
ಕೊಪ್ಪಳ, ಸೆ.26: ಈ ಬಾರಿಯ ದಸರಾವನ್ನು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲೇ ಘೋಷಣೆ ಮಾಡಿದ್ದರು. ಈ ವಿಚಾರ ಎಲ್ಲ ಕಡೆ ಭಾರೀ ಮೆಚ್ಚುಗೆಯನ್ನು ಪಡೆದಿತ್ತು. ಸರ್ಕಾರ ಈ ನಿರ್ಧಾರಕ್ಕೆ ವಿಪಕ್ಷ ಕೂಡ ಪ್ರಶಂಸೆ ಮಾಡಿತ್ತು. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗಿದೆ. ಆದರೆ ಕೆಲವು ಕಿಡಿಗೆಡಿಗಳು ಅಪ್ರಚಾರ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಅಭಿನವ ಗವಿಸಿದ್ದೇಶ್ವರ ಶ್ರೀಗಳ ಚಿತ್ರವನ್ನು ಬಳಸಿ, ಅವರು ದಸರಾ ಉದ್ಘಾಟನೆಯ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂಬ ವದಂತಿಯನ್ನು ಹಬ್ಬಿಸುತ್ತಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿರುವ ಪೋಸ್ಟ್‌ಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಕೊಪ್ಪಳದ ಶ್ರೀ ಗವಿಮಠದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಕಿಡಿಗೇಡಿಗಳು ಹರಡಿದ್ದ ಪೋಸ್ಟ್‌ನಲ್ಲಿ: “ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಸರಾ ಉದ್ಘಾಟನೆಗೆ ಶ್ರೀಗಳನ್ನು ಆಹ್ವಾನಿಸಲು ಬಂದಾಗ, ಬರೋಬ್ಬರಿ ಒಂದೂವರೆ ಗಂಟೆಗಳ ಕಾಲ ಮನವೊಲಿಸಿದರೂ ಶ್ರೀಗಳು ಆಹ್ವಾನ ಒಪ್ಪಿಲ್ಲ. ಕೊಪ್ಪಳ ಜಿಲ್ಲೆಯನ್ನು ಕಲಿಷಿತ ಕಾರ್ಖಾನೆಗಳಿಂದ ಮುಕ್ತಗೊಳಿಸಿ ಕಾಪಾಡಬೇಕು, ಈ ಷರತ್ತಿಗೆ ಒಪ್ಪಿದರೆ ಮಾತ್ರವೇ ನಾನು ದಸರಾ ಉದ್ಘಾಟನೆಗೆ ಬರುವುದಾಗಿ ಹೇಳಿದ್ದಾರೆ” ಎಂದು ಬರೆದುಕೊಳ್ಳಲಾಗಿತ್ತು. ಅಲ್ಲದೆ, ಶ್ರೀಗಳ ಈ ನಿರ್ಧಾರಕ್ಕೆ ರಾಜ್ಯವ್ಯಾಪಿ ಪ್ರಶಂಸೆ ವ್ಯಕ್ತವಾಗಿದೆ ಎಂದೂ ಸುಳ್ಳು ಬಿಂಬಿಸಲಾಗಿತ್ತು.
ಇದನ್ನೂ ಓದಿ: ಕೊಪ್ಪಳ: ದಸರಾ ಉದ್ಘಾಟಕರಾಗಿರುವ ಗವಿ ಸಿದ್ದೇಶ್ವರ ಶ್ರೀಗಳಿಗೆ ಬಹಿರಂಗ ಪತ್ರ; ಕಾರ್ಖಾನೆಗಳ ಮಾಲಿನ್ಯ ತಡೆಗೆ ಒತ್ತಡ ತರಲು ಮನವಿ
ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ಭಾರಿ ಸದ್ದು ಮಾಡುತ್ತಿದ್ದಂತೆಯೇ ಜಾಗೃತಗೊಂಡ ಕೊಪ್ಪಳ ಗವಿಮಠದ ಉನ್ನತ ಮೂಲಗಳು, ‘ಟಿವಿ9’ ಮೂಲಕ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ಅಧಿಕೃತ ಸ್ಪಷ್ಟನೆ ನೀಡಿದೆ. ದಸರಾ ಉದ್ಘಾಟನೆ ತಿರಸ್ಕಾರ ಅಥವಾ ಷರತ್ತು ವಿಧಿಸಿರುವ ಕುರಿತು ಹರಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು. ಶ್ರೀಮಠಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ವಿಚಾರ ಅಥವಾ ನಿರ್ಧಾರಗಳಿದ್ದಲ್ಲಿ ಅದನ್ನು ಗವಿಮಠದ ಅಧಿಕೃತ ಮಾಧ್ಯಮ ಪ್ರಕಟಣೆಗಳ ಮೂಲಕವೇ ತಿಳಿಸಲಾಗುತ್ತದೆ. ಹೀಗಾಗಿ ಜಾಲತಾಣಗಳಲ್ಲಿ ಬರುವ ಅನಾಮಧೇಯ ವದಂತಿಗಳನ್ನು ಯಾರೂ ನಂಬಬಾರದು ಎಂದು ವಿನಂತಿಸಲಾಗಿದೆ.
ಶ್ರೀಗಳ ವ್ಯಕ್ತಿತ್ವಕ್ಕೆ ಹಾಗೂ ಮಠದ ಗೌರವಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಇಂತಹ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ವೈರಲ್ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಮಠದ ಪರಮಪೂಜ್ಯ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರು ಉದ್ಘಾಟಿಸುವುದು ಸಂಪೂರ್ಣ ನಿಶ್ಚಿತವಾಗಿದ್ದು, ಈ ಕುರಿತು ಯಾವುದೇ ಅನುಮಾನ ಅಥವಾ ಗೊಂದಲಗಳಿಗೆ ಅವಕಾಶವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳ ಹಿನ್ನೆಲೆಯಲ್ಲಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಸಚಿವರು, ಗವಿಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ ವದಂತಿ ಹರಡುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಖುದ್ದು ಗವಿಸಿದ್ದೇಶ್ವರ ಶ್ರೀಗಳೊಂದಿಗೆ ಮಾತುಕತೆ ನಡೆಸಿದ ನಂತರವೇ ಈ ಬಾರಿಯ ಮೈಸೂರು ದಸರಾವನ್ನು ಶ್ರೀಗಳು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಿಸಲಾಗಿತ್ತು. ಸೆಪ್ಟೆಂಬರ್ 24ರಂದು ಸ್ವತಃ ಮುಖ್ಯಮಂತ್ರಿಗಳೇ ವಿಧಾನಸಭೆಯಲ್ಲೇ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ” ಎಂದು ತಿಳಿಸಿದರು. ಮುಖ್ಯಮಂತ್ರಿಗಳ ಅಧಿಕೃತ ಘೋಷಣೆಯ ನಂತರವೂ ಶ್ರೀಗಳು ಸರ್ಕಾರದ ಆಹ್ವಾನ ತಿರಸ್ಕರಿಸಿದ್ದಾರೆ ಎಂಬ ಸುಳ್ಳು ಮಾಹಿತಿಯನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದ್ದಾರೆ. ಗವಿಸಿದ್ದೇಶ್ವರ ಶ್ರೀಗಳು ದಸರಾ ಉದ್ಘಾಟನೆಗೆ ಒಪ್ಪಿಲ್ಲ ಎಂಬುದು ಸಂಪೂರ್ಣ ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದ ವಿಷಯ” ಎಂದಿದ್ದಾರೆ. ಸರ್ಕಾರ ಈಗಾಗಲೇ ಗವಿಮಠದೊಂದಿಗೆ ಸಂಪರ್ಕ ಸಾಧಿಸಿದ್ದು, ಸೆಪ್ಟೆಂಬರ್ 28ರಂದು (ಸೆ.28) ಸರ್ಕಾರದ ನಿಯೋಗ ಖುದ್ದು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಶ್ರೀಗಳಿಗೆ ಅಧಿಕೃತವಾಗಿ ದಸರಾ ಉದ್ಘಾಟನೆಯ ಆಹ್ವಾನ ಪತ್ರಿಕೆ ನೀಡಲು ದಿನಾಂಕ ನಿಗದಿಯಾಗಿದೆ. ಹೀಗಾಗಿ ಶ್ರೀಗಳ ಒಪ್ಪಿಗೆ ಇಲ್ಲ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇನ್ನು ನಾಡಹಬ್ಬ ಮೈಸೂರು ದಸರಾದಂತಹ ಪವಿತ್ರ ಕ್ರೀಡಾ-ಸಾಂಸ್ಕೃತಿಕ ಮಹೋತ್ಸವದ ಕುರಿತು ಆಧಾರರಹಿತ ಮಾಹಿತಿ ಹರಡಿ ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:33 pm, Sat, 26 September 26