾಗಿ ತಲೆ ಎತ್ತುತ್ತಿವೆ ರೆಸಾರ್ಟ್ ಗಳು

ಈ ಹಿಂದೆ ಜಿಲ್ಲೆಯ ವಿರುಪಾಪುರ ಗಡ್ಡಿಯನ್ನು ಮಿನಿ ಗೋವಾ ಅಂತಲೆ ಕರೆಯಲಾಗುತ್ತಿತ್ತು. ಆದರೆ ಹಂಪಿ ಅಭಿವೃದ್ದಿ ಪ್ರಾಧಿಕಾರದಲ್ಲಿದ್ದಿದ್ದರಿಂದ ಅಲ್ಲಿನ ರೆಸಾರ್ಟ್ ಗಳನ್ನು ತೆರವುಗೊಳಿಸಲಾಗಿತ್ತು. ಇದೀಗ ಹಂಪಿ ಅಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯ ಹೊರಗೆ ರೆಸಾರ್ಟ್ ಗಳು ತಲೆ ಎತ್ತಿವೆ. ಕೃಷಿ ಭೂಮಿಯನ್ನು ಗುತ್ತಿಗೆ, ಖರೀದಿ ಪಡೆಯುತ್ತಿರುವ ಅನೇಕರು, ರೆಸಾರ್ಟ್ ಗಳನ್ನು ಆರಂಭಿಸುತ್ತಿದ್ದಾರೆ. ಆದರೆ ಬಹುತೇಕ ರೆಸಾರ್ಟ್ ಗಳು ಅನಧಿಕೃತವಾಗಿ ತಲೆ ಎತ್ತುತ್ತಿವೆ. ಇದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.

ಯಾವುದೇ ರೆಸಾರ್ಟ್ ನಿರ್ಮಾಣ ಮಾಡಬೇಕಾದರೆ ಕೃಷಿ ಭೂಮಿಯನ್ನು ಮೊದಲು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡಬೇಕು. ಆದರೆ ಇಲ್ಲಿ ಎನ್​ಎ ಮಾಡದೇ ರೆಸಾರ್ಟ್ ಗಳನ್ನು ನಡೆಸುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಗೋತಾ ಆಗುತ್ತಿದೆ. ಕೃಷಿಯೇತರ ಭೂಮಿ ಪರಿವರ್ತನೆಗೆ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಕೃಷಿಯೇತರ ಭೂಮಿಗೆ ಪ್ರತಿವರ್ಷ ಹೆಚ್ಚಿನ ಟ್ಯಾಕ್ಸ್ ಇರುತ್ತದೆ. ಆದರೆ ಇಲ್ಲಿ ಕೃಷಿ ಭೂಮಿಯಲ್ಲಿಯೇ ರೆಸಾರ್ಟ್ ಗಳು ತಲೆ ಎತ್ತಿರೋದರಿಂದ ಯಾರೊಬ್ಬರು ಸರ್ಕಾರಕ್ಕೆ ನಯಾ ಪೈಸೆ ಟ್ಯಾಕ್ಸ್ ಕಟ್ಟುತ್ತಿಲ್ಲಾ.

ಇದನ್ನೂ ಓದಿ: ಕೊಪ್ಪಳ ಜಿಲ್ಲೆಯ ರೈತರಿಗೆ ಮುಳುವಾಯ್ತು ಕಾರ್ಖಾನೆ ಧೂಳು

ಸ್ಥಳೀಯ ಕೆಲ ಅಧಿಕಾರಿಗಳು ಕೂಡ ಇಂತಹದೊಂದು ಅಕ್ರಮ ಕೆಲಸದಲ್ಲಿ ಕೈಜೋಡಿಸಿದ್ದು, ರೆಸಾರ್ಟ್ ಮಾಲೀಕರು ನೀಡು ಪುಡಿಗಾಸು ಪಡೆದು ಕ್ರಮ ಕೈಗೊಳ್ಳದೇ ಸುಮ್ಮನಾಗುತ್ತಿದ್ದಾರೆ. ಅನಧಿಕೃತ ರೆಸಾರ್ಟ್ ಗಳನ್ನು ತೆರವು ಮಾಡುವಂತೆ ಅನೇಕ ಸಂಘಟನೆಗಳು ಜಿಲ್ಲಾಧಿಕಾರಿ ಸೇರಿದಂತೆ ಅನೇಕರಿಗೆ ಮನವಿ ನೀಡಿದ್ದಾರೆ. ಆದರೆ ಅನಧಿಕೃತ ರೆಸಾರ್ಟ್ ಗಳ ವಿರುದ್ದ ಯಾವೊಬ್ಬ ಅಧಿಕಾರಿಯೂ ಕ್ರಮ ಕೈಗೊಳ್ಳುತ್ತಿಲ್ಲ.

ಜಿಲ್ಲೆಯಲ್ಲಿ ಹೆಚ್ಚಾಗುತ್ತಿರೋ ಅನಧಿಕೃತ ರೆಸಾರ್ಟ್ ಗಳ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಬೇಕಾಗಿದೆ. ಜೊತೆಗೆ ಕೆಲವೆಡೆ ಅನಧಿಕೃತ ಚಟುವಟಿಕೆಗಳು ನಡೆಯುತ್ತಿದ್ದು, ಅವುಗಳಿಗೆ ಕೂಡ ಬ್ರೇಕ್ ಹಾಕುವ ಕೆಲಸವನ್ನು ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.