ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ-ಮಗು ಸಾವು: ಕುಟುಂಬಸ್ಥರ ಆರೋಪ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ವಿಠಲಾಪುರ ಗ್ರಾಮದ ಲಕ್ಷ್ಮಿ ಎಂಬುವರಿಗೆ ಕಾಣಿಸಿಕೊಂಡಿದೆ. ಅವರನ್ನು ತಾವರೇಗಾರ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಯಿತು. ಆದರೆ ದುರಾದೃಷ್ಟವಶಾತ ಹೆರಿಗೆ ಸಮಯದಲ್ಲಿ ತಾಯಿ-ಮಗು ಮೃತಪಟ್ಟಿದ್ದಾರೆ. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ಕುಟುಂಬದವರು ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೊಪ್ಪಳ, ಮೇ 01: ವೈದ್ಯರ ನಿರ್ಲಕ್ಷ್ಯಕ್ಕೆ ಹೆರಿಗೆ ಸಮಯದಲ್ಲಿ ತಾಯಿ ಮತ್ತು ಮಗು ಮೃತಪಟ್ಟ ಘಟನೆ ಕುಷ್ಟಗಿ (Kustagi) ತಾಲೂಕಿನ ತಾವರೇಗಾರ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಲಕ್ಷ್ಮೀ (20) ಮೃತ ಗರ್ಭಿಣಿ. ತಾಯಿ ಮತ್ತು ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ಕುಟುಂಬದವರು ಮತ್ತು ಗ್ರಾಮಸ್ಥರು, ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ವಿಠಲಾಪುರ ಗ್ರಾಮದ ಲಕ್ಷ್ಮಿ ಎಂಬುವರಿಗೆ ಸೋಮವಾರ (ಏ.29)ರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಮಂಗಳವಾರ (ಏ.30) ರ ಮುಂಜಾನೆ ತಾವರಗೇರಾ ಗ್ರಾಮದಲ್ಲಿರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಆದರೆ ಮಂಗಳವಾರ ಸಂಜೆ ಹೆರಿಗೆ ಸಮಯದಲ್ಲಿ ಲಕ್ಷ್ಮೀ ಮೃತಪಟ್ಟಿದ್ದಾರೆ. ಇನ್ನು ಹೊಟ್ಟೆಯಲ್ಲಿದ್ದ ಶಿಶು ಕೂಡ ಮೃತಪಟ್ಟಿದೆ. ಇನ್ನು ಗರ್ಭಿಣಿ ಮತ್ತು ಶಿಶುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಸೂಕ್ತ ಸಮಯದಲ್ಲಿ ಹೆರಿಗೆ ಮಾಡದ ಹಿನ್ನೆಲೆಯಲ್ಲಿ ತಾಯಿ ಮತ್ತು ಮಗು ಮೃತಪಟ್ಟಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹೆತ್ತ ಮಕ್ಕಳಿಗೆ ವಿಷ ಉಣಿಸಿದ ತಾಯಿ, ಬಿಸ್ಕತ್ತು ತಿಂದು ಮಗು ಅಸ್ವಸ್ಥ
ಇನ್ನು ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಟುಂಬದವರು ಮತ್ತು ಗ್ರಾಮಸ್ಥರು ಕಳೆದ ರಾತ್ರಿ ಆಸ್ಪತ್ರೆ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ, ಧರಣಿ ನಿರತರ ಮನವೊಲಿಸುವ ಕೆಲಸ ಮಾಡಿದರು ಕೂಡ ಸಫಲವಾಗಲಿಲ್ಲ.
ಸಮುದ್ರದಲ್ಲಿ ಮುಳುಗಿ ತಾಯಿ, ಮಗಳು ಸಾವು
ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರದ ಬೈತಖೋಲ್ ಸಮುದ್ರದಲ್ಲಿ ಕಪ್ಪೆಚಿಪ್ಪು ತೆಗೆಯುವಾಗ ಮುಳುಗಿ ತಾಯಿ, ಮಗಳು ಮೃತಪಟ್ಟಿದ್ದಾರೆ. ತಾಯಿ ರೇಣುಕಾ, ಪುತ್ರಿ ಸುಜಾತ ಮೃತ ದುರ್ದೈವಿಗಳು. ಘಟನಾ ಸ್ಥಳಕ್ಕೆ ಭೇಟಿ ಕಾರವಾರ ಪೊಲೀಸರು ನೀಡಿ ಪರಿಶೀಲಿಸಿದ್ದಾರೆ.
ಕಾರ್ಮಿಕ ದಿನಾಚರಣೆಯ ದಿನವೇ ಕಾರ್ಮಿಕನ ಸಾವು
ಬೆಂಗಳೂರು ಗ್ರಾಮಾಂತರ: ಹೊಸಕೋಟೆ ನಗರದ ಬಿಎಂಟಿಸಿ ಬಸ್ ಡಿಪೋ ಬಳಿ ವಿದ್ಯುತ್ ತಂತಿ ತಗುಲಿ ಕೇರಳ ಮೂಲದ ಕಾರ್ಮಿಕ ಮೃತಪಟ್ಟಿದ್ದಾನೆ. ಅಶ್ರಫ್ (23) ಮೃತ ದುರ್ದೈವಿ. ಅಶ್ರಫ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದನು. ರಾತ್ರಿ 12 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮಹಡಿ ಮೇಲೆ ಹೋಗಿದ್ದನು. ಈ ವೇಳೆ ಮಹಡಿ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿದೆ. ಕಾರ್ಮಿಕ ಅಶ್ರಫ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ