ಕೊಪ್ಪಳ: ರೈತರಲ್ಲಿ ಆತಂಕ ಮೂಡಿಸಿದ ಏಕಾಏಕಿ ಒಣಗುತ್ತಿರುವ ಭತ್ತದ ಪೈರು, ಕಾರಣವೇನು? ಇಲ್ಲಿದೆ ಓದಿ
ಕೊಪ್ಪಳ ಜಿಲ್ಲೆಯ ರೈತರು ಭತ್ತದ ಬೆಳೆಯಲ್ಲಿ ಪ್ರಮುಖ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಾಟಿ ಮಾಡಿದ ಭತ್ತದ ಪೈರು ಒಣಗುತ್ತಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ. ನಾಟಿ ಮಾಡಿದ 50-60 ದಿನಗಳಲ್ಲಿ ಭತ್ತ ಹಚ್ಚ ಹಸುರಿನಿಂದ ನಳನಳಿಸಬೇಕಿತ್ತು. ಆದರೆ, ನೂರಾರು ಎಕರೆ ಪ್ರದೇಶದಲ್ಲಿದ್ದ ಭತ್ತ ಹಸಿರಾಗಿ ಕಾಣುತ್ತಿಲ್ಲ, ಬದಲಾಗಿ ಒಣಗಿ ಹೋಗಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ಓದಿ.

ಕೊಪ್ಪಳ, ಫೆಬ್ರವರಿ 05: ರಾಜ್ಯದ ಭತ್ತದ ಕಣಜ ಎಂಬ ಖ್ಯಾತಿ ಪಡೆದಿರುವ ಕೊಪ್ಪಳ (Koppal) ಜಿಲ್ಲೆಯ ರೈತರು ಇದೀಗ ಕಂಗಾಲಾಗುತ್ತಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಭತ್ತ (Rice) ನಾಟಿ ಮಾಡಿದ್ದ ರೈತರ ಮುಖದಲ್ಲಿ ಆತಂಕ ಮನೆ ಮಾಡಿದೆ. ನಾಟಿ ಮಾಡಿರುವ ಭತ್ತ, ಏಕಾಏಕಿ ಒಣಗಿ ಹೋಗುತ್ತಿದೆ. ಚೆನ್ನಾಗಿ ನೀರು ಹಾಯಿಸಿ, ಸಾಕಷ್ಟು ರಸಗೊಬ್ಬರ, ಕ್ರಿಮಿನಾಶಕ ಸಿಂಪಡಿಸಿದರೂ ಭತ್ತ ಬೆಳೆಯದೆ, ಒಣಗುತ್ತಿದೆ. ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಭತ್ತ ಬೆಳೆಗಾರರಿಗೆ, ತಮ್ಮ ಕೃಷಿ ಭೂಮಿಯಲ್ಲಿನ ಬದಲಾವಣೆ ನೋಡಿ ಶಾಕ್ ಆಗಿದೆ. ಏಕಂದರೆ, ಹಚ್ಚ ಹಸಿರಿನಂತೆ ನಳ ನಳಿಸಬೇಕಿದ್ದ ಭತ್ತ, ಇದೀಗ ಒಣಗಿ ನೆಲಕಚ್ಚುತ್ತಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿನ ರೈತರು ಭತ್ತವನ್ನು ವರ್ಷದಲ್ಲಿ ಎರಡು ಬೆಳೆಯನ್ನಾಗಿ ಬೆಳೆಯುತ್ತಾರೆ. ಆದರೆ, ಬಂಡಿಹರ್ಲಾಪುರ ಸೇರಿದಂತೆ ಅನೇಕ ಕಡೆ ನಾಟಿ ಮಾಡಿದ್ದ ಭತ್ತದ ಬೆಳೆ ಒಣಗಿ ಹೋಗುತ್ತಿದೆ. ಅನೇಕ ರೈತರು ಒಂದೂವರೆ ತಿಂಗಳ ಹಿಂದೆ ಭತ್ತದ ನಾಟಿ ಮಾಡಿದ್ದರು. ನಾಟಿ ಮಾಡಿದ 50-60 ದಿನಗಳಲ್ಲಿ ಭತ್ತ ಹಚ್ಚ ಹಸುರಿನಿಂದ ನಳನಳಿಸಬೇಕಿತ್ತು. ಆದರೆ, ನೂರಾರು ಎಕರೆ ಪ್ರದೇಶದಲ್ಲಿದ್ದ ಭತ್ತ ಹಸಿರಾಗಿ ಕಾಣುತ್ತಿಲ್ಲ, ಬದಲಾಗಿ ಒಣಗಿ ಹೋಗಿದೆ. ಭತ್ತದ ಬೆಳೆಯನ್ನು ಕಿತ್ತು ನೋಡಿದರೆ ಬೇರು ಕೊಳೆತಿದ್ದು, ಸಂಪೂರ್ಣವಾಗಿ ಹಾಳಾಗಿದೆ. ಇದು ರೈತರ ಆತಂಕವನ್ನು ಹೆಚ್ಚಿಸಿದೆ.
ಈಗಾಗಲೇ ಇದೇ ಭೂಮಿಯಲ್ಲಿ ರೈತರು ಒಂದನೇ ಬೆಳೆಯನ್ನಾಗಿ ಭತ್ತ ಬೆಳೆದಿದ್ದರು. ಇದೀಗ ಎರಡನೇ ಬೆಳೆಯನ್ನಾಗಿ ಕೂಡಾ ಭತ್ತ ಬೆಳೆಯಲು ನಾಟಿ ಮಾಡಿದ್ದರು. ಒಂದು ಎಕರೆಗೆ 20 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಸಾಕಷ್ಟು ಗೊಬ್ಬರ, ಕ್ರಿಮಿನಾಶಕ ಸಿಂಪಡಣೆ ಮಾಡಿದರೂ ಭತ್ತ ಒಣಗಿ ಹೋಗುತ್ತಿದೆ. ಹಾಗಂತ ನೀರಿನ ಕೊರತೆಯಿಲ್ಲ. ಈ ಬಾರಿ ತುಂಗಭದ್ರಾ ಜಲಾಶಯ ತುಂಬಿದ್ದರಿಂದ ನೀರಿನ ಸಮಸ್ಯೆ ಕೂಡ ಆಗಿಲ್ಲ. ಆದರೂ, ಭತ್ತದ ಪೈರು ಒಣಗುತ್ತಿದೆ.
ಇದನ್ನೂ ಓದಿ: ಸರ್ಕಾರಿ ಶಾಲೆಗೆ ಹೊಸ ರೂಪ ಕೊಟ್ಟ ಪಾಲಕರು ಮತ್ತು ಶಿಕ್ಷಕರು: ಖುಷಿ ಖಷಿಯಿಂದ ಶಾಲೆಗೆ ಬಂದ ಮಕ್ಕಳು
ಅನೇಕ ವರ್ಷಗಳಿಂದ ಭತ್ತವನ್ನೇ ಬೆಳೆಯುತ್ತಿರುವ ನಮಗೆ, ಈ ವರ್ಷ ಭತ್ತದ ಪೈರು ಒಣಗುತ್ತಿರುವದು ಯಾಕೆ ಅಂತ ತಿಳಿಯದಂತಾಗಿದೆ. ಕ್ರಿಮಿನಾಶಕಗಳಿಂದ ಏನಾದರೂ ಸಮಸ್ಯೆಯಾಗಿದೆಯಾ? ಬೇರೆ ಏನಾದ್ರು ಕಾರಣವಿದೆಯಾ? ಎಂಬುವುದು ಗೊತ್ತಾಗುತ್ತಿಲ್ಲ ಎಂದು ರೈತರು ಹೇಳಿದ್ದಾರೆ.

ಒಣಗಿದ ಭತ್ತ
ಕೃಷಿ ವಿಜ್ಞಾನಿಗಳು ತಿಳಿಸಿದ್ರು ಕಾರಣ
ಬಂಡಿಹರ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭತ್ತದ ಪೈರು ಒಣಗಲಿಕ್ಕೆ, ಮಣ್ಣು ಸವಳಾಗುತ್ತಿರುವದೇ ಪ್ರಮುಖ ಕಾರಣ. ನಿರಂತರವಾಗಿ ಒಂದೇ ಬೆಳೆಯನ್ನು ಬೆಳೆಯುತ್ತಿರುವುದು, ಅತಿ ಹೆಚ್ಚು ನೀರು ಮತ್ತು ರಾಸಾಯನಿಕ ಬಳಕೆ ಮಾಡವುದು ಕೂಡ ಒಣಗಲಿಕ್ಕೆ ಕಾರಣವಾಗಿದೆ. ಸಾವಯವ ಗೊಬ್ಬರವನ್ನು ಬಳಕೆ ಮಾಡದೆ ಇರುವುದರಿಂದ, ಭೂಮಿಯಲ್ಲಿನ ಫಲವತ್ತತೆ ಕಡಿಮೆಯಾಗಿ, ಅದು ಸವಳಾಗುತ್ತಿದೆ. ಇದೇ ಕಾರಣಕ್ಕೆ ಭತ್ತ ಒಣಗುತ್ತಿದೆ ಎಂದು ಎಂದು ಕೃಷಿ ವಿಜ್ಞಾನಿಗಳು ಮಾಹಿತಿ ನೀಡಿದರು.
ರೈತರು ಹೆಚ್ಚು ಸಾವಯವ ಗೊಬ್ಬರವನ್ನು ಬಳಸಬೇಕು, ರಾಸಾಯನಿಕವನ್ನು ಕಡಿಮೆ ಮಾಡಿ, ನಿರಂತರವಾಗಿ ಭತ್ತವನ್ನೆ ಬೆಳೆಯದೆ ಬೆಳೆಯಲ್ಲಿ ವೈವಿದ್ಯತೆಯನ್ನು ಮಾಡಿಕೊಳ್ಳುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕೊಪ್ಪಳ ಕೃಷಿ ವಿಜ್ಞಾನ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ರವಿ ಸಲಹೆ ನೀಡಿದ್ದಾರೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರವಾಗಿ ಭತ್ತವನ್ನೇ ಬೆಳೆಯುತ್ತಿರುವದರಿಂದ ಭೂಮಿಯಲ್ಲಿನ ಫಲವತ್ತತೆ ಕಡಿಮೆಯಾಗಿ, ಅದು ಸವಳಾಗುತ್ತಿದೆ. ಹೀಗಾಗಿ ರೈತರು ಬೆಳೆಯ ಬದಲಾವಣೆ ಮಾಡಬೇಕಾಗಿದೆ. ಇನ್ನೊಂದಡೆ ಭತ್ತದ ಪೈರು ಒಣಗಲು ಸವಳಾಗಿರುವದೇ ಪ್ರಮುಖ ಕಾರಣವಾ ಅಥವಾ ಕ್ರಿಮಿನಾಶಕ, ರಾಸಾಯನಿಕಗಳಿಂದಾಗುತ್ತಿದೆಯಾ ಅನ್ನೋದರ ಬಗ್ಗೆ ಕೂಡಾ ತನಿಖೆ ನಡೆಸಬೇಕಿದೆ. ಆದರೆ, ಭತ್ತದ ಬೆಳೆಗಾರರಿಗೆ ಭತ್ತದ ಪೈರು ಒಣಗುತ್ತಿರುವದು ಆತಂಕ ಹುಟ್ಟಿಸಿದ್ದು, ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ರೈತರ ನೆರವಿಗೆ ಬರಬೇಕಿದೆ.