ಮಳೆಗಾಲ ಬಂದ್ರು ತಪ್ಪುತ್ತಿಲ್ಲಾ ಕುಡಿಯುವ ನೀರಿನ ತಾಪತ್ರಯ; ಬಿಂದಿಗೆ ನೀರಿಗಾಗಿ ಗ್ರಾಮಸ್ಥರ ಪರದಾಟ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 08, 2024 | 5:07 PM

ಬೇಸಿಗೆ ಕಾಲದಲ್ಲಿ ಉತ್ತರ ಕರ್ನಾಟಕದ ಅನೇಕ ಭಾಗದಲ್ಲಿ ಜನರು ಹನಿ ನೀರಿಗಾಗಿ ಪರದಾಡುತ್ತಾರೆ. ಹೀಗಾಗಿ ಅಧಿಕಾರಿಗಳು, ಬೇಸಿಗೆಯಲ್ಲಿ ಕೆಲವಡೇ ನೀರಿನ ವ್ಯವಸ್ಥೆ ಕೂಡ ಮಾಡುತ್ತಾರೆ. ಸದ್ಯ ಮಳೆಗಾಲವಿದ್ದು, ರಾಜ್ಯದ ಅನೇಕ ಕಡೆ ವರುಣದೇವ ಆರ್ಭಟಿಸುತ್ತಿದ್ದಾನೆ. ಆದ್ರೆ, ಮಳೆಗಾಲದಲ್ಲಿಯೂ ಕೂಡಾ ಕೊಪ್ಪಳ ಜಿಲ್ಲೆಯಲ್ಲಿ ಬಹುತೇಕ ಗ್ರಾಮಗಳಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಮಳೆಗಾಲದಲ್ಲಿಯೂ ಜನರು ಬಿಂದಿಗೆ ಕುಡಿಯುವ ನೀರಿಗಾಗಿ ತಾಪತ್ರಯ ಪಡುತ್ತಿದ್ದಾರೆ.

ಮಳೆಗಾಲ ಬಂದ್ರು ತಪ್ಪುತ್ತಿಲ್ಲಾ ಕುಡಿಯುವ ನೀರಿನ ತಾಪತ್ರಯ; ಬಿಂದಿಗೆ ನೀರಿಗಾಗಿ ಗ್ರಾಮಸ್ಥರ ಪರದಾಟ
ಮಳೆಗಾಲ ಬಂದ್ರು ತಪ್ಪುತ್ತಿಲ್ಲಾ ಕುಡಿಯುವ ನೀರಿನ ತಾಪತ್ರಯ
Follow us on

ಕೊಪ್ಪಳ, ಆ.08: ಸದ್ಯ ಮಳೆಗಾಲವಿದ್ದು, ರಾಜ್ಯದ ಅನೇಕ ಕಡೆ ವರುಣದೇವ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಆದ್ರೆ, ದುರ್ದೈವದ ಸಂಗತಿಯೆಂದರೆ ಇಂತಹ ಮಳೆಗಾಲದಲ್ಲಿಯೂ ಕೂಡ ಕೊಪ್ಪಳ(Koppal) ತಾಲೂಕಿನ ಹಿರೆಬೊಮ್ಮನಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಹೌದು, ಹಿರೆಬೊಮ್ಮನಾಳ ಗ್ರಾಮ, ಕೊಪ್ಪಳ ತಾಲೂಕಿನಲ್ಲಿದ್ದರು ಕೂಡಾ, ಈ ಗ್ರಾಮ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಈ ಗ್ರಾಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಮನೆಗಳಿದ್ದು, ಐದು ಸಾವಿರಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಆದ್ರೆ, ಈ ಗ್ರಾಮದಲ್ಲಿ ಮಳೆಗಾಲದಲ್ಲಿಯೇ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಮಕ್ಕಳನ್ನು ಶಾಲೆ ಬಿಡಿಸಿ, ನೀರು ತುಂಬಲು ಕಳುಹಿಸುವ ಪೋಷಕರು

ಹೌದು, ಹಿರೆಬೊಮ್ಮನಾಳ ಗ್ರಾಮದ ಜನರು ಬಿಂದಿಗೆ ನೀರಿಗಾಗಿ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ಮನೆ ಮನೆಗೆ ನೀರು ಪೂರೈಕೆ ಮಾಡಲು ನಳದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದ್ರೆ, ಅವುಗಳಲ್ಲಿ ನೀರು ಬರುತ್ತಿಲ್ಲ. ಹೀಗಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮದ ಜನರು, ಸುತ್ತಮುತ್ತಲಿನ ಕೃಷಿ ಜಮೀನುಗಳಿಗೆ ಹೋಗಿ, ಅಲ್ಲಿ ರೈತರಿಗೆ ಮನವಿ ಮಾಡಿಕೊಂಡು ನೀರು ತುಂಬಿಕೊಂಡು ಬರುತ್ತಿದ್ದಾರೆ. ವಿದ್ಯುತ್ ಇದ್ದಾಗ, ಕೃಷಿ ಜಮೀನಿಗೆ ಹೋಗಿ, ಕೆಸರು ಗುಂಡಿಯಲ್ಲಿ ಹೋಗಿ, ಬಿಂದಿಗೆ ನೀರು ತುಂಬಿಕೊಂಡು ಬರುತ್ತಿದ್ದಾರೆ. ಅನೇಕರು ನೀರು ತರಲು ಹೋದಾಗ ಬಿದ್ದು ಗಾಯಗೊಂಡಿದ್ದಾರೆ. ಇನ್ನು ಅನೇಕರು ನೀರು ತುಂಬಲಿಕ್ಕಾಗಿಯೇ ಕೂಲಿ ಕೆಲಸವನ್ನು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಕೆಲವರು ಮಕ್ಕಳನ್ನು ಶಾಲೆಗೆ ಬಿಡಿಸಿ, ನೀರು ತುಂಬಲು ಕಳುಹಿಸುತ್ತಿದ್ದಾರೆ.

ಇದನ್ನೂ ಓದಿ:ಕೊಪ್ಪಳ: ಕೊತ್ತಂಬರಿ ಸೊಪ್ಪಿನ ಬೆಲೆ ಕುಸಿತ, ಟ್ರ್ಯಾಕ್ಟರ್ ಮೂಲಕ ಬೆಳೆ ನಾಶ ಮಾಡುತ್ತಿರುವ ರೈತರು

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ ಆರೋಪ

ಇನ್ನು ಹಿರೆಬೊಮ್ಮನಾಳ ಗ್ರಾಮದಲ್ಲಿ ಎದುರಾದ ಕುಡಿಯುವ ನೀರಿಗೆ ತತ್ವಾರಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಹೌದು, ಗ್ರಾಮಕ್ಕೆ ಕುಡಿಯುವ ನೀರನ್ನು ಪೂರೈಸಲು ಅನೇಕ ಕಡೆ ಕೊಳವೆಬಾವಿಗಳನ್ನು ಕೊರೆಸಬೇಕಾಗಿದೆ. ಆದ್ರೆ, ಕಳೆದ ಕೆಲ ವರ್ಷಗಳಿಂದ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸುವ ಕೆಲಸವಾಗಿಲ್ಲವಂತೆ. ಈ ಹಿಂದೆ ಕೊರೆಸಿದ್ದ ಬೋರವೆಲ್​ಗಳು ಬತ್ತಿ ಹೋಗಿವೆ. ಹೊಸ ಬೋರವೆಲ್ ಹಾಕಿಸದೇ ಇರುವುದರಿಂದ ಗ್ರಾಮಕ್ಕೆ ನೀರು ಸಿಗುತ್ತಿಲ್ಲವಂತೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ಮನೆಗೆ ಗಂಗೆ ಯೋಜನೆಯಲ್ಲಿ ನಲ್ಲಿಗಳನ್ನು ಹಾಕಿದರೂ ಕೂಡ ನೀರಿನ ಸಂಪರ್ಕ ಇಲ್ಲದೇ ಇರೋದರಿಂದ ನಳದಲ್ಲಿ ನೀರು ಬರುತ್ತಿಲ್ಲ.

ಬೇಸಿಗೆಯಲ್ಲಿ ನೀರಿಗಾಗಿ ಸಂಕಷ್ಟ ಪಟ್ಟಿದ್ದೇವೆ. ಆದ್ರೆ, ಮಳೆಗಾಲದಲ್ಲಿ ಕೂಡ ನೀರಿಗೆ ಪರದಾಡುವಂತಾಗಿದೆ. ಇದಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾರಣ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ನಮ್ಮ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮದ ಜನರು ಆಗ್ರಹಿಸಿದ್ದಾರೆ. ಮಳೆಗಾಲದಲ್ಲಿಯೇ ಕುಡಿಯುವ ನೀರಿಗಾಗಿ ಗ್ರಾಮದ ಜನರು ಪರದಾಡುತ್ತಿದ್ದರೂ ಯಾವೊಬ್ಬ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಜನರ ಸಮಸ್ಯ ಕೇಳುವ ಗೋಜಿಗೆ ಹೋಗಿಲ್ಲ. ಅಧಿಕಾರಿಗಳಿಗೆ ಹತ್ತಾರು ಬಾರಿ ಗ್ರಾಮದ ಜನರು ಮನವಿ ಮಾಡಿದರೂ ಡೋಂಟ್​​ ಕೇರ್ ಅಂತಿದ್ದಾರೆ. ಇನ್ನಾದರೂ ಅಧಿಕಾರಿಗಳು, ಗ್ರಾಮದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ