ಕೊಪ್ಪಳ, (ಆಗಸ್ಟ್ 26): ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆಯ ಅಧ್ಯಕ್ಷ್ಯ ಉಪಾಧ್ಯಕ್ಷ ಚುನಾವಣೆಯಲ್ಲಿ ಮತ್ತೊಮ್ಮೆ ಸಾಕ್ಷಿಯಾಗಿದೆ. ಹೌದು.. ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಸದಸ್ಯ, ಪಕ್ಷದಲ್ಲಿ ನಾಯಕರ ಬಣ ಬಡಿದಾಟದಿಂದ ಬಿಜೆಪಿ ಸೇರಿ ಇದೀಗ ಗಂಗಾವತಿ ನಗರಸಭೆ ಅಧ್ಯಕ್ಷ ಕುರ್ಚಿ ಅಲಂಕರಿಸಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎನ್ನುವ ಹಣೆಪಟ್ಟಿ ಮಧ್ಯ ಕೇಸರಿ ಪಡೆ ಸದಸ್ಯರು, ತಮ್ಮ ಪಕ್ಷಕ್ಕೆ ಬಂದ ಮುಸ್ಲಿಂ ಸಮುದಾಯದ ಸದಸ್ಯನನ್ನು ಕರೆದುಕೊಂಡು ಹೋಗಿ ನಗರಸಭೆ ಅಧ್ಯಕ್ಷ ಕುರ್ಚಿ ಕೂರಿಸಿದ್ದಾರೆ. ಇದರೊಂದಿಗೆ ಗಂಗಾವತಿ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿದಿದೆ. ಇನ್ನೊಂದೆಡೆ ಬಹುಮತ ಇದ್ದರೂ ಸಹ ಪಕ್ಷದಲ್ಲಿನ ನಾಯಕ ಬಣ ಬಡಿದಾಟದಿಂದ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ಗೆ ಭಾರೀ ಮುಖಭಂಗವಾಗಿದೆ.
ರಾಜಕೀಯದಲ್ಲಿ ಯಾರು ಶತ್ರುಗಳಲ್ಲ ಯಾರು ಮಿತ್ರರೂ ಅಲ್ಲ. ಅಧಿಕಾರಕ್ಕಾಗಿ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯೇ ಸಾಕ್ಷಿ. ಕಾಂಗ್ರೆಸ್ ತೊರೆದು ಬಂದ ಮುಸ್ಲಿಂ ಸಮುದಾಯದ ಸದಸ್ಯನನ್ನು ಬಿಜೆಪಿಗರು ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದಾರೆ. ಈ ಮೂಲಕ ಗಂಗಾವತಿ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆಯ ಎರಡನೇ ಅವದಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯ ಚುನಾವಣೆ ಇಂದು ನಡೆಯಿತು. ಗಂಗಾವತಿ ನಗರಸಭೆ ಕಚೇರಿಯಲ್ಲಿ ಇಂದು ಮುಂಜಾನೆ ಹನ್ನೊಂದು ಗಂಟೆಯಿಂದ ಚುನಾವಣೆ ಪ್ರಕ್ರಿಯೇ ಆರಂಭವಾಗಿತ್ತು. ಇನ್ನು ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಒಟ್ಟು ಮೂವತ್ತೈದು ಸದಸ್ಯ ಬಲದ ಗಂಗಾವತಿ ನಗರಸಭೆಯಲ್ಲಿ ಹದಿನೇಳು ಜನ ಕಾಂಗ್ರೆಸ್ ನಿಂದ ಗೆದ್ದಿದ್ದರೆ, ಹದಿನಾಲ್ಕು ಜನ ಬಿಜೆಪಿಯಿಂದ ಗೆದಿದ್ದರು. ಇಬ್ಬರು ಜೆಡಿಎಸ್ ಮತ್ತು ಇಬ್ಬರು ಪಕ್ಷೇತರ ಸಧಸ್ಯರು ಗೆದ್ದಿದ್ದರು. ಇನ್ನು ಮುಂಜಾನೆ ಹನ್ನೊಂದು ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಖಾಸಿಂಸಾಬ್, ಉಪಾಧ್ಯಕ್ಷ ಸ್ಥಾನಕ್ಕೆ ಹುಲಿಗೆಮ್ಮ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿಯಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸುತ್ತಾರೆ ಅನ್ನೋ ತೀರ್ವ ಕುತೂಹಲ ಮೂಡಿತ್ತು. ಆದ್ರೆ ಇಂದು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಮೌಲಾಸಾಬ್ ನಾಮಪತ್ರ ಸಲ್ಲಿಸಿದ್ರೆ, ಉಪಾಧ್ಯಕ್ಷ ಸ್ಥಾನಕ್ಕೆ ಪಾರ್ವತೆಮ್ಮ ನಾಮಪತ್ರ ಸಲ್ಲಿಸಿದ್ದರು. ನಂತರ ನಡದೆ ಮತದಾನದಲ್ಲಿ, ಬಿಜೆಪಿಯಿಂದ ಸ್ಪರ್ಧಿಸಿದ್ದ ಮೌಲಾಸಾಬ್ ಶಾಸಕರ ಮತ ಸೇರಿದಂತೆ ಒಟ್ಟು 28 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದ್ರೆ, ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಖಾಸಿಂಸಾಬ್ ಕೇವಲ ಎಂಟು ಮತಗಳನ್ನು ಪಡೆದಿ ಪರಾಭಗೊಂಡರು. ಉಪಾಧ್ಯಕ್ಷರಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪಾರ್ವತೆಮ್ಮ ಕೂಡಾ ಇಪ್ಪತ್ತೆಂಟು ಮತ ಪಡೆದು ಆಯ್ಕೆಯಾದ್ರೆ, ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಹುಲಿಗೆಮ್ಮ ಕೇವಲ ಎಂಟು ಮತಗಳನ್ನು ಪಡೆದು ಸೋಲುಕಂಡರು. ಹದಿನೇಳು ಸದಸ್ಯರು ಇದ್ದರೂ ಸಹ ಕಾಂಗ್ರೆಸ್ ಗೆ ಬಿದಿದ್ದು ಕೇವಲ ಎಂಟು ಮತಗಳು ಮಾತ್ರ. ಇದಕ್ಕೆ ಕಾರಣ, ಉಳಿದ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರಿದ್ದು.
ಇನ್ನು ಗಂಗಾವತಿ ನಗರಸಭೆ ಇತಿಹಾಸದಲ್ಲಿ ಮೊದಲ ಬಾರಿಗ ಬಿಜೆಪಿ ಅಧಿಕಾರದ ಗದ್ದುಗೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಆಪರೇಷನ್ ಕಮಲ. ಹೌದು ಗಂಗಾವತಿ ಕ್ಷೇತ್ರದಿಂದ ಕೆ ಆರ್ ಪಿ ಪಿ ಪಕ್ಷದಿಂದ ಸ್ಪರ್ಧಿಸಿದ್ದ ಜನಾರ್ದನ ರೆಡ್ಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಕಾಂಗ್ರೆಸ್ ನ ಒಂಬತ್ತು ಸದಸ್ಯರನ್ನು ತಮ್ಮತ್ತ ಸೆಳೆದುಕೊಂಡಿದ್ದರು. ಜನಾರ್ಧನ ರೆಡ್ಡಿ ಬಿಜೆಪಿ ಸೇರಿದ ನಂತರ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದವರು ಕಾಂಗ್ರೆಸ್ ಗೆ ಮರಳದೆ ರೆಡ್ಡಿ ಜೊತೆಗೆ ಗುರುತಿಸಿಕೊಂಡಿದ್ದರು.
ಹೀಗಾಗಿ ತನ್ನನ್ನು ನಂಬಿ ಬಂದಿದ್ದ ಅಲ್ಪಸಂಖ್ಯಾತ ಸಮುದಾಯದ ಮೌಲಾಸಾಬ್ ಗೆ ನಗರಸಭೆ ಅಧ್ಯಕ್ಷ ಸ್ಥಾನ ಕೊಡಿಸುವಲ್ಲಿ ಶಾಸಕ ಜನಾರ್ಧನ ರೆಡ್ಡಿ ಯಶಸ್ವಿಯಾಗಿದ್ದಾರೆ. ಇನ್ನು ಬಹುಮತ ಇರದೇ ಇದ್ದರೂ ಕೂಡಾ, ಕಾಂಗ್ರೆಸ್ ನಿಂದ ವಲಸೆ ಬಂದ ಒಂಬತ್ತು ಸದಸ್ಯರು, ಪಕ್ಷೇತರ, ಜೆಡಿಎಸ್ ನ ಇಬ್ಬರು ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಮೊದಲ ಬಾರಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಗಂಗಾವತಿ ನಗರಸಭೆ ಇತಿಹಾಸದಲ್ಲಿ ಇಲ್ಲಿವರಗೆ ಕಾಂಗ್ರೆಸ್ ಅಧಿಕಾರ ನಡೆಸಿಕೊಂಡು ಬಂದಿತ್ತು. ಕಳೆದ ಅವಧಿಯಲ್ಲಿ ಕೂಡಾ ಕಾಂಗ್ರೆಸ್ ಪಕ್ಷೇತರ ಸಧಸ್ಯರ ಬೆಂಬಲದೊಂದಿಗೆ ಸರಳ ಬಹುಮತ ಮೂಲಕ ಅಧಿಕಾರ ಪಡೆದಿತ್ತು. ಇನ್ನು ಈ ಬಾರಿ ಕೂಡಾ ಕಾಂಗ್ರೆಸ್ ಮನಸು ಮಾಡಿದ್ರೆ ಅಧಿಕಾರ ಚುಕ್ಕಾಣಿ ಹಿಡಿಯಬಹುದಿತ್ತು. ಆದ್ರೆ ಗಂಗಾವತಿಯಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಮಾಜಿ ಸಚಿವ ಇಕ್ಬಾಳ್ ಅನ್ಸಾರಿ ಹಾಗೂ ಮಾಜಿ ಪರಿಷತ್ ಸದಸ್ಯ ಶ್ರೀನಾಥ್ ಇಬ್ಬರು ಒಂದೇ ಪಕ್ಷದರಲ್ಲಿದ್ದರೂ ಸಹ ನಾನೊಂದು ತೀರ ನೀನೊಂದು ತೀರ ಎನ್ನುವಂತಿದ್ದಾರೆ. ಹೀಗಾಗಿ ತಾಲೂಕು ಮತ್ತು ಜಿಲ್ಲೆಯ ಯಾವೊಬ್ಬ ಕಾಂಗ್ರೆಸ್ ನಾಯಕರು ಅಧಿಕಾರ ಹಿಡಿಯಲು ಸಣ್ಣ ಪ್ರಯತ್ನವನ್ನು ಸಹ ಮಾಡದೇ, ಸುಲಭವಾಗಿ ಸೋಲನ್ನೊಪ್ಪಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯನ್ನು ಬಿಜೆಪಿ ನಾಯಕರು ಅಧ್ಯಕ್ಷ ಮಾಡಿ, ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದ್ರೆ, ಇತ್ತ ಕಾಂಗ್ರೆಸ್ ನಾಯಕರ ಗುದ್ದಾಟದಿಂದ ಅಧಿಕಾರ ಕಳೆದುಕೊಂಡಿದೆ. ಆದ್ರೆ ಅಭಿವೃದ್ದಿಯಿಂದ ಹಿಂದುಳಿದಿರುವ ಗಂಗಾವತಿ, ಇನ್ನಾದ್ರು ಅಭಿವೃದ್ದಿಯಾಗುತ್ತಾ ಅನ್ನೋದ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:01 pm, Mon, 26 August 24