ತುಂಗಭದ್ರಾ ಡ್ಯಾಂ ಒಳಹರಿವು ಹೆಚ್ಚಳ, ಗೇಟ್ ದುರಸ್ತಿ ನಂತರ ಸಂಗ್ರಹವಾಯ್ತು 7 ಟಿಎಂಸಿಗೂ ಹೆಚ್ಚು ನೀರು

|

Updated on: Aug 22, 2024 | 9:48 AM

ತುಂಗಭದ್ರಾ ಡ್ಯಾಂ ಗೇಟ್ ಮುರಿದ ಕಾರಣ ಬೇಸರದಲ್ಲಿದ್ದ ಕಲ್ಯಾಣ ಕರ್ನಾಟಕದ, ಆಂಧ್ರಪ್ರದೇಶ ಮತ್ತು ತೆಲಂಗಾಣದ ರೈತರಿಗೆ ಇದೀಗ ಶುಭ ಸುದ್ದಿ ಬಂದಿದೆ. ತುಂಡಾಗಿದ್ದ 19ನೇ ಕ್ರೆಸ್ಟ್ ಗೇಟ್ ಜಾಗಕ್ಕೆ ಸ್ಟಾಪ್​ಲಾಗ್ ಅಳವಡಿಸಿದ ನಂತರದ ದಿನಗಳಲ್ಲಿ ಜಲಾಶಯದಲ್ಲಿ ಸುಮಾರು 8 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು ಉತ್ತಮವಾಗಿದೆ ಎಂದು ಡ್ಯಾಂ ಮಂಡಳಿ ತಿಳಿಸಿದೆ.

ತುಂಗಭದ್ರಾ ಡ್ಯಾಂ ಒಳಹರಿವು ಹೆಚ್ಚಳ, ಗೇಟ್ ದುರಸ್ತಿ ನಂತರ ಸಂಗ್ರಹವಾಯ್ತು 7 ಟಿಎಂಸಿಗೂ ಹೆಚ್ಚು ನೀರು
ತುಂಗಭದ್ರಾ ಡ್ಯಾಂ
Follow us on

ಹೊಸಪೇಟೆ, ಆಗಸ್ಟ್​ 22: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಅಣೆಕಟ್ಟೆಯಲ್ಲಿ ಕ್ರೆಸ್ಟ್ ಗೇಟ್ ದುರಸ್ತಿ ಮಾಡಿದ ನಂತರ, ಕಳೆದ ಮೂರು ದಿನಗಳ ಅವಧಿಯಲ್ಲಿ 7 ಟಿಎಂಸಿ ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಖ್ಯಾತ ಅಣೆಕಟ್ಟೆ ತಜ್ಞ, ನಿವೃತ್ತ ಎಂಜಿನಿಯರ್ ಕನ್ನಯ್ಯ ನಾಯ್ಡು ನೇತೃತ್ವದ ತಜ್ಞರ ತಂಡ ಕ್ರೆಸ್ಟ್ ಗೇಟ್ ಸಂಖ್ಯೆ 19ಕ್ಕೆ ಐದು ಸ್ಟಾಪ್‌ಲಾಗ್‌ಗಳನ್ನು ಯಶಸ್ವಿಯಾಗಿ ಅಳವಡಿಸಿದ್ದರು. ಇದಾದ, ಎರಡು ವಾರಗಳಲ್ಲಿ ಅಣೆಕಟ್ಟೆ ಮತ್ತೆ ಭರ್ತಿಯಾಗಲಿದೆ ಎಂದು ಅವರು ಭರವಸೆ ನೀಡಿದ್ದರು.

ಡ್ಯಾಂನ ನೀರಿನ ಸಂಗ್ರಹ ಬುಧವಾರ 78 ಟಿಎಂಸಿ ಅಡಿ ಇತ್ತು. ಆಗಸ್ಟ್‌ ಮೊದಲ ವಾರದಲ್ಲಿ ಸ್ಟಾಪ್‌ಲಾಗ್ ಗೇಟ್‌ ಅಳವಡಿಸುವ ಕಾರ್ಯ ಪೂರ್ಣಗೊಂಡಾಗ ಅಣೆಕಟ್ಟಿನ ಸಂಗ್ರಹದ ಮಟ್ಟ 70 ಟಿಎಂಸಿ ಅಡಿ ಇತ್ತು.

ಮೂರು ರಾಜ್ಯಗಳ ರೈತರ ಪ್ರಾರ್ಥನೆ ಮತ್ತು ಕ್ರೆಸ್ಟ್ ಗೇಟ್‌ಗೆ ಸ್ಟಾಪ್‌ಲಾಗ್‌ಗಳನ್ನು ಅಳವಡಿಸುವ ಕಠಿಣ ಪರಿಶ್ರಮದ ಕಾರಣ ತುಂಗಭದ್ರಾ ಅಣೆಕಟ್ಟಿನಲ್ಲಿ 7 ಟಿಎಂಸಿ ಅಡಿಗೂ ಹೆಚ್ಚು ನೀರನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಟಿಬಿ ಡ್ಯಾಂ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ನೀರಿನ ಒಳಹರಿವು 36,000 ಕ್ಯೂಸೆಕ್‌ಗಿಂತ ಹೆಚ್ಚಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗಿರುವುದು ಜಲಾಶಯಕ್ಕೆ ಒಳಹರಿವು ಹೆಚ್ಚಲು ಅನುಕೂಲವಾಯಿತು. ಕಳೆದ ನಾಲ್ಕು ದಿನಗಳಿಂದ ಎಲ್ಲಾ 33 ಕ್ರೆಸ್ಟ್ ಗೇಟ್‌ಗಳನ್ನು ಮುಚ್ಚಲಾಗಿದೆ. ಇನ್ನೂ ಎರಡು ವಾರಗಳ ಕಾಲ ಇದೇ ರೀತಿಯ ಒಳಹರಿವು ಮುಂದುವರಿದರೆ, ಅಣೆಕಟ್ಟೆ ಸಂಪೂರ್ಣ ಸಂಗ್ರಹ ಸಾಮರ್ಥ್ಯದ ಮಟ್ಟ ತಲುಪಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಜಲಾಶಯಕ್ಕೆ ಬಂದ ಸ್ಥಿತಿ ಬಸವಸಾಗರ ಡ್ಯಾಂಗೂ ಬರುತ್ತಾ? ಅಸಲಿ ಸತ್ಯ ಬಿಚ್ಚಿಟ್ಟ ನೀರಾವರಿ ತಜ್ಞ

19ನೇ ಕ್ರೆಸ್ಟ್ ಗೇಟ್ ಮುರಿದು ನೀರು ಪೋಲಾಗುವುದಕ್ಕೂ ಮುನ್ನ ಡ್ಯಾಂ ಸಂಗ್ರಹ ಸಾಮರ್ಥ್ಯದ ಗರಿಷ್ಠ ಮಟ್ಟ ತಲುಪಿತ್ತು. ರೈತರೂ ಖುಷಿಯಾಗಿದ್ದರು. ಈ ಭಾರಿ ಎರಡು ಬೆಳೆಗೆ ಬೇಕಾದಷ್ಟು ನೀರು ಸಿಗಲಿದೆ ಎಂಬ ಆಶಾಭಾವದಿಂದ ಇದ್ದರು. ಆದರೆ, ಅವರ ಕನಸು ಕ್ರೆಸ್ಟ್​ ಗೇಟ್ ಮುರಿದು ನೀರುಪಾಲಾಗುವುದರೊಂದಿಗೆ ನುಚ್ಚುನೂರಾಗಿತ್ತು. ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಕೊನೆಗೂ ಕನ್ನಯ್ಯ ನಾಯ್ಡು ನೇತೃತ್ವದ ತಂಡ ಸ್ಟಾಪ್​ಲಾಗ್ ಗೇಟ್​ಗಳನ್ನು ಅಳವಡಿಸಿ ರೈತರು ನಿಟ್ಟುಸಿರುಬಿಡುವಂತೆ ಮಾಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ