ಕೊಪ್ಪಳ: ಬಸ್ಸಾಪುರ ಗ್ರಾಮದಲ್ಲಿ ಚಿರತೆ ಹಾವಳಿ, ಆತಂಕದಲ್ಲಿಯೇ ಕಾಲ ಕಳೆಯುತ್ತಿರುವ ಜನ
ಕೊಪ್ಪಳ ತಾಲೂಕಿನ ಬಸ್ಸಾಪುರ ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು ಜನ ಆತಂಕಪಡುವಂತಾಗಿದೆ. ಬೇರಡೆಯಿಂದ ಈ ಬಾಗಕ್ಕೆ ಅರಣ್ಯ ಇಲಾಖೆಯವರು ಚಿರತೆಗಳನ್ನು ತಂದು ಬಿಟ್ಟಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಇದಕ್ಕೆ ಅರಣ್ಯ ಇಲಾಖೆ ಹೇಳುವುದೇನು? ಚಿರತೆ ಸೆರೆಗೆ ಕಾರ್ಯಾಚರಣೆ ಯಾಕೆ ನಡೆಯುತ್ತಿಲ್ಲ ಎಂಬ ವಿವರ ಇಲ್ಲಿದೆ.
ಕೊಪ್ಪಳ, ಜನವರಿ 23: ಕೊಪ್ಪಳ (Koppal) ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ಚಿರತೆ ಹಾವಳಿ ಅತಿಯಾಗಿದ್ದು, ಬೆಟ್ಟಗುಡ್ಡಗಳ ಮೇಲಿರುವ ಚಿರತೆಗಳೇ ಇದೀಗ ಬಸ್ಸಾಪುರ (Bassapur) ಗ್ರಾಮದ ಜನರ ಎದೆಬಡಿತ ಹೆಚ್ಚಾಗುವಂತೆ ಮಾಡಿವೆ. ಬಸ್ಸಾಪುರ ಗ್ರಾಮದ ಸುತ್ತಮುತ್ತ ಕಲ್ಲುಬಂಡೆಯ ಗುಡ್ಡವಿದೆ. ಗುಡ್ಡಕ್ಕೆ ಹೊಂದಿಕೊಂಡಂತೆ ಅನೇಕ ಮನೆಗಳಿವೆ. ಇದೀಗ ಈ ಮನೆಯವರಿಗೆ ಕಳೆದ ಕೆಲ ದಿನಗಳಿಂದ ಆತಂಕ ಆರಂಭವಾಗಿದೆ. ಆತಂಕವನ್ನು ಹೆಚ್ಚಿಸಿರೋದು ಇದೇ ಚಿರತೆಗಳು. ಕಳೆದ ಕೆಲ ದಿನಗಳಿಂದ ಪ್ರತಿನಿತ್ಯ ಗುಡ್ಡದ ಮೇಲೆ ಚಿರತೆಗಳು ಪ್ರತ್ಯೇಕ್ಷವಾಗುತ್ತಿವೆ. ಹಾಗಂತ ಈ ಗ್ರಾಮದ ಜನರಿಗೆ ಚಿರತೆಗಳು ಅಪರೂಪವೇನಲ್ಲ.
ಗುಡ್ಡಕ್ಕೆ ಹೊಂದಿಕೊಂಡೇ ಇರುವುದರಿಂದ ಮತ್ತು ಈ ಬಾಗದಲ್ಲಿ ಚಿರತೆಗಳು ಹೆಚ್ಚು ಇರುವುದರಿಂದ ಅವು ಆಗಾಗ ಬರುವುದು, ಹೋಗುವದು ಗ್ರಾಮದ ಜನರಿಗೆ ಸಾಮಾನ್ಯವಂತೆ. ಆದ್ರೆ ಇದೀಗ ಪ್ರತ್ಯಕ್ಷವಾಗುತ್ತಿರುವ ಚಿರತೆಗಳು ಗ್ರಾಮದ ಜನರ ಭಯವನ್ನು ಹೆಚ್ಚಿಸುತ್ತಿವೆ. ಗ್ರಾಮಕ್ಕೆ ರಾತ್ರಿ ಸಮಯದಲ್ಲಿ ನುಗ್ಗುವ ಚಿರತೆಗಳು ಕುರಿ, ನಾಯಿ ಸೇರಿದಂತೆ ಅನೇಕ ಪ್ರಾಣಿಗಳನ್ನು ತಿಂದು ಹೋಗುತ್ತಿವೆ. ಜೊತೆಗೆ ಸಂಜೆಯ ಸಮಯದಲ್ಲಿಯೇ ಗ್ರಾಮದ ಸಮೀಪ ಬರುತ್ತಿರುವುದರಿಂದ ಗ್ರಾಮದ ಜನರು, ಹೊರಗಡೆ ಹೋಗಲು ಕೂಡಾ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮೊದಲೆಲ್ಲಾ ಚಿರತೆಗಳು ಬಂದಾಗ, ನಾವು ಟಾರ್ಚ್ ಹಾಕಿದರೆ ಅವು ಹೆದರಿ ಓಡಿ ಹೋಗ್ತಿದ್ದವು. ಆದ್ರೆ ಇದೀಗ ಇರೋ ಚಿರತೆಗಳು ಟಾರ್ಚ್ ಹಾಕಿದ್ರು ಕೂಡಾ ಬೆಳಕು ಬಂದಕಡೆಯೇ ಬರ್ತಿವೆ. ಮೊದಲು ಚಿರತೆಗಳು ಗ್ರಾಮಕ್ಕೆ ಬರ್ತಿರಲಿಲ್ಲ. ಆದ್ರೆ ಇದೀಗ ಗ್ರಾಮಕ್ಕೆ ಬಂದು ಪ್ರಾಣಿಗಳನ್ನು ಬೇಟೆಯಾಡಿ ಹೋಗ್ತಿವೆ. ಕಳೆದ ಒಂದು ವಾರದಲ್ಲಿ ಎರಡು ನಾಯಿ, ಮೇಕೆಯನ್ನು ತಿಂದು ಹೋಗಿವೆ. ಮನುಷ್ಯರು ಸಿಕ್ಕರೆ ಅವರನ್ನು ಕೂಡಾ ಅವು ಬಿಡೋದಿಲ್ಲ. ಹೀಗಾಗಿ ಚಿರತೆಗಳನ್ನು ಹಿಡಿಯುವ ಕೆಲಸ ಮಾಡಬೇಕು ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೇರಡೆಯಿಂದ ಈ ಬಾಗಕ್ಕೆ ಅರಣ್ಯ ಇಲಾಖೆಯವರು ಚಿರತೆಗಳನ್ನು ತಂದು ಬಿಟ್ಟಿದ್ದಾರೆ. ಮೂರು ಚಿರತೆಗಳು ಆಗಾಗ ಗುಡ್ಡದ ಮೇಲೆ ಪ್ರತ್ಯಕ್ಷವಾಗುತ್ತಲೇ ಇವೆ. ಅವುಗಳನ್ನು ನೋಡಿದ್ರೆ ಇದೀಗ ನಮಗೆ ಭಯ ಆರಂಭವಾಗುತ್ತಿದೆ ಅಂತ ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಮಂದಿರ ಉದ್ಘಾಟನೆ ವೇಳೆ ಶಾಂತಿ ಕದಡುವ ಫೇಸ್ ಬುಕ್ ಪೋಸ್ಟ್: ಕೊಪ್ಪಳ ಪೊಲೀಸರಿಂದ FIR ದಾಖಲು
ಚಿರತೆ ಹಾವಳಿ ಬಗ್ಗೆ ಅರಣ್ಯ ಇಲಾಖೆಯವರಿಗೆ ಗ್ರಾಮದ ಜನರು ಹತ್ತಾರು ಬಾರಿ ಮನವಿ ಮಾಡಿದ್ದಾರೆ. ಗ್ರಾಮಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ರಾತ್ರಿ ಸಮಯದಲ್ಲಿ ಓಡಾಡಬೇಡಿ ಅಂತ ಹೇಳಿ ಹೋಗಿದ್ದಾರೆಯೇ ವಿನಃ ಬೋನು ಇಟ್ಟು ಚಿರತೆ ಹಿಡಿಯುವ ಕೆಲಸ ಮಾಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಅರಣ್ಯ ಇಲಾಖೆಯವರನ್ನು ಈ ಬಗ್ಗೆ ಕೇಳಿದ್ರೆ ಅವರು, ಸದ್ಯ ಇರುವ ಮನೆಗಳು ಅರಣ್ಯ ಇಲಾಖೆಯ ಜಾಗದಲ್ಲಿಯೇ ಅತಿಕ್ರಮಣ ಮಾಡಿ ಕಟ್ಟಿರುವಂಥವು. ಹೀಗಾಗಿ ಅರಣ್ಯ ಇಲಾಖೆಯ ಜಾಗದಲ್ಲಿಯೇ ಬೋನು ಇಟ್ಟು ಚಿರತೆಗಳನ್ನು ಸೆರೆ ಹಿಡಿಯಲು ಆಗದು ಎಂದು ಹೇಳ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ