ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ, ಮಗು ಸಾವು
ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ ಮತ್ತು ಮಗು ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದಾರೆ. ಆಡೂರ್ ಗ್ರಾಮದ ನಿವಾಸಿಯಾಗಿದ್ದ ರೇಣುಕಾ, ಹೆರಿಗೆ ಸಮಸ್ಯೆಯಿಂದಾಗಿ ಕುಷ್ಟಗಿ ಆಸ್ಪತ್ರೆಯಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಸಿಸೇರಿಯನ್ ಶಸ್ತ್ರಚಿಕಿತ್ಸೆಯ ನಂತರ ಹೈಬಿಪಿ ಮತ್ತು ಹೃದಯಾಘಾತದಿಂದ ಮೃತಪಟ್ಟಿದ್ದು, ಮಗು ಡೆಲಿವರಿಗೂ ಮುನ್ನವೇ ಮೃತಪಟ್ಟಿದೆ.
ಕೊಪ್ಪಳ, ಡಿಸೆಂಬರ್ 31: ಕರ್ನಾಟಕದಾದ್ಯಂತ ಬಾಣಂತಿಯರ (Maternal mortality) ಮರಣ ಮೃದಂಗ ಮುಂದುವರೆದಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಮಗು ಗರ್ಭದಲ್ಲೇ ಮೃತಪಟ್ಟರೆ, ಚಿಕಿತ್ಸೆ ಫಲಿಸದೆ ಬೆಳಗಾವಿ ಮೂಲದ 8 ತಿಂಗಳ ಗರ್ಭಿಣಿ ಇಂದು ಸಾವನ್ನಪ್ಪಿದ್ದಾರೆ. ಈ ನಡುವೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ಕಣ್ಣು ಮುಚ್ಚಿದ್ದಾರೆ.
ಜಿಲ್ಲೆಯ ಕುಕನೂರು ತಾಲೂಕಿನ ಆಡೂರ್ ಗ್ರಾಮದ ನಿವಾಸಿ ರೇಣುಕಾ ಪ್ರಕಾಶ್ ಹಿರೇಮನಿ ಹೆರಿಗೆಗಾಗಿ ರಾತ್ರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ನಿನ್ನೆ ಕುಷ್ಟಗಿ ಆಸ್ಪತ್ರೆಯಿಂದ ಜಿಲ್ಲಾ ಆಸ್ಪತ್ರೆಗೆ ಬಂದಿದ್ದ ರೇಣುಕಾಗೆ ಮುಂಜಾನೆ 2:30ರ ಸುಮಾರಿಗೆ ಹೆರಿಗೆ ಆಗಿತ್ತು. ಆದರೆ ಡೆಲಿವರಿಗೂ ಮೊದಲೇ ಮಗು ಮೃತಪಟ್ಟಿದ್ದು, ಸಿಜೇರಿಯನ್ ಮಾಡಿ ವೈದ್ಯರು ಮಗುವನ್ನು ಹೊರ ತೆಗೆದಿದ್ದಾರೆ. ಈ ಸಮಯದಲ್ಲಿ ಹೈಬಿಪಿ ಮತ್ತು ಹೃದಯಾಘಾತದಿಂದ ರೇಣುಕಾ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಸಕಾಲಕ್ಕೆ ಚಿಕಿತ್ಸೆ ಸಿಗದೇ ಮಗು, ಗರ್ಭಿಣಿ ಸಾವು: ಪತ್ನಿ ಸಾವಿನಿಂದ ಮನನೊಂದು ಪತಿ ಆತ್ಮಹತ್ಯೆಗೆ ಯತ್ನ
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ಮಾಸುವ ಮುನ್ನವೇ, ಇತ್ತೀಚೆಗೆ ವಿಜಯನಗರ ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವಾಗಿದೆ ಅನ್ನೊ ಆರೋಪ ಕೇಳಿಬಂದಿತ್ತು. ಸಿಜರಿನ್ ಹೆರಿಗೆಯಾಗಿ ಐದು ದಿನಗಳ ಬಳಿಕ ಬಾಣಂತಿ ಸಾವಾಗಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತಾ ಮೃತಳ ಪೋಷಕರು ಆಸ್ಪತ್ರೆ ಮುಂದೆ ಕಣ್ಣೀರು ಹಾಕಿದ್ದರು.
ಇನ್ನು ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಳಪೆ IV ದ್ರಾವಣದಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ಐವರ ಬಾಣಂತಿಯರ ಸರಣಿ ಸಾವಾಗಿತ್ತು. ಈ ಪ್ರಕರಣ ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿತ್ತು. ಈ ಪ್ರಕರಣ ಮಾಸುವ ಮುನ್ನವೇ ವಿಜಯನಗರ ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೇ ಗರ್ಭದಲ್ಲೇ ಮಗು ಸಾವು: ಸಾವು ಬದುಕಿನ ನಡುವೆ ಗರ್ಭಿಣಿ ಹೋರಾಟ
ಬಳ್ಳಾರಿ, ಬೆಳಗಾವಿ ಬೆನ್ನಲ್ಲೇ ಇತ್ತೀಚೆಗೆ ಬೆಂಗಳೂರಿನಲ್ಲೂ ಇಬ್ಬರು ಬಾಣಂತಿಯರು ಉಸಿರು ನಿಲ್ಲಿಸಿರೋದು ಆತಂಕಕ್ಕೆ ಕಾರಣವಾಗಿತ್ತು. ಅದರಲ್ಲೂ ಮಗುವಿಗೆ ಜನ್ಮ ನೀಡಿದ್ದ ಮರುದಿನವೇ ಬಾಣಂತಿ ಉಸಿರು ನಿಲ್ಲಿಸಿರೋದು ಆಕ್ರೋಶ ಹಾಗೂ ಆಕ್ರಂದನಕ್ಕೆ ಕಾರಣವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:24 pm, Tue, 31 December 24