ಜನಾರ್ದನ ರೆಡ್ಡಿ-ರಾಮುಲು ದಶಕಗಳ ಸ್ನೇಹ ವಿಸರ್ಜನೆಯಾಯಿತೇ? ಸ್ನೇಹದ ಕಡಲಲ್ಲಿ ಹುಳಿ ಹಿಂಡಿದವರು ಯಾರು? ಕಂಪ್ಲೀಟ್ ಸ್ಟೋರಿ ಇಲ್ಲಿದೆ

Janardhana Reddy- Sriramulu: ಸ್ನೇಹ ಅದ್ಯಾವಾಗ ಯಾರ ಜೊತೆ ಹೇಗೆ ಬೇಕಾದರೂ ಬೆಳೆದುಬಿಡುತ್ತೆ. ಒಬ್ಬರನೊಬ್ಬರು ಅರ್ಥ ಮಾಡಿಕೊಂಡ್ರೆ ಆ ಸ್ನೇಹಕ್ಕೆ ಬೆಲೆ ಕಟ್ಟಲಾಗದು. ಅಂತಹ ಸ್ನೇಹ ಅವರಿಬ್ಬರ ಮಧ್ಯೆ ಬೆಳೆದಿತ್ತು. ಮೂರು ದಶಕಗಳ ಕಾಲ ದೋಸ್ತಿಯಾಗಿದ್ದ ಸ್ನೇಹಿತರು ಅವರಿಬ್ಬರೂ.

ಜನಾರ್ದನ ರೆಡ್ಡಿ-ರಾಮುಲು ದಶಕಗಳ ಸ್ನೇಹ ವಿಸರ್ಜನೆಯಾಯಿತೇ? ಸ್ನೇಹದ ಕಡಲಲ್ಲಿ ಹುಳಿ ಹಿಂಡಿದವರು ಯಾರು? ಕಂಪ್ಲೀಟ್ ಸ್ಟೋರಿ ಇಲ್ಲಿದೆ
ಸ್ನೇಹಕ್ಕೇ ಜೀವಂತ ಸಾಕ್ಷಿಯಾಗಿದ್ದ ಸ್ನೇಹಿತರು ರೆಡ್ಡಿ-ರಾಮುಲು!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 08, 2022 | 6:47 PM

ಅವರಿಬ್ಬರು ಒಂದೇ ತಾಯಿ ಮಕ್ಕಳಲ್ಲ. ಒಂದು ಏರಿಯಾದವರು ಕೂಡಾ ಅಲ್ಲ. ಅವರಿಬ್ಬರ ಜಾತಿ ಸಹ ಬೇರೆ ಬೇರೆ. ಆದ್ರೆ ಅವರಿಬ್ಬರು ಒಂದೇ ದೇಹ ಎರಡು ಆತ್ಮದಂತೆ ಇದ್ದವರು. ಅವರ ಸ್ನೇಹ ಅಂತಿಂತಹುದಲ್ಲ. ಒಬ್ಬರಿಗೊಬ್ಬರು ಜೀವ ಬೇಕಾದರೂ ಕೊಡೋಕೆ ರೆಡಿಯಿದ್ದವರು. ಸ್ನೇಹಕ್ಕೂ ಸೈ, ಹೋರಾಟಕ್ಕೂ ಜೈ ಅಂತಿದ್ದವರು ಅವರಿಬ್ಬರು. ಅಧಿಕಾರ ಹಣ ಆಸ್ತಿ ಎಲ್ಲವನ್ನ ಮೀರಿದ ಆ ಸ್ನೇಹಿತರ ಸ್ನೇಹ ಕಂಡು ಹೊಟ್ಟೆಕಿಚ್ಚು ಪಟ್ಟವರಿದ್ದಾರೆ. ಆ ಕುಚುಕು ಕುಚುಕು ಸ್ನೇಹಿತರ ಸಂಬಂಧ ಮೂರು ದಶಕಗಳ ಕಾಲದ್ದು. ಅತಂಹ ಸ್ನೇಹಿತರ ಮಧ್ಯೆಯೇ ಇದೀಗ ಬಿರುಕು ಮೂಡಿದೆ. ನಾನೊಂದು ತೀರ ನೀನೊಂದು ತೀರ ಅಂತಾ ಅವರಿಬ್ಬರೂ ಮುನಿಸಿಕೊಂಡಿದ್ದಾರೆ. ಆ ಅಪರೂಪದ ಸ್ನೇಹಿತರಾದ್ರು ಯಾರು? ಅವರಿಬ್ಬರ ಸ್ನೇಹದಲ್ಲಿ ಹುಳಿ ಹಿಂಡಿದವರು ಯಾರು? ಅವರು ಯಾಕೆ ಬೇರೆ ಬೇರೆಯಾದರು… ಅನ್ನೋ ಸ್ಟೋರಿ ಇಲ್ಲಿದೆ ನೋಡಿ.

ಸ್ನೇಹ ಅನ್ನೋದು ಎಲ್ಲದಕ್ಕಿಂತಲೂ ಮಿಗಿಲಾದದ್ದು. ಫ್ರೆಂಡ್ ಶಿಪ್ ನಲ್ಲಿ ಜಾತಿ-ವಯಸ್ಸು-ಅಂತಸ್ತು-ಹಣ-ಅಧಿಕಾರ ಎಲ್ಲವೂ ನಗಣ್ಯ. ಸ್ನೇಹ ಅದ್ಯಾವಾಗ ಯಾರ ಜೊತೆ ಹೇಗೆ ಬೇಕಾದರೂ ಬೆಳೆದುಬಿಡುತ್ತೆ. ಒಬ್ಬರನೊಬ್ಬರು ಅರ್ಥ ಮಾಡಿಕೊಂಡ್ರೆ ಆ ಸ್ನೇಹಕ್ಕೆ ಬೆಲೆ ಕಟ್ಟಲಾಗದು. ಅಂತಹ ಸ್ನೇಹ ಅವರಿಬ್ಬರ ಮಧ್ಯೆ ಬೆಳೆದಿತ್ತು. ಮೂರು ದಶಕಗಳ ಕಾಲ ದೋಸ್ತಿಯಾಗಿದ್ದ ಸ್ನೇಹಿತರು ಅವರಿಬ್ಬರೂ. ಯೆಸ್. ಇಷ್ಟೊಂದು ಪೀಠಿಕೆ ಹಾಕಿದ ಮೇಲೆ ಆ ಸ್ನೇಹಿತರಾದರೂ ಯಾರು ಅನ್ನೋ ಕುತೂಹಲ ಇದ್ದೆ ಇರುತ್ತೆ ಅಲ್ವಾ? ಆ ಸ್ನೇಹಿತರ ಬೇರೆ ಯಾರು ಅಲ್ಲ. ಇವರೇ ನೋಡಿ..

ಸ್ನೇಹಕ್ಕೇ ಜೀವಂತ ಸಾಕ್ಷಿಯಾಗಿದ್ದ ಸ್ನೇಹಿತರಿವರು ರೆಡ್ಡಿ-ರಾಮುಲು!

ರೆಡ್ಡಿ-ರಾಮುಲು.. ಯೆಸ್. ಮಾಜಿ ಸಚಿವ ಜನಾರ್ದನ ರೆಡ್ಡಿ (G Janardhana Reddy) ಮತ್ತು ಹಾಲಿ ಸಾರಿಗೆ ಸಚಿವ ಶ್ರೀರಾಮುಲು (B Sriramulu) ಆಪ್ತ ಸ್ನೇಹಿತರು. ಇವರಿಬ್ಬರದ್ದು ಜಾತಿ ಬೇರೆ ಬೇರೆಯಾದ್ರು ಇವರಿಬ್ಬರ ಮಧ್ಯೆ ಎಂದೂ ಜಾತಿ ಅಂತಸ್ತು ಅಧಿಕಾರ ಸ್ನೇಹಕ್ಕೆ (Friendship) ಅಡ್ಡಿಯಾದ ಉದಾಹರಣೆಯಿಲ್ಲ. ಇಬ್ಬರೂ ಮೂರು ದಶಕಗಳಿಂದಲೂ ಆಪ್ತ ಮಿತ್ರರಾಗಿದ್ದವರು. ರೆಡ್ಡಿ ಅಂದ್ರೆ ರಾಮುಲು. ರಾಮುಲು ಅಂದ್ರೆ ರೆಡ್ಡಿ ಅನ್ನೋ ಅಷ್ಟರ ಮಟ್ಟಿಗೆ ಇವರ ಮಧ್ಯೆ ಸ್ನೇಹವಿತ್ತು.

ಒಡಹುಟ್ಟದಿದ್ದರೂ ಬ್ರದರ್ಸ್ ಅಂತಾನೇ ಫೇಮಸ್ ಆಗಿದ್ದ ಈ ಜೋಡಿ ರಾಜ್ಯ ರಾಜಕಾರಣದಲ್ಲೂ ಸಾಕಷ್ಟು ಸದ್ದು ಸಂಚಲನ ಮೂಡಿಸಿದವರು. ಜನಾರ್ದನ ರೆಡ್ಡಿ ಎಸ್ ಎಸ್ಎಲ್ ಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದರೆ ಸಚಿವ ಶ್ರೀರಾಮುಲು ಎಸ್ ಜಿ ಸ್ಕೂಲ್ ನಲ್ಲಿ ಪಿಯುಸಿ ಮುಗಿಸಿ ನಂತರ ಬಾಹ್ಯ ವಿದ್ಯಾರ್ಥಿಯಾಗಿ ಪದವಿ ಮಾಡಿದ್ದಾರೆ. ಇಬ್ಬರ ಸ್ನೇಹ ಶಾಲಾ ಕಾಲೇಜಿನಿಂದ ಆರಂಭವಾಗಿರುವುದೂ ಅಲ್ಲ. ರೆಡ್ಡಿ-ರಾಮುಲು ಸ್ನೇಹಕ್ಕೆ ಮುನ್ನುಡಿ ಬರೆದಿದ್ದೆ ಏನೋಬಲ್ ಇಂಡಿಯಾ ಕಂಪನಿ.

ಕಾರು ಚಾಲಕ ರೆಡ್ಡಿಗೆ ಆಪ್ತ ಮಿತ್ರನಾಗಿದ್ದೆಂಗೆ, ರೆಡ್ಡಿಗೆ ಜನಾ ಜನಾ ಅಂತಿದ್ದುದ್ಯಾಕೆ ಶ್ರೀರಾಮುಲು..!

ಮಾಜಿ ಸಚಿವ. ಗಣಿ ಧಣಿ ಜನಾರ್ದನ ರೆಡ್ಡಿ ಹುಟ್ಟುತ್ತಲೇ ಶ್ರೀಮಂತರೇನಲ್ಲ. ಸಾಧಾರಣ ಪೊಲೀಸ್ ಪೇದೆಯ ಪುತ್ರನಾಗಿದ್ದ ಜನಾರ್ದನ ರೆಡ್ಡಿಗೆ ಶ್ರೀರಾಮುಲು ಸ್ನೇಹಿತನಾಗಿ ಆಪ್ತನಾಗಿದಕ್ಕೆ ಅದೊಂದು ಘಟನೆ ಸಾಕ್ಷಿಯಾಗಿತ್ತು. ಮಾಜಿ ಸಚಿವ ಜನಾರ್ದನ ರೆಡ್ಡಿ ತಮ್ಮ ಹಿರಿಯ ಸಹೋದರ ಕರುಣಾಕರ ರೆಡ್ಡಿ ಜೊತೆಗೂಡಿ ಎನೋಬಲ್ ಇಂಡಿಯಾ ಚಿಟ್ ಫಂಡ್ ಕಂಪನಿ ಸ್ಥಾಪನೆ ಮಾಡಿದಾಗಲೇ ರೆಡ್ಡಿಗೆ ರಾಮುಲು ಪರಿಚಯವಾಗಿದ್ದು.

ಏನೋಬಲ್ ಇಂಡಿಯಾ ಕಂಪನಿಗೆ ಕಾರು ಬಾಡಿಗೆ ಬಿಟ್ಟಿದ್ದ ಶ್ರೀರಾಮುಲುಗೆ ರೆಡ್ಡಿ ಜೊತೆ ಸ್ನೇಹವಿರಲಿಲ್ಲ. ಆದ್ರೆ ಅದೊಂದು ಘಟನೆ ಇವರಿಬ್ಬರನ್ನ ಆಪ್ತ ಸ್ನೇಹಿತರನ್ನಾಗಿ ಮಾಡಿಬಿಟ್ಟಿತ್ತು. ಜನಾರ್ದನ ರೆಡ್ಡಿಯ ಹಿರಿಯ ಸಹೋದರ ಹಾಲಿ ಶಾಸಕ ಕರುಣಾಕರ ರೆಡ್ಡಿಯ ಖಾಸಗಿ ಜೀವನದಲ್ಲಿ ನಡೆದ ಗಲಾಟೆ ಪ್ರಕರಣವೇ ಇಬ್ಬರನ್ನೂ ಆಪ್ತರನ್ನಾಗಿ ಮಾಡಲು ಸಾಕ್ಷಿಯಾಗಿತ್ತು.

ಕರುಣಾಕರ ರೆಡ್ಡಿ ವಿಚಾರವಾಗಿ ನಡೆದ ಜಗಳದಲ್ಲಿ ರೆಡ್ಡಿ ಸಹೋದರರ ಬೆಂಗಾವಲಾಗಿ ನಿಂತು ಬಡಿದಾಡಿದ್ದು ಮತ್ಯಾರೂ ಅಲ್ಲ ಇದೇ ಶ್ರೀರಾಮುಲು. ಈ ಘಟನೆಯ ನಂತರ ನಂಬಿಕಸ್ಥ ಅಂತಾ ಜನಾರ್ದನ ರೆಡ್ಡಿ ಶ್ರೀರಾಮುಲು ಜೊತೆಗೆ ಸ್ನೇಹ ಬೆಳೆಸಿದರು. ಇವರಿಬ್ಬರ ಸ್ನೇಹ ಅದ್ಯಾವ ಮಟ್ಟಿಗೆ ಗಟ್ಟಿಯಾಗಿತ್ತು ಅಂದ್ರೆ ಇಂದಿಗೂ ಶ್ರೀರಾಮುಲು ಜನಾರ್ದನ ರೆಡ್ಡಿಯನ್ನ ಕರೆಯೋದು ಜನಾ ಜನಾ ಅಂತಾನೇ.. ಅಷ್ಟೊಂದು ಆಪ್ತತೆ ಅನ್ಯೋನ್ಯ ಸಂಬಂಭ ಇವರಿಬ್ಬರ ಮಧ್ಯೆ ಬೆಳೆದುಬಿಟ್ಟಿತ್ತು ಎನ್ನುತ್ತಾರೆ ಹಿರಿಯ ಪತ್ರಕರ್ತ ಎನ್ ವೀರಭದ್ರಗೌಡ.

Special report on Bellary G Janardhana Reddy and Sriramulu friendship

ಕಾಲು ಮೇಲೆ ಕಾಲು ಹಾಕಿ, ಭದ್ರವಾಗಿ ತಳವೂರಿದ್ದ ಸ್ನೇಹ ಬೇರ್ಪಟ್ಟಿತೇ?

ನಾವಿಬ್ಬರು ಒಂದೇ ತಾಯಿ ಮಕ್ಕಳು ಅಂತಿದ್ದ ಸ್ನೇಹಿತರು ಅವರು! ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಬಿ ಶ್ರೀರಾಮುಲು ಜೊತೆಯಾಗಿ ಒಡಹುಟ್ಟಿದವರಲ್ಲ. ಆದ್ರೆ ಒಡಹುಟ್ಟಿದವರಿಗಿಂತಲೂ ಆಪ್ತತೆ ಅನ್ಯೋನ್ಯತೆ ಈ ಇಬ್ಬರು ಸ್ನೇಹಿತರ ಮಧ್ಯೆ ಇದೆ. ಸಚಿವ ಶ್ರೀರಾಮುಲು ಆಗಿರಲಿ. ಮಾಜಿ ಸಚಿವ ಜನಾರ್ದನ ರೆಡ್ಡಿ ಆಗಿರಲಿ ಇಬ್ಬರ ಮನೆಗಳಲ್ಲಿ ಏನೇ ಸಮಾರಂಭ ಇದ್ದರೂ ಇಬ್ಬರು ಒಟ್ಟಿಗೆ ಹಾಜರಿರುತ್ತಿದ್ದರು.

ಅದಕ್ಕೆ ಸಾಕ್ಷಿ ಎನ್ನುವಂತೆ ಜನಾರ್ದನ ರೆಡ್ಡಿ ಪುತ್ರಿಯ ಮದುವೆ ವೇಳೆ ಮನೆಯ ಹಿರಿಯ ಸದಸ್ಯನಂತೆ ಶ್ರೀರಾಮುಲು ಜವಾಬ್ದಾರಿ ನಿಭಾಯಿಸಿದ್ರು. ರೆಡ್ಡಿ ಮಗನ ಸಿನಿಮಾ ಶೂಟಿಂಗ್ ಆರಂಭದ ವೇಳೆಯಲ್ಲೂ ಶ್ರೀರಾಮುಲು ಹಾಜರಿದ್ದು ಸ್ನೇಹಿತನ ಕುಟುಂಬದ ಜೊತೆ ಖುಷಿ ಹಚ್ಚಿಕೊಂಡಿದ್ದರು. ಅಷ್ಟೇ ಯಾಕೆ ಈ ಇಬ್ಬರು ಸ್ನೇಹಿತರ ಮನೆ ಇರೋದು ಸಹ ಅಕ್ಕಪಕ್ಕದಲ್ಲೆ.

ಬಳ್ಳಾರಿಯ ಸಿರಗುಪ್ಪ ರಸ್ತೆಯಲ್ಲಿ ಸಚಿವ ಶ್ರೀರಾಮುಲು – ಮಾಜಿ ಸಚಿವ ಜನಾರ್ದನ ರೆಡ್ಡಿ ಅಕ್ಕಪಕ್ಕದಲ್ಲೆ ಮನೆ ನಿರ್ಮಿಸಿಕೊಂಡಿದ್ದಾರೆ. ಕೂಗಳತೆ ದೂರದಲ್ಲೆ ವಾಸವಾಗಿರುವ ಈ ಸ್ನೇಹಿತರು ಒಬ್ಬರ ಮನೆಗೆ ಇನ್ನೊಬ್ಬರು ಓಡಾಡುತ್ತಲೇ ಸ್ನೇಹ ನಿಭಾಯಿಸಿಕೊಂಡು ಬಂದಿದ್ದಾರೆ ಎಂಬ ಮಾಹಿತಿ ನೀಡಿದವರು ಪಾಲಣ್ಣ ಕಾರ್ಕಲತೋಟ -ಮಾಜಿ ಅಧ್ಯಕ್ಷರು, ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರ.

ಸಚಿವ ಶ್ರೀರಾಮುಲು ರಾಜಕೀಯಕ್ಕೆ ಸ್ನೇಹಿತನೇ ಗುರು!

ಆಪ್ತ ಸ್ನೇಹಿತ ರಾಮುಲುನನ್ನ ಕೈಹಿಡಿದು ಬೆಳೆಸಿದರು ರೆಡ್ಡಿಗಾರು..! ಸಾರಿಗೆ ಸಚಿವ ಶ್ರೀರಾಮುಲು ರಾಜಕೀಯ ಜೀವನಕ್ಕೆ ಜನಾರ್ದನ ರೆಡ್ಡಿಯೇ ಗುರು. ಗುರು ಅನ್ನೋದಕ್ಕಿಂತ ಆಪ್ತ ಸ್ನೇಹಿತನ ರಾಜಕೀಯ ಎಳುಬೀಳುಗಳಲ್ಲಿ ರೆಡ್ಡಿ ಜೊತೆಯಾಗಿದ್ದವರು. ಜನಾರ್ದನ ರೆಡ್ಡಿಯ ವ್ಯವಹಾರ. ಗಣಿಗಾರಿಕೆಗೆ ಶ್ರೀರಾಮುಲು ಬೆಂಗಾವಲು ಆಗಿ ನಿಂತವರು. ಜೊತೆ ಜೊತೆಯಾಗಿ ಹೆಗಲಿಗೆ ಹೆಗಲು ಕೊಟ್ಟು ಕುಚುಕು ಕುಚುಕು ಸ್ನೇಹಿತರಾಗಿದ್ದವರು ರೆಡ್ಡಿ-ರಾಮುಲು. ಕಾಂಗ್ರೆಸ್ ಪಾಳಯದಿಂದ ರಾಜಕೀಯ ಆರಂಭಿಸಿದ್ದ ಶ್ರೀರಾಮುಲು ಬಳ್ಳಾರಿಯ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು.

ಆದ್ರೆ ಗಣಿಗಾರಿಕೆಯ ಹಣ, ಜನಾರ್ದನ ರೆಡ್ಡಿಯ ಶ್ರೀರಕ್ಷೆ ರಾಮುಲು ತಮ್ಮ ರಾಜಕೀಯದಲ್ಲಿ ಹಿಂದುರುಗಿ ನೋಡದಂತೆ ಅಗಾಧವಾಗಿ ಬೆಳೆಸಿದೆ. 1999ರಲ್ಲಿ ರೆಡ್ಡಿ ಸಹೋದರರ ಜೊತೆ ಬಿಜೆಪಿ ಪಾಳಯಕ್ಕೆ ಎಂಟ್ರಿ ಕೊಟ್ಟ ಶ್ರೀರಾಮುಲು 1999ರಲ್ಲಿ ಬಳ್ಳಾರಿಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರು. ಅಂದಿನಿಂದ ಇಂದಿನವರೆಗೂ ಶ್ರೀರಾಮುಲು ರಾಜಕೀಯ ಜೀವನಕ್ಕೆ ಗುರುವಾಗಿ ಆಪ್ತ ಸ್ನೇಹಿತನಾಗಿ ಇದ್ದವರು ಬೇರೆ ಯಾರೂ ಅಲ್ಲ ಇದೇ ಜನಾರ್ದನ ರೆಡ್ಡಿ ಅಂದ್ರೆ ತಪ್ಪಲ್ಲ.. ಎನ್ನುತ್ತಾರೆ ಗುತ್ತಿಗನೂರು ವಿರುಪಾಕ್ಷಗೌಡ, ಜವಳಿ ನಿಗಮದ ಅಧ್ಯಕ್ಷ.

ಸ್ನೇಹಿತನ ಸ್ನೇಹಕ್ಕಾಗಿ ಪಕ್ಷವನ್ನೆ ತೊರೆದಿದ್ದರು ರಾಮುಲು..!

ರೆಡ್ಡಿಯ ಕಷ್ಟಕಾಲದಲ್ಲಿ ಕೈ ಹಿಡಿದಿದ್ದರು ಬಳ್ಳಾರಿ ಬುಲ್ಲೋಡು..! ಮಾಜಿ ಸಚಿವ ಜನಾರ್ದನ ರೆಡ್ಡಿ-ಹಾಲಿ ಸಾರಿಗೆ ಸಚಿವ ಶ್ರೀರಾಮುಲು ಸ್ನೇಹ ಬಹುದೊಡ್ಡದು. ಎಷ್ಠೇ ಅಧಿಕಾರ ಬಂದರೂ ನೂರಾರು ಕೋಟಿ ಹಣ ಗಳಿಸಿದ್ದರೂ ಇಬ್ಬರ ಮಧ್ಯೆ ಎಂದಿಗೂ ವೈಮನಸ್ಸು ಮೂಡಿರಲಿಲ್ಲ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಜೈಲು ಪಾಲಾದ ವೇಳೆಯೂ ಸ್ನೇಹಿತನ ಬೆನ್ನಿಗೆ ನಿಂತಿದ್ದು ಮತ್ಯಾರೂ ಅಲ್ಲ ಇದೇ ಶ್ರೀರಾಮುಲು. ಜನಾ ಜನಾ ಅಂತಾನೇ ಸ್ನೇಹಿತನ ಕಷ್ಟಕಾಲದಲ್ಲಿ ಜೊತೆಗಿದ್ದ ಶ್ರೀರಾಮುಲು ರೆಡ್ಡಿಗಾಗಿ ಕಮಲ ಪಾಳಯಕ್ಕೆ ಗುಡ್ ಬೈ ಹೇಳಿದರು.

ಜನಾರ್ದನ ರೆಡ್ಡಿ ಜೈಲು ಸೇರಿದ ನಂತರ ರೆಡ್ಡಿ ಸೂಚನೆ ಮೇರೆಗೆ ಶ್ರೀರಾಮುಲು ಬಿಎಸ್ ಆರ್ ಕಾಂಗ್ರೆಸ್​ ಪಕ್ಷ ಕಟ್ಟಿದ್ದರು. ಆದ್ರೆ ಬದಲಾದ ರಾಜಕೀಯದಲ್ಲಿ ಶ್ರೀರಾಮುಲು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿ ಸಚಿವರಾಗಿದ್ದಾರೆ. ಜನಾರ್ದನ ರೆಡ್ಡಿ ಸಹ ಜೈಲುವಾಸ ಅನುಭವಿಸಿ ಹೊರ ಬಂದಿದ್ದಾರೆ. ಅಷ್ಟೊಂದು ಆತ್ಮೀಯತೆಯ ಸ್ನೇಹ ಅವರಿಬ್ಬರ ಮಧ್ಯೆ ಇದ್ದಿದ್ದು ಮಾತ್ರ ಸುಳ್ಳಲ್ಲ ಎಂದವರು ಪಾಲಣ್ಣ ಕಾರ್ಕಲತೋಟ -ಮಾಜಿ ಅಧ್ಯಕ್ಷರು, ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರ.

ಶ್ರೀರಾಮುಲುಗಾಗಿ ಹಳ್ಳಿ ಹಳ್ಳಿ ತಿರುಗಿ ಪ್ರಚಾರ ಮಾಡಿದ್ದರು ರೆಡ್ಡಿ!

ಸಿದ್ದು-ಶ್ರೀರಾಮುಲು ಸ್ಪರ್ಧೆ.. ಸ್ನೇಹಿತನ ಗೆಲುವಿಗೆ ರೆಡ್ಡಿ ರಣತಂತ್ರ..! ಸಚಿವ ಶ್ರೀರಾಮುಲು ಸಧ್ಯ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಆದ್ರೆ ಬಳ್ಳಾರಿ ಉಸ್ತುವಾರಿ ಸಚಿವರಾಗಲು ಕಾರಣ ಮೊಣಕಾಲ್ಮೂರು ಕ್ಷೇತ್ರ. ಕಳೆದ ಬಾರಿ ಬಳ್ಳಾರಿ ತೊರೆದು ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ಕ್ಷೇತ್ರದಿಂದ ಶ್ರೀರಾಮುಲು ಸ್ಪರ್ಧಿಸಿದ್ದರು. ಅದೇ ಚುನಾವಣೆಯಲ್ಲಿ ಬದಾಮಿಯಿಂದ ಸಿದ್ದರಾಮಯ್ಯ ವಿರುದ್ದ ಶ್ರೀರಾಮುಲು ಸೆಡ್ಡು ಹೊಡೆದಿದ್ದರು.

ಆಗಲೇ ನೋಡಿ ಸ್ನೇಹಿತನಾಗಿ ರೆಡ್ಡಿ ಮೊಣಕಾಲ್ಮೂರು ಕ್ಷೇತ್ರದ ಹಳ್ಳಿ ಹಳ್ಳಿಗೆ ತಿರುಗಿ ಪ್ರಚಾರ ಮಾಡಿದ್ರು. ವಾರ್ಡ್ ವಾರ್ಡಗೆ ಓಡಾಡಿ ಚುನಾವಣೆಯ ರಣತಂತ್ರ ಹೆಣಿದಿದ್ದರು. ಸಿದ್ದರಾಮಯ್ಯ ವಿರುದ್ದ ಶ್ರೀರಾಮುಲು ಗೆಲ್ಲಲು ಆಗದಿದ್ದರೂ ಆಪ್ತ ಸ್ನೇಹಿತ ಜನಾರ್ದನ ರೆಡ್ಡಿ ಶ್ರೀರಾಮುಲುರನ್ನ ಮೊಣಕಾಲ್ಮೂರು ಕ್ಷೇತ್ರದಿಂದ ಗೆಲ್ಲಿಸುವಲ್ಲಿ ಯಶ್ವಸಿಯಾಗಿದ್ರು. ಸ್ನೇಹಿತನಿಗಾಗಿ ಚುನಾವಣೆ ವೇಳೆ ಮೊಣಕಾಲ್ಮೂರು ಕ್ಷೇತ್ರದಲ್ಲೆ ಮನೆ ಮಾಡಿ, ಹಳ್ಳಿ ಹಳ್ಳಿಗೆ ತಿರುಗಿ ಪ್ರಚಾರ ಮಾಡಿದ್ದ ಜನಾರ್ದನರೆಡ್ಡಿ ಶ್ರೀರಾಮುಲು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸ್ನೇಹಿತನಿಗಾಗಿ ಸಹೋದರನ ಜೊತೆ ಜಗಳವಾಡಿದರು ರೆಡ್ಡಿ!

ಅಣ್ಣನಿಗಿಂತ ಆಪ್ತ ಸ್ನೇಹಿತ ಅಂತಿದ್ರು ಗಾಲಿ ಜನಾಧನರೆಡ್ಡಿ..! ಸಚಿವ ಶ್ರೀರಾಮುಲು-ಗಣಿ ಧಣಿ ಜನಾರ್ದನ ರೆಡ್ಡಿಯ ಮಧ್ಯೆ ಸ್ನೇಹ ಸಾಕಷ್ಟು ಮಜಲುಗಳನ್ನ ಕಂಡಿದೆ. ಇವರಿಬ್ಬರ ಮಧ್ಯೆ ಅದೆಷ್ಟೋ ಜನರು ಹುಳಿ ಹಿಂಡಲು ಬಂದರೂ ಚಾಡಿ ಮಾತು ಕೇಳದ ಸ್ನೇಹಿತರು ಒಬ್ಬರಿಗೊಬ್ಬರು ಪ್ರಾಣ ಕೊಡಲು ಸಜ್ಜಾಗಿದ್ದವರು. ಅಂತಹದ್ದೇ ಘಟನೆಯೊಂದು ಇವರಿಬ್ಬರ ಮಧ್ಯೆ ನಡೆದ ಉದಾಹರಣೆಯಿದೆ.

ಸಚಿವ ಶ್ರೀರಾಮುಲು ಜೊತೆಗಿನ ಸ್ನೇಹಕ್ಕಾಗಿ ಜನಾರ್ದನ ರೆಡ್ಡಿ ತಮ್ಮ ಸಹೋದರನ ಜೊತೆಗೇ ಮಾತುಬಿಟ್ಟರು. ತಮ್ಮ ಹಿರಿಯ ಸಹೋದರ ಕರುಣಾಕರ ರೆಡ್ಡಿಯನ್ನ ಬದಿಗಿಟ್ಟು ಜನಾರ್ದನ ರೆಡ್ಡಿ ಶ್ರೀರಾಮುಲು ಜೊತೆಗಿದ್ದರು. ರೆಡ್ಡಿ ಮಾತು ಕೇಳಿ ಬಿಎಸ್ ಆರ್ ಕಾಂಗ್ರೆಸ್​ ಪಕ್ಷ ಕಟ್ಟಿದ್ದ ಶ್ರೀರಾಮುಲು ಜೊತೆ ಇಡೀ ರೆಡ್ಡಿ ಪಾಳಯವೇ ಜೊತೆಗೆ ನಿಂತಿತ್ತು. ಆದ್ರೆ ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಮಾತ್ರ ಬಿಜೆಪಿ ಬಿಟ್ಟು ಬಿಎಸ್ಆರ್ ಕಾಂಗ್ರೆಸ್​​ಗೆ ಬರಲೇ ಇಲ್ಲ.

ಅಷ್ಟೇ ಅಲ್ಲ ಶ್ರೀರಾಮುಲು ಜೊತೆ ಭೂ ವ್ಯಾಜ್ಯವಾಗಿ ಜಗಳವಾದ ವೇಳೆಯೂ ಜನಾರ್ದನ ರೆಡ್ಡಿ ಶ್ರೀರಾಮುಲು ಬೆನ್ನಿಗೆ ನಿಂತಿದ್ದರು. ಹಿಂದೆ ಸಚಿವ ಶ್ರೀರಾಮುಲು ಅವರು ಶಾಸಕ ಕರುಣಾಕರ ರೆಡ್ಡಿ 1997ರಲ್ಲಿ ಬಳ್ಳಾರಿಯ ಸುಷ್ಮಾ ಸ್ವರಾಜ್ ಕಾಲೋನಿಯಲ್ಲಿ 10 ಎಕರೆ ಜಮೀನು ಖರೀದಿ ಮಾಡಿದ್ರು. ಸಚಿವ ರಾಮುಲು ಹೆಸರಿನಲ್ಲಿ 8 ಎಕರೆ, ಕರುಣಾಕರ ರೆಡ್ಡಿ ಹೆಸರಿನಲ್ಲಿ 2 ಎಕರೆ ಜಮೀನು ಖರೀದಿ ಮಾಡಲಾಗಿತ್ತು.

ನಂತರ ಇದೇ ಜಮೀನನ್ನು ಶ್ರೀರಾಮುಲು ಕೃಷಿಯೇತರ ಜಮೀನಾಗಿ ಪರಿರ್ವತನೆ ಮಾಡಿ ನಿವೇಶನಗಳನ್ನ ಮಾರಾಟ ಮಾಡುತ್ತಿದ್ದಾರೆಂದು ಕರುಣಾಕರ ರೆಡ್ಡಿ ಶ್ರೀರಾಮುಲು ವಿರುದ್ದ ಕೇಸ್ ದಾಖಲಿಸಿದ್ರು. ಶ್ರೀರಾಮುಲು ಸಹ ಕರುಣಾಕರ ರೆಡ್ಡಿ ವಿರುದ್ದ ಪ್ರತಿ ದೂರು ದಾಖಲಿಸಿದ್ರು. ಇಬ್ಬರು ಸೈಟ್ ವಿಚಾರವಾಗಿ ಜಗಳವಾಡಿಕೊಂಡು ಪೊಲೀಸ್​ ಠಾಣೆ ಮೇಟ್ಟಿಲೇರಿದಾಗಲೂ ಸಹ ಸಹೋದರನ ಬದಲಾಗಿ ಸ್ನೇಹಿತ ಶ್ರೀರಾಮುಲು ಜೊತೆಗೆ ನಿಂತಿದ್ದ ಜನಾರ್ದನ ರೆಡ್ಡಿ ಅವರು ಕುಟುಂಬಕ್ಕಿಂತ ಸ್ನೇಹ ದೊಡ್ಡದು ಅನ್ನೋ ಮಟ್ಟಿಗೆ ಇಬ್ಬರ ಸ್ನೇಹವಿದ್ದಿದ್ದು ಮಾತ್ರ ಸುಳ್ಳಲ್ಲ ಎನ್ನುತ್ತಾರೆ ಎನ್ ವೀರಭದ್ರ ಗೌಡ, ಹಿರಿಯ ಪತ್ರಕರ್ತ.

ಆಸ್ತಿ ಅಂತಸ್ತು ಜಾತಿ ಎಲ್ಲವನ್ನೂ ಬದಿಗಿಟ್ಟು ಸ್ನೇಹಕ್ಕಿಂತ ದೊಡ್ಡದಿಲ್ಲ ಅಂತಿದ್ದವರು ರೆಡ್ಡಿ-ರಾಮುಲು. ಆದ್ರೆ ಅದೇ ಸ್ನೇಹಿತರು ಇದೀಗ ಮುನಿಸಿಕೊಂಡಿದ್ದಾರೆ. ಅಕ್ಕ ಪಕ್ಕದ ಮನೆಯಲ್ಲೆ ಇದ್ದರೂ ಮುಖ ಕೊಟ್ಟು ಮಾತನಾಡದಾಗಿದ್ದಾರೆ. ಅಷ್ಟಕ್ಕೂ ಇವರಿಬ್ಬರ ಸ್ನೇಹಕ್ಕೆ ಹುಳಿ ಹಿಂಡಿದವರು ಯಾರು..? ರೆಡ್ಡಿ-ರಾಮುಲು ಗೆಳೆತನಕ್ಕೆ ಅಡ್ಡಿಯಾಗಿದ್ದೇನೂ..? (ವರದಿ: ವಿರೇಶ್ ದಾನಿ, ಟಿವಿ 9, ಬಳ್ಳಾರಿ)

Published On - 6:43 pm, Thu, 8 December 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ