ಕೊಪ್ಪಳ ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ನವಜಾತ ಶಿಶು?

ಇತ್ತೀಚೆಗೆ ಮಕ್ಕಳಿಗಾಗಿ ಹೆತ್ತವರು ಅನೇಕ ರೀತಿಯ ಸಂಕಷ್ಟಗಳನ್ನು ಪಡುತ್ತಿದ್ದಾರೆ. ಹತ್ತಾರು ರೀತಿಯ ವೈದ್ಯಕೀಯ ಚಿಕಿತ್ಸೆ, ನೂರಾರು ದೇವರಿಗೆ ಹರಕೆ ಹೊತ್ತರು ಕೂಡ ಅನೇಕರಿಗೆ ಮಕ್ಕಳಾಗುತ್ತಿಲ್ಲ. ಇನ್ನೊಂದೆಡೆ ಕೆಲವರಿಗೆ ಮಕ್ಕಳಾದರೂ ಕೂಡ ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶುಗಳು ಪ್ರಾಣ ಬಿಡುತ್ತಿವೆ. ಹೌದು, ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.

ಕೊಪ್ಪಳ ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ನವಜಾತ ಶಿಶು?
ಕೊಪ್ಪಳ ಜಿಲ್ಲಾಸ್ಪತ್ರೆ ನಿರ್ಲಕ್ಷ್ಯ ಆರೋಪ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 05, 2024 | 11:38 AM

ಕೊಪ್ಪಳ, ಏ.05:ಜಿಲ್ಲೆಯ ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಮದ ಲಕ್ಷ್ಮಿ ಗಿರೀಶ್ ಗೌಡ ಪಾಟೀಲ್ ಎನ್ನುವ ಮಹಿಳೆ ತನ್ನ ಮೊದಲ ಮಗುವಿನ ಹೆರಿಗೆಗಾಗಿ ಕೊಪ್ಪಳ(Koppala) ನಗರದಲ್ಲಿರುವ 100 ಬೆಡ್​ಗಳ ಸರ್ಕಾರಿ ಸುಸಜ್ಜಿತ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಸೋಮವಾರ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ಲಕ್ಷ್ಮಿ, ಮಂಗಳವಾರ ಮುಂಜಾನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹುಟ್ಟಿದಾಗ ಮಗು ಆರೋಗ್ಯವಾಗಿಯೇ ಇತ್ತಂತೆ. ಇದು ಹೆತ್ತವರು ಮತ್ತು ಸಂಬಂಧಿಗಳ ಸಂತಸಕ್ಕೆ ಕಾರಣವಾಗಿತ್ತು. ಆದ್ರೆ, ಇಂದು(ಏ.05) ನಸುಕಿನ ಜಾವದಲ್ಲಿ ಮಗು ಮೃತಪಟ್ಟಿದೆ. ನವಜಾತ ಶಿಶುವಿನ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಜಾಂಡೀಸ್​ನಿಂದ ಮಗು; ಯಾವುದೇ ವೈದ್ಯರ ನಿರ್ಲಕ್ಷ್ಯ ಇಲ್ಲ ಎಂದ ವೈದ್ಯರು

ನಿನ್ನೆ ಸಂಜೆಯಿಂದ ಯಾವುದೇ ವೈದ್ಯರು ರೌಂಡ್ಸ್​ಗೆ ಬಂದಿಲ್ಲವಂತೆ. ಅಷ್ಟೇ ಅಲ್ಲ, ಕಳೆದ ರಾತ್ರಿ ಮಗುವಿನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದಾಗ ಕೂಡ ಯಾರು ವೈದ್ಯರು ಬಂದು ನೋಡಿಲ್ಲವಂತೆ. ಇಂದು ಮುಂಜಾನೆ ಮಗು ಮೃತಪಟ್ಟ ನಂತರ, ಜಾಂಡೀಸ್ ನಿಂದ ಮಗು ಮೃತಪಟ್ಟಿದೆ. ಈ ರೀತಿಯ ಘಟನೆಗಳು ಆಗುತ್ತವೆ. ಇಲ್ಲಿ ಯಾವುದೇ ವೈದ್ಯರ ನಿರ್ಲಕ್ಷ್ಯ ಇಲ್ಲ ಎಂದು ಆಸ್ಪತ್ರೆಯ ವೈದ್ಯರು ಹೇಳ್ತಿದ್ದಾರಂತೆ. ಆದ್ರೆ, ಸರಿಯಾದ ಸಮಯಕ್ಕೆ ರೌಂಡ್ಸ್ ಬಂದಿದ್ದರೆ, ಮಗುವಿನ ಆರೋಗ್ಯವನ್ನು ತಪಾಸಣೆ ಮಾಡಿ ಸಮಸ್ಯೆ ಬಗ್ಗೆ ನಮಗೆ ಹೇಳಿದ್ದರೆ, ನಾವು ಬೇರಡೆಯಾದರೂ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತಿದ್ದೆವು. ಆದ್ರೆ, ಯಾವ ವೈದ್ಯರು ಬರಲಿಲ್ಲ. ನಮಗೇನು ಹೇಳಲಿಲ್ಲ. ಇದೀಗ ಮಗು ಸತ್ತಿದೆ ಎಂದು ಹೇಳುತ್ತಿದ್ದಾರೆ ಎಂದು ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕೊಪ್ಪಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೀರಿಗಾಗಿ ತತ್ವಾರ; ಸಿಬ್ಬಂದಿ ಡೊಂಟ್ ಕೇರ್

ಇತ್ತ ನರ್ಸ್​ಗಳು ಕೂಡ ಸಾರ್ವಜನಿಕರ ಜೊತೆ ಸರಿಯಾಗಿ ಸ್ಪಂಧಿಸುವುದಿಲ್ಲ. ಬರಿ ಎಲ್ಲದಕ್ಕೂ ಹಣ ಕೇಳುತ್ತಾರೆ. ಹೀಗಾಗಿ ತಪ್ಪಿತಸ್ಥ ವೈದ್ಯರು ಮತ್ತು ನರ್ಸ್​ಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬದವರು ಆಗ್ರಹಿಸಿದ್ದಾರೆ. ವಜಾತ ಶಿಶುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ಆದ್ರೆ, ಇಲ್ಲಿ ಯಾವುದೇ ನಿರ್ಲಕ್ಷ್ಯವಾಗಿಲ್ಲ. ಜಾಂಡೀಸ್ ಹೆಚ್ಚಾದ ಕಾರಣ ಮಗು ಮೃತಪಟ್ಟಿದೆ. ಮಗುವಿಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗಿತ್ತು ಎಂದು ವೈದ್ಯರು ಹೇಳುತ್ತಿದ್ದಾರೆ. ಆದ್ರೆ, ಹುಸುಗೂಸಗಳ ಜೀವದ ಜೊತೆಗೆ ವೈದ್ಯರು ಮತ್ತು ನರ್ಸ್ ಗಳು ಚೆಲ್ಲಾಟವಾಡದೇ, ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಕೆಲಸವನ್ನು ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ