ಕೊಪ್ಪಳ, ಡಿಸೆಂಬರ್ 25: ಕೆಲವರು ಇದ್ದಾಗಲೂ ತಮ್ಮ ಜೀವನವನ್ನು ಸಾರ್ಥಕವಾಗಿಸಿಕೊಳ್ಳುತ್ತಾರೆ. ಸತ್ತಮೇಲೂ ಕೂಡಾ ಸಾರ್ಥಕ ಮಾಡಿಕೊಳ್ಳುತ್ತಾರೆ. ಹೌದು, ಅಪಘಾತದಲ್ಲಿ ಗಂಭೀರವಾಗಿ ಗಾಯವಾಗಿ ಮೆದುಳು ನಿಷ್ಕ್ರಯಗೊಂಡು ಕೋಮಾಕ್ಕೆ ಜಾರಿದ್ದ ಕೊಪ್ಪಳದ (Koppal) ಭಾಗ್ಯ ನಗರದ ನಿವಾಸಿ, ಗೀತಾ ಸಂಗನಗೌಡರ (42) ಎಂಬುವರು ಸೋಮವಾರ ಸಂಜೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಿಧನದ ಬಳಿಕವೂ ಅಂಗಾಂಗಗಳು ಜೀವಂತವಾಗಿ ಇರಲಿ ಅಂತ ಕುಟುಂಬ, ಗೀತಾ ಸಂಗನಗೌಡರ ಅವರ ಅಂಗಾಂಗಗಳನ್ನು ದಾನ ಮಾಡಿದೆ. ಅಂಗಾಂಗಗಳು ಏಳು ಜನರ ಜೀವಕ್ಕೆ ಆಧಾರವಾಗಿವೆ.
ಡಿಸೆಂಬರ್ 15 ರಂದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿದ್ದ ಮಗಳನ್ನು ಮಾತನಾಡಿಸಿಕೊಂಡು, ಶಿವಮೊಗ್ಗ ಮಾರ್ಗವಾಗಿ ಗೀತಾ ಮತ್ತು ಅವರ ಪತಿ ಸೇರಿದಂತೆ ನಾಲ್ಕು ಜನರ ಕುಟುಂಬ ಮರಳಿ ಕೊಪ್ಪಳಕ್ಕೆ ಬರುತ್ತಿದ್ದರು.
ಆದರೆ, ಶಿವಮೊಗ್ಗ ಹೊರವಲಯದಲ್ಲಿ ಎದುರಿಗೆ ಬಂದಿದ್ದ ಇನ್ನೋವಾ ಕಾರು, ಗೀತಾ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಗೀತಾ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದರೇ, ಗೀತಾ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಗೀತಾ ಅವರ ಮೆದುಳು ನಿಷ್ಕ್ರೀಯಗೊಂಡಿದ್ದರಿಂದ, ಕೋಮಾಕ್ಕೆ ಜಾರಿದ್ದರು. ಹೀಗಾಗಿ, ಡಿಸೆಂಬರ್ 19 ರಂದು ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಯಿತು.
ಆದರೆ, ಮೆದುಳು ನಿಷ್ಕ್ರಿಯಗೊಂಡಿದ್ದರಿಂದ, ಗೀತಾರನ್ನು ಉಳಿಸಿಕೊಳ್ಳಲು ವೈದ್ಯರ ಪ್ರಯತ್ನ ಫಲ ನೀಡಲಿಲ್ಲ. ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಆಸ್ಪತ್ರೆಯ ವೈದ್ಯರು, ಅಂಗಾಂಗ ದಾನದ ಬಗ್ಗೆ ಕುಟುಂಬದಸ್ಥರಿಗೆ ಹೇಳಿದರು. ಇದಕ್ಕೆ ಗೀತಾ ಕುಟುಂಬದವರು ಒಪ್ಪಿಗೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲೇ ಮೊದಲ ಬಾರಿಗೆ ಮೂಳೆ ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಯುವಕ
ಹೀಗಾಗಿ, ಸೋಮವಾರ ಕಿಡ್ನಿ, ಲಿವರ್, ಹೃದಯ, ಕಣ್ಣುಗಳನ್ನು ತಗೆದು ಅವಶ್ಯಕತೆ ಇದ್ದ ಏಳು ಜನರಿಗೆ ಹಾಕಲಾಗಿದೆ. ಮಂಗಳವಾರ ಮುಂಜಾನೆ ಮೃತ ಗೀತಾರ ಪ್ರಾರ್ಥಿವ ಶರೀರಕ್ಕೆ ಗೌರವಪೂರ್ಣ ನಮನ ಸಲ್ಲಿಸಿ, ಪ್ರಾರ್ಥಿವ ಶರೀರವನ್ನು ಕೊಪ್ಪಳಕ್ಕೆ ಕಳುಹಿಸಿ ಕೊಟ್ಟರು. ಇಂದು ಮಧ್ಯಾಹ್ನದ ಹೊತ್ತಿಗೆ ಪ್ರಾರ್ಥಿವ ಶರೀರವನ್ನು ಕೊಪ್ಪಳಕ್ಕೆ ತಂದ ಕುಟುಂಬ, ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಕುಟುಂಬದವರು ಮತ್ತು ಸಾರ್ವಜನಿಕರು ಅಂತಿಮ ದರ್ಶನ ಪಡೆದರು.
ಒಂದಡೆ ಗೀತಾಳನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿದ್ದರೇ, ಇನ್ನೊಂದಡೆ ಅವರ ಅಂಗಾಂಗಗಳು ಏಳು ಜನರಿಗೆ ಜೀವ ಉಳಿಸಿಕೊಳ್ಳಲು ನೆರವಾಗಿದ್ದು ಕುಟುಂಬದವರಿಗೆ ಸ್ವಲ್ಪ ತೃಪ್ತಿ ನೀಡಿದೆ. ಸಾವಿನಲ್ಲಿ ಸಾರ್ಥಕತೆ ಮೆರೆಯುವ ಮೂಲಕ ಗೀತಾ ಏಳು ಜನರ ಜೀವಕ್ಕೆ ನೆರವಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:09 am, Wed, 25 December 24