15 ದಿನ ಮುಂಚಿತವಾಗಿಯೇ ಅಲರ್ಟ್ ಆದ ಪೊಲೀಸರು, ಗಣೇಶ ಹಬ್ಬಕ್ಕೆ ಎಲ್ಲೆಡೆ ಹದ್ದಿನ ಕಣ್ಣು
Ganesh Chaturthi 2024: ಗೌರಿ ಗಣೇಶ ಹಬ್ಬಕ್ಕೆ ಇನ್ನೂ 15 ದಿನ ಬಾಕಿ ಇದ್ದು ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಹಬ್ಬ ಆಚರಣೆಗೆ ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಈಗಾಗಲೇ ಗಣೇಶ ಹಬ್ಬಕ್ಕೆ ಬೆಂಗಳೂರಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಎಲ್ಲಾ ಠಾಣಾ ವ್ಯಾಪ್ತಿಯ ರೌಡಿಶೀಟರ್ಗಳನ್ನು ಠಾಣೆಗೆ ಕರೆಸಿ ವಾರ್ನ್ ಮಾಡಲಾಗಿದೆ. ರಾತ್ರಿ ಸಮಯದಲ್ಲಿ ಪುಂಡಾಟ ನಡೆಸುವವರ ಮೇಲೂ ಹದ್ದಿನ ಕಣ್ಣಿಡಲಾಗುತ್ತಿದೆ.
ಬೆಂಗಳೂರು, ಆಗಸ್ಟ್.22: ಇಡೀ ದೇಶದೆಲ್ಲೆಡೆ ಸದ್ದು-ಗದ್ದಲದಿಂದ ನಡೆಯುವ ಗೌರಿ-ಗಣೇಶ ಹಬ್ಬಕ್ಕೆ (Ganesh Chaturthi 2024) ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆ 15 ದಿನ ಮುಂಚಿತವಾಗಿಯೇ ಬಂದೋಬಸ್ತ್ ಕೈಗೊಳ್ಳುವ ಬಗ್ಗೆ ಪೊಲೀಸರು (Bengaluru Police) ಸಿದ್ಧತೆ ಶುರು ಮಾಡಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದಾರೆ. ಹಬ್ಬದ ವೇಳೆ ಯಾವುದೇ ಸಮಸ್ಯೆ, ತೊಂದರೆ ಆಗದಂತೆ ಎಚ್ಚರ ವಹಿಸಲು ಸಿದ್ಧತೆ ನಡೆದಿದೆ.
ಹಬ್ಬಕ್ಕೆ ನಗರ ಪೊಲೀಸರಿಂದ ಏರಿಯಾ ಡಾಮಿನೇಷನ್ ಸ್ಟ್ರಾಟಜಿ ರೂಪಿಸಲಾಗಿದೆ. ಎಲ್ಲಾ ಠಾಣಾ ವ್ಯಾಪ್ತಿಯ ರೌಡಿಶೀಟರ್ಗಳನ್ನು ಠಾಣೆಗೆ ಕರೆಸಿ ವಾರ್ನ್ ಮಾಡಲಾಗಿದೆ. ಗಣೇಶ ಕೂರಿಸಿದಾಗ, ಅಥವಾ ವಿಸರ್ಜನೆ ವೇಳೆ ಯಾವುದೇ ಗಲಾಟೆ ಮಾಡುವಂತಿಲ್ಲ. ಸಮಸ್ಯೆ ಆಗಬಾರದೆಂದು ವಾರ್ನಿಂಗ್ ಕೊಡಲಾಗಿದೆ. ಇನ್ನು ರಾತ್ರಿ ಸಮಯದಲ್ಲಿ ಪುಂಡಾಟ ನಡೆಸುವವರ ಮೇಲೂ ಹದ್ದಿನ ಕಣ್ಣಿಡಲಾಗುತ್ತಿದೆ. ಪ್ರಸ್ತುತ ಏರಿಯಾದಲ್ಲಿ ಯಾಱರ ನಡುವೆ ಹಳೆಯ ವೈಷಮ್ಯವಿದೆ. ಅವರೇನಾದ್ರೂ ಗಣಪತಿ ಕೂರಿಸ್ತಿದ್ದಾರಾ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿಂದೆ ಗಲಾಟೆ ಮಾಡಿಕೊಂಡವರನ್ನು ಈಗಾಗಲೇ ಕರೆಸಿ ವಾರ್ನಿಂಗ್ ಕೊಡಲಾಗಿದೆ. ಪುಂಡಾಟ ಮಾಡುವ ಯುವಕರಿಗೂ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ, ವಿವರ ಇಲ್ಲಿದೆ
ಪ್ರತೀ ವರ್ಷದಂತೆ ಈ ವರ್ಷವೂ ಗೌರಿ-ಗಣೇಶ ಹಬ್ಬದ ವೇಳೆ ಶಾಂತಿ-ಸುವ್ಯವಸ್ಥೆ ಪಾಲನೆ, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಪೊಲೀಸರು ಹೆಚ್ಚಿನ ಗಮನ ಕೊಟ್ಟಿದ್ದಾರೆ. ನಿನ್ನೆ ನಗರ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಸಭೆ ನಡೆಸಿ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಾತನಾಡಿ, ಹಬ್ಬ ಯಾವ ರೀತಿ ಆಚರಿಸಬೇಕು ಸೇರಿದಂತೆ ಏನೆಲ್ಲಾ ನಿಬಂಧನೆಗಳ ಪಾಲಿಸಬೇಕು ಹಾಗೂ ತಾಂತ್ರಿಕವಾಗಿ ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಗಿದೆ. ಅಲ್ಲದೆ ಸಾರ್ವಜನಿಕರು ಕುಂದುಕೊರತೆ ತಿಳಿಸಿದ್ದು, ಈ ಬಗ್ಗೆ ಆಲಿಸಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಮಾರ್ಗಸೂಚಿ ಹೊರಡಿಸುವುದಾಗಿ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:06 am, Thu, 22 August 24