ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಾದ ಹೂಳು; ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಹಿಂದೇಟು

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 22, 2024 | 7:13 PM

ತುಂಗಭದ್ರಾ ಜಲಾಶಯ. ಈ ಜಲಾಶಯದ ನೀರಿನ ಮೇಲೆಯೇ ಮೂರು ರಾಜ್ಯಗಳ ಎಂಟು ಜಿಲ್ಲೆಯ ಲಕ್ಷಾಂತರ ಜನರ ಬದುಕು ನಿಂತಿದೆ. ಡ್ಯಾಮ್ ತುಂಬಿದ್ರೆ ಅವರ ಸಂತಸ ಇಮ್ಮಡಿಯಾಗುತ್ತದೆ. ಇದರ ನಡುವೆ ತುಂಗಭದ್ರಾ ಜಲಾಶಯದಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿದೆ. ಇದರ ಜೊತೆಗೆ ಜಲಾಶಯದ ಆಯಸ್ಸು ಇನ್ನೂ ಕೇವಲ ಮೂವತ್ತು ವರ್ಷ ಮಾತ್ರ ಎಂದು ತಜ್ಞರು ಹೇಳುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ಸರ್ಕಾರ ಮಾತ್ರ ಸಮಾನಂತರ ಜಲಾಶಯ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿಲ್ಲ.

ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಾದ ಹೂಳು; ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಹಿಂದೇಟು
ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಹಿಂದೇಟು
Follow us on

ಕೊಪ್ಪಳ, ಆ.22: ಜಿಲ್ಲೆಯ ಮುನಿರಾಬಾದ್(Munirabad) ಬಳಿ, ತುಂಗಭದ್ರಾ ನದಿಗೆ ಅಡ್ಡಲಾಗಿ ಎಪ್ಪತ್ತು ವರ್ಷಗಳ ಹಿಂದೆಯೇ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಈ ಡ್ಯಾಂ(Dam)ನಿಂದ ಕರ್ನಾಟಕದ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಯ ಜನರಿಗೆ ಹೆಚ್ಚಿನ ಲಾಭವಾಗಿದೆ. ಕುಡಿಯುವ ನೀರು ಮತ್ತು ಕೃಷಿಗೆ ಈ ಡ್ಯಾಂ ಆಧಾರವಾಗಿದೆ. ಜೊತೆಗೆ ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಅನೇಕ ಜಿಲ್ಲೆಯ ರೈತರು ಈ ಡ್ಯಾಂ ನೀರಿನ ಮೇಲೆ ಅವಲಂಭಿತರಾಗಿದ್ದಾರೆ. ಆದ್ರೆ, 133 ಟಿಎಂಸಿ ನೀರು ಸಾಮಾರ್ಥ್ಯದ ತುಂಗಭದ್ರಾ ಡ್ಯಾಂ ನ ಪ್ರಸ್ತುತ ಸಂಗ್ರಹ ಸಾಮಾರ್ಥ್ಯ ಕೇವಲ 105 ಟಿಎಂಸಿ ಮಾತ್ರವಿದೆ.

ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಾದ ಹೂಳು

ಕಳೆದ ವರ್ಷ ಬರಗಾಲದಿಂದ ನೀರು ಸಂಗ್ರಹವಾಗಿಲ್ಲ. ಈ ವರ್ಷ ಜಲಾಶಯ ತುಂಬಿದರೂ ಕೂಡ 19 ನೇ ಕ್ರಸ್ಟಗೇಟ್ ಕಿತ್ತುಕೊಂಡು ಹೋಗಿದ್ದರಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿದೆ. ಆದ್ರೆ, ಈ ಹಿಂದಿನ ವರ್ಷಗಳಲ್ಲಿ ಕೂಡ ಬಾರಿ ಮಳೆ ಬಂದಾಗ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ಹರಿದುಹೋಗಿದೆ. ನೀರು ಇದ್ದರೂ ಕೂಡ ಅದನ್ನು ಸಂಗ್ರಹಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ, ಡ್ಯಾಂ ನಲ್ಲಿ ತುಂಬಿರುವ ಹೂಳು. ಹೌದು, ನೀರಾವರಿ ಇಲಾಖೆಯ ತಜ್ಞರು ನೀಡಿರುವ ವರದಿ ಪ್ರಕಾರ, ತುಂಗಭದ್ರಾ ಡ್ಯಾಂ ನಲ್ಲಿ ಪ್ರತಿ ವರ್ಷ ಸರಾಸರಿ 0.5 ಟಿಎಂಸಿಯಷ್ಟು ಹೂಳು ಸಂಗ್ರಹವಾಗುತ್ತಿದೆಯಂತೆ. ಅಂದರೆ ಜಲಾಶಯ ನಿರ್ಮಾಣವಾಗಿ ಎಪ್ಪತ್ತು ವರ್ಷಗಳು ಕಳೆದಿದ್ದು, ಇಲ್ಲಿವರೆಗೆ ಸರಿಸುಮಾರು 33 ಟಿಎಂಸಿ ನೀರು ಸಂಗ್ರಹವಾಗುವಷ್ಟು ಹೂಳು ತುಂಬಿದೆ.

ಇದನ್ನೂ ಓದಿ:ತುಂಗಭದ್ರಾ ಜಲಾಶಯಕ್ಕೆ ಬಂದ ಸ್ಥಿತಿ ಬಸವಸಾಗರ ಡ್ಯಾಂಗೂ ಬರುತ್ತಾ? ಅಸಲಿ ಸತ್ಯ ಬಿಚ್ಚಿಟ್ಟ ನೀರಾವರಿ ತಜ್ಞ

ಜಾರಿಯಾಗದ ಸಮಾನಾಂತರ ಜಲಾಶಯ ನಿರ್ಮಾಣ

ಇದರಿಂದ ಹೆಚ್ಚು ಮಳೆಯಾದಾಗ ಕೂಡ ಡ್ಯಾಂ ನಲ್ಲಿ ನೀರು ಸಂಗ್ರಹ ಮಾಡಿಟ್ಟುಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇನ್ನು ಅನೇಕ ಪಟ್ಟಣಗಳಿಗೆ, ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಕಲ್ಪಿಸುವ ಉದ್ದೇಶಕ್ಕೆ ಹಿನ್ನಡೆಯಾಗುತ್ತಿದೆ. ಇನ್ನು ದೊಡ್ಡ ಮಟ್ಟದಲ್ಲಿ ತುಂಬಿರುವ ಹೂಳನ್ನು ತೆಗಯುವುದು ಕಷ್ಟ ಎಂದು ತಜ್ಞರು ಹೇಳಿದ್ದರಿಂದ ಸರ್ಕಾರ ಹೂಳೆತ್ತುವ ಯೋಜನೆಯನ್ನು ಕೈಬಿಟ್ಟಿದ್ದು, ಪರ್ಯಾಯವಾಗಿ ವ್ಯರ್ಥವಾಗಿ ಹೋಗುವ ನೀರನ್ನು ಹಿಡಿದಿಡಲು ತಜ್ಞರ ಸಮಿತಿ ನೀಡಿರುವ ವರದಿ ಪ್ರಕಾರ, ಸಮಾನಾಂತರ ಜಲಾಶಯ ನಿರ್ಮಾಣ ಮಾಡಬೇಕು ಎಂದು ಹೇಳಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುವಂತೆ ಸಲಹೆ ನೀಡಿದೆ. ಆದ್ರೆ, ಇದು ಜಾರಿಯಾಗುತ್ತಿಲ್ಲ.

ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳನ್ನು ತೆಗೆಯಲಿಕ್ಕಾಗದೇ ಇರುವುದರಿಂದ, 33 ಟಿಎಂಸಿ ನೀರು ಸಂಗ್ರಹವಾಗುವಷ್ಟು ನವಲಿ ಬಳಿ ಸಮಾನಂತರ ಜಲಾಶಯ ನಿರ್ಮಾಣ ಮಾಡಬೇಕು. ಆ ಮೂಲಕ ವ್ಯರ್ಥವಾಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೇ ಈ ಯೋಜನೆಗೆ ಡಿಪಿಎಆರ್ ಕೂಡಾ ಸಿದ್ದವಾಗಿದ್ದು, ಸಾವಿರ ಕೋಟಿ ಹಣವನ್ನು ಈ ಯೋಜನೆಗೆ ಇಡಲಾಗಿತ್ತು. ಆದ್ರೆ, ನಂತರ ಅದು ಕಾರ್ಯರೂಪಕ್ಕೆ ಬರಲಿಲ್ಲ.

ಇದನ್ನೂ ಓದಿ:ತುಂಗಭದ್ರಾ ಜಲಾಶಯ ಗೇಟ್‌‌ ದುರಸ್ತಿ ಸಂಪೂರ್ಣ ಮುಕ್ತಾಯ: ಹನಿ ನೀರು ಹೊರಹೋಗದಂತೆ ತಡೆಯುವಲ್ಲಿ ಸಿಬ್ಬಂದಿ ಯಶಸ್ವಿ

ಇನ್ನು ಈ ಯೋಜನೆ ಜಾರಿಯಾಗಬೇಕಾದರೆ ನೆರೆಯ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಒಪ್ಪಿಗೆ ಕೂಡ ಬೇಕಾಗಿದೆ. ಈ ನೀರಿನ ಮೇಲೆ ಮೂರು ರಾಜ್ಯಗಳಿಗೆ ಹಕ್ಕಿದೆ. ಹೀಗಾಗಿ ಜಲಸಂಪನ್ಮೂಲ ಸಚಿವರು ಆಗಿರುವ ಉಪ ಮಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎರಡು ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ನೀರಾವರಿ ಸಚಿವರಿಗೆ ಈ ಬಗ್ಗೆ ಪತ್ರ ಕೂಡ ಬರೆದಿದ್ದು, ಎರಡು ರಾಜ್ಯದ ಸಚಿವರು ಮತ್ತು ಸಿಎಂಗಳ ಜೊತೆ ಈ ಬಗ್ಗೆ ಚರ್ಚಿಸಿ, ಆದಷ್ಟು ಬೇಗನೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡ್ತೇವೆ ಎಂದು ಅನೇಕ ತಿಂಗಳ ಹಿಂದೆಯೇ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದರು.

ರಾಜ್ಯ ಸರ್ಕಾರ, ಸಮಾನಂತರ ಜಲಾಶಯ ನಿರ್ಮಾಣಕ್ಕೆ ಒಲವು ತೋರಿಸುವ ಮಾತುಗಳನ್ನು ಕಳೆದ ಒಂದು ವರ್ಷದಿಂದ ಹೇಳುತ್ತಲೇ ಬಂದಿದೆ. ಹಿಂದಿನ ಸರ್ಕಾರ ಕೂಡ ಸಮಾನಂತರ ಜಲಾಶಯ ಆದಷ್ಟು ಬೇಗನೆ ನಿರ್ಮಾಣ ಮಾಡುವ ಮಾತುಗಳನ್ನು ಹೇಳಿತ್ತು. ಆದ್ರೆ, ಕಾರ್ಯರೂಪಕ್ಕೆ ಬರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಕೂಡಾ ಈ ಯೋಜನೆ ಬಗ್ಗೆ ಮಾತನಾಡುತ್ತಿದೆ. ಆದ್ರೆ, ಈ ಸರ್ಕಾರದ ಅವಧಿಯಲ್ಲಿ ಕಾರ್ಯರೂಪಕ್ಕೆ ಬರುತ್ತಾ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ