ಕೊಪ್ಪಳ: ಗಣಿ ಉದ್ಯಮಿ, ಮಾಜಿ ಸಚಿವ ಜನಾರ್ದನರೆಡ್ಡಿ ಅವರು ಹೊಸ ಪಕ್ಷ ಕಟ್ಟಿ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಮತ್ತೊಂದೆಡೆ ಜನಾರ್ದನರೆಡ್ಡಿ ಅವರು ಗಂಗಾವತಿಯಿಂದ ಸ್ಪರ್ಧೆಗೆ ಇಳಿಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಅವರು ಗಂಗಾವತಿಯಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದು ಇಂದು ಗೃಹ ಪ್ರವೇಶ ನಡೆಯಲಿದೆ.
ಇನ್ಮುಂದೆ ಗಂಗಾವತಿಯಲ್ಲಿ ಗಣಿಧಣಿ ರೆಡ್ಡಿ ರಾಜಕಾರಣ ಕನ್ಫರ್ಮ್. ಕೊಪ್ಪಳ ಜಿಲ್ಲೆ ಗಂಗಾವತಿಯ ಕನಕಗಿರಿ ರಸ್ತೆಯಲ್ಲಿ ಜನಾರ್ದನರೆಡ್ಡಿ ಹೊಸ ಮನೆ ಖರೀದಿಸಿದ್ದಾರೆ. ಇಂದು ಮಾಜಿ ಸಚಿವ ಜನಾರ್ದನರೆಡ್ಡಿ ಅವರ ಹೊಸ ಮನೆಯ ಗೃಹ ಪ್ರವೇಶ ನಡೆಯಲಿದ್ದು ಇದಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಜನಾರ್ದನರೆಡ್ಡಿ ದೆಹಲಿ ಪ್ರವಾಸ ಹಿನ್ನೆಲೆ ಜನಾರ್ದನರೆಡ್ಡಿ ಪತ್ನಿ ಅರುಣಾ ಲಕ್ಷ್ಮೀರಿಂದ ಗೃಹ ಪ್ರವೇಶ ನಡೆಯುವ ಸಾಧ್ಯತೆ ಇದೆ.
ಇಂದು ಗೃಹ ಪ್ರವೇಶದ ಹಿನ್ನೆಲೆಯಲ್ಲಿ ಪೂಜಾ ಸಾಮಗ್ರಿಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಳ್ಳಾರಿ ಮೂಲದ ಅರ್ಚಕರಿಂದ ಕಾರ್ಯಕ್ರಮ ನೆರವೇರಲಿದೆ. ಸುಮಾರು 20ಕ್ಕೂ ಹೆಚ್ಚು ಅರ್ಚಕರು ಪೂಜಾ ವಿಧಾನಗಳಲ್ಲಿ ಭಾಗಿಯಾಗಲಿದ್ದಾರೆ. ಆಪ್ತರಿಗಷ್ಟೇ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು ಇಂದಿನಿಂದ ಜನಾರ್ದನ ರೆಡ್ಡಿ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಗುರಿಯಾಗಿಸಿರುವ ಜನಾರ್ದನ ರೆಡ್ಡಿ ಗೃಹಪ್ರವೇಶ ಮಾಡಿ ಇಂದಿನಿಂದ ಸಕ್ರಿಯ ರಾಜಕೀಯಕ್ಕೆ ಇಳಿಯಲಿದ್ದಾರೆ. ಇನ್ನು ಜನಾರ್ಧನ ರೆಡ್ಡಿಯ ಗೃಹ ಪ್ರವೇಶ ಹಿನ್ನೆಲೆ ತಳಿರು ತೋರಣದಿಂದ ಮನೆ ಕಂಗೊಳಿಸುತ್ತಿದೆ. ರಾತ್ರಿಯಿಂದಲೇ ಪೂಜೆ, ಹೋಮ ಹವನ ಆರಂಭವಾಗಿದೆ.
Published On - 7:22 am, Wed, 14 December 22