ಮಕ್ಕಳನ್ನು ಕೊಂದು ತಾಯಿಯೂ ಆತ್ಮಹತ್ಯೆ: ತುತ್ತು ಹಾಕಿದ ಕೈಯಲ್ಲೇ ನೇಣು ಬಿಗಿದ ಹೆತ್ತ ಕರುಳು
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೆನಕಲ್ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಇಬ್ಬರು ಮಕ್ಕಳನ್ನ ಕೊಂದು ಬಳಿಕ ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಕೊಪ್ಪಳ ಎಸ್ಪಿ ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕೊಪ್ಪಳ, ಅಕ್ಟೋಬರ್ 27: ಇಬ್ಬರು ಮಕ್ಕಳನ್ನ ಕೊಂದು (kill) ತಾಯಿಯೂ (mother) ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ಬೆನಕಲ್ ಗ್ರಾಮದಲ್ಲಿ ನಡೆದಿದೆ. ಮಕ್ಕಳಾದ ರಮೇಶ್(4), ಜಾನು(2) ಮತ್ತು ತಾಯಿ ಲಕ್ಷ್ಮವ್ವ ಮೃತರು. ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಎಸ್ಪಿ ರಾಮ್ ಅರಸಿದ್ದಿ ಹೇಳಿದ್ದಿಷ್ಟು
ಇನ್ನು ಸ್ಥಳಕ್ಕೆ ಕೊಪ್ಪಳ ಎಸ್ಪಿ ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ಬಳಿಕ ಮಾತನಾಡಿದ್ದು, ಬೆಣಕಲ್ ಗ್ರಾಮದಲ್ಲಿ 30 ವರ್ಷದ ಲಕ್ಷ್ಮವ್ವ ಬಜಂತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೊದಲು ಮಕ್ಕಳಿಗೆ ನೇಣು ಹಾಕಿದ್ದಾಳೆ. ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದುವರೆಗೂ ಯಾರು ದೂರು ಕೊಟ್ಟಿಲ್ಲ ಎಂದರು.
ಲಕ್ಷ್ಮವ್ವ 2016ರಲ್ಲಿ ವಿವಾಹವಾಗಿದ್ದರು. ಗಂಡ ಹಾಗೂ ಅತ್ತೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಒಂದೇ ಕೊಠಡಿಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ಹೇಳುತ್ತಿದ್ದಾರೆ. ದೂರು ಕೊಟ್ಟ ಬಳಿಕ ಪರಿಶೀಲನೆ ಮಾಡುತ್ತೇವೆ ಎಂದು ಎಸ್ಪಿ ರಾಮ್ ಅರಸಿದ್ದಿ ಹೇಳಿದ್ದಾರೆ.
ಬಳೆಯೊಳಗೆ ಸಾವಿನ ಸೀಕ್ರೇಟ್?
ಲಕ್ಷ್ಮವ್ವ, ಸಾವಿಗೆ ಕಾರಣ ಬರೆದು ಆತ್ಮಹತ್ಯೆ ಮಾಡಿಕೊಂಡರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಏಕೆಂದರೆ ಅವರ ಬಳೆಯಲ್ಲಿ ಮುಚ್ಚಿದ ಲಕೋಟೆಯೊಂದು ಪತ್ತೆ ಆಗಿದೆ. ಸಾಯುವ ಮುನ್ನ ತಾವು ಬರೆದ ಪತ್ರವನ್ನು ತಮ್ಮ ಕೈಗಳ ಬಳೆಯಲ್ಲಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಮೂವರ ಸಾವಿನ ಸೀಕ್ರೇಟ್ ಬಳೆಯಲ್ಲಿ ಅಡಗಿದೆಯಾ ಎಂಬ ಅನುಮಾನಗಳು ಶುರುವಾಗಿವೆ. ಪತ್ರದಲ್ಲಿ ಸಾವಿನ ಕುರಿತು ಬರೆದಿರುವ ಸಾಧ್ಯತೆ ಇದೆ.
ಕಾರು ಡಿಕ್ಕಿಯಿಂದ ರಸ್ತೆಯಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗು ಸಾವು
ರಸ್ತೆಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿರುವಂತಹ ಘಟನೆ ಶಿವಮೊಗ್ಗ ಹೊರವಲಯದ ವಿರುಪಿನಕೊಪ್ಪದಲ್ಲಿ ನಡೆದಿದೆ. ವಿನಯ್ ಮೃತ ಮಗು. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಳ್ಳಾರಿ: ಕಿಡ್ನಾಪ್; ಬೇಡಿಕೆ ಇಟ್ಟಷ್ಟು ಹಣ ಕೊಟ್ಟಿಲ್ಲವೆಂದು ಚಿನ್ನದಂಗಡಿ ವರ್ತಕನ ಹತ್ಯೆ
ಕೋಟೆಗಂಗೂರು ಕಡೆಯಿಂದ ಸಾಗರ ರಸ್ತೆಯತ್ತ ಕಾರು ಸಾಗುತ್ತಿತ್ತು. ಕಾರು ಡಿಕ್ಕಿಯಾದ ರಭಸಕ್ಕೆ ವಿನಯ್‌ನ ತಲೆ ಮತ್ತು ಕೈ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ತಕ್ಷಣ ಮಗುವನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಗು ವಿನಯ್ ಕೊನೆಯುಸಿರೆಳೆದಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:22 pm, Mon, 27 October 25



