ವೃದ್ದನ ಮೇಲೆ ಹಲ್ಲೆ ಮಾಡಿ ಜೈ ಶ್ರೀರಾಮ ಹೇಳುವಂತೆ ಪೀಡಿಸಿದ ಆರೋಪ; ಆರೋಪಿಗಳ ಸಿಕ್ಕ ನಂತರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 06, 2023 | 3:55 PM

ಕೊಪ್ಪಳ ಜಿಲ್ಲೆಯಲ್ಲಿ ಮುಸ್ಲಿಂ ಧರ್ಮದ ಅಂಧ ವೃದ್ದನಿಗೆ ಜೈ ಶ್ರೀರಾಮ ಎನ್ನುವಂತೆ ಪೀಡಿಸಿ ಹಲ್ಲೆ ಮಾಡಿ, ಗಡ್ಡವನ್ನು ಕತ್ತರಿಸಲಾಗಿದೆ ಎಂದು ಆರೋಪಿಸಿದ ಘಟನೆ ರಾಜ್ಯಾದ್ಯಂತ ತೀರ್ವ ಸಂಚಲನ ಮೂಡಿಸಿತ್ತು. ಈ ಘಟನೆಯಿಂದ ಎರಡು ಧರ್ಮದ ಜನರ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಕೂಡ ಕಾರಣವಾಗಿತ್ತು. ಆದ್ರೆ, ಆರೋಪಿಗಳ ಬಂಧನದ ನಂತರ ಪ್ರಕರಣಕ್ಕೆ ಬಿಗ್ ಟ್ವೀಸ್ಟ್ ಸಿಕ್ಕಿದೆ. 

ವೃದ್ದನ ಮೇಲೆ ಹಲ್ಲೆ ಮಾಡಿ ಜೈ ಶ್ರೀರಾಮ ಹೇಳುವಂತೆ ಪೀಡಿಸಿದ ಆರೋಪ; ಆರೋಪಿಗಳ ಸಿಕ್ಕ ನಂತರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಅಂಧ ವ್ಯಕ್ತಿ, ಬಂಧಿತ ಆರೋಪಿಗಳು
Follow us on

ಕೊಪ್ಪಳ, ಡಿ.06: ಜಿಲ್ಲೆಯ ಗಂಗಾವತಿ(Gangavati) ಪಟ್ಟಣದಲ್ಲಿ ಕಳೆದ ನವಂಬರ್ 25 ರಂದು ಮುಸ್ಲಿಂ ಧರ್ಮದ ಅಂಧ ವೃದ್ದನ ಮೇಲೆ ಮತ್ತೊಂದು ಧರ್ಮದ ದುಷ್ಕರ್ಮಿಗಳು ಹಲ್ಲೆ ಮಾಡಿ, ಜೈ ಶ್ರೀರಾಮ ಘೋಷಣೆ ಕೂಗಿಸಿ, ಗಡ್ಡಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ ಪ್ರಕರಣ, ರಾಜ್ಯಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದು, ಗಂಗಾವತಿ ನಗರದ ಕುವೆಂಪು ಬಡಾವಣೆಯ ನಿವಾಸಿಯಾಗಿರುವ ಸಾಗರ್ ಮತ್ತು ನರಸಪ್ಪ ಬಂಧಿತರು. ಸಾಗರ್ ಈ ಹಿಂದೆ ಸಾಪ್ಟವೇರ್ ಎಂಜನೀಯರ್ ಆಗಿ ಕೆಲಸ ಮಾಡಿದ್ದನಂತೆ. ಆದ್ರೆ, ಆರೋಪಿಗಳು ಪತ್ತೆಯಾದ ನಂತರ ಪ್ರಕರಣ ಉಲ್ಟಾ ಹೊಡೆದಿದ್ದು, ಆರೋಪಿಗಳು ಕೋಮು ಧ್ವೇಷದಿಂದ ವೃದ್ದನ ಮೇಲೆ ಹಲ್ಲೆ ಮಾಡಿಲ್ಲ ಎಂದು ತನಿಖೆ ವೇಳೆ ಬಯಲಾಗಿದೆ.

ಪ್ರಕರಣಕ್ಕೆ ಬಿಗ್​ ಟ್ವೀಸ್ಟ್​

ನ. 25 ರಂದು ಆರೋಪಿಗಳು, ವೃದ್ದ ಹುಸೇನಸಾಬ್​ನನ್ನು ಮನೆಗೆ ಡ್ರಾಪ್ ಮಾಡಲು ಹೊರಟಿದ್ದರಂತೆ. ಆದರೆ, ಆರೋಪಿಗಳು ಇಬ್ಬರೂ ಕೂಡ ಕುಡಿದ ಮತ್ತಿನಲ್ಲಿದ್ದರಂತೆ. ಆಗ ಮಧ್ಯ ಕೂತಿದ್ದ ಹಸನಸಾಬ್ ಟೋಪಿಯನ್ನ ಆರೋಪಿ ಸಾಗರ್ ಎಂಬಾತ ಎಳದಿದ್ದ. ಆಗ ವೃದ್ದ ಅವಾಚ್ಯ ಶಬ್ದಗಳಿಂದ ಆರೋಪಿಗಳಿಬ್ಬರಿಗೆ ಬೈದಿದ್ದನಂತೆ. ತಮಗೆ ಅವಾಚ್ಯ ಶಬ್ದಗಳಿಂದ ವೃದ್ದ ಬೈದಿದ್ದಾನೆ ಎಂದು ಸಿಟ್ಟಿಗೆದ್ದು ಆರೋಪಿಗಳು ವೃದ್ದನ ಮೇಲೆ ಹಲ್ಲೆ ಮಾಡಿ, ಆತನ ಬಳಿಯಿದ್ದ ಇನ್ನೂರಾ ಐವತ್ತು ರೂಪಾಯಿ ತಗೆದುಕೊಂಡು ಪರಾರಿಯಾಗಿದ್ದರಂತೆ.

ಇದನ್ನೂ ಓದಿ:ಕೊಪ್ಪಳ: ಮುಸ್ಲಿಂ ವ್ಯಕ್ತಿಯನ್ನು ಥಳಿಸಿ, ಜೈ ಶ್ರೀ ರಾಮ್ ಎಂದು ಕೂಗುವಂತೆ ಒತ್ತಾಯ; ಎಫ್‌ಐಆರ್ ದಾಖಲು

ವೃದ್ದನ ಮೇಲೆ ಬೀಯರ್ ಬಾಟಲ್​ನಿಂದ ಹಲ್ಲೆ ಮಾಡಿದ್ದಾಗಲಿ, ಆತನ ಗಡ್ಡವನ್ನು ಗ್ಲಾಸ್​ನಿಂದ ಕತ್ತರಿಸಿದ್ದಾಗಲಿ ನಡೆದಿಲ್ಲ. ಜೊತೆಗೆ ಕೋಮು ದ್ವೇಷದಿಂದ ಕೂಡ ಮಾಡಿದ್ದಲ್ಲ, ಬದಲಾಗಿ ಕುಡಿದ ಮತ್ತಿನಲ್ಲಿ ಆರೋಪಿಗಳು ವೃದ್ದನ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯ ಹಿಂದೆ ಯಾವುದೇ ಸಂಘ-ಪರಿವಾರ ಸೇರಿದಂತೆ ಹಿಂದೂ ಧರ್ಮದ ಯಾವುದೇ ಸಂಘಟನೆಗಳ ಕೈವಾಡ ಇಲ್ಲ ಎನ್ನುವುದನ್ನು ಪೊಲೀಸರು ತನಿಖೆ ವೇಳೆ ಪತ್ತೆ ಮಾಡಿದ್ದಾರೆ. ಸದ್ಯ ಎರಡು ಧರ್ಮಗಳ ನಡುವಿನ ವೈಷಮ್ಯಕ್ಕೆ ಕಾರಣವಾಗಿದ್ದ ಗಂಗಾವತಿ ವೃದ್ದನ ಮೇಲೆ ಹಲ್ಲೆ ಪ್ರಕರಣ, ಆರೋಪಿಗಳ ಬಂಧನದಿಂದ ತಿಳಿಯಾಗುವ ಹಂತಕ್ಕೆ ಬಂದಿದೆ. ಆದ್ರೆ, ಇದೇ ಪ್ರಕರಣವನ್ನು ಇಟ್ಟುಕೊಂಡು ಎರಡು ಕಡೆಯವರು ಕೋಮು ಸಂಘರ್ಷಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡುವುದನ್ನು ಮಾಡದೇ, ಸಮಾಜದಲ್ಲಿ ಶಾಂತಿ ಕಾಪಾಡುವ ಕೆಲಸಕ್ಕೆ ಮುಂದಾಗಬೇಕಿದೆ.

ಘಟನೆ ವಿವರ

ಗಂಗಾವತಿ ಪಟ್ಟಣದ ನಿವಾಸಿಯಾಗಿದ್ದ ಹುಸೇನಸಾಬ್, ನ.25 ರಂದು ನಸುಕಿನ ಜಾವ ಮೂರು ಗಂಟೆ ಸಮಯದಲ್ಲಿ, ಹೊಸಪೇಟೆಯಿಂದ ಬಂದು, ಗಂಗಾವತಿ ಬಸ್ ನಿಲ್ದಾಣದ ಬಳಿ ನಿಂತಿದ್ದರು. ಮನೆಗೆ ಹೋಗಲು ಯಾರಾದರೂ ಸಿಗುತ್ತಾರಾ ಎಂದು ಕಾದಿದ್ದ ವೃದ್ದ. ಈ  ವೇಳೆ ಸ್ಕೂಟಿ ಮೇಲೆ ಹೋಗುತ್ತಿದ್ದ ಇಬ್ಬರು ಯುವಕರಿಗೆ ಮನೆಗೆ ಡ್ರಾಪ್ ಕೇಳಿದ್ದನಂತೆ. ಹುಸೇನಸಾಬ್​ನಿಗೆ ನಿಮ್ಮ ಮನೆಗೆ ಡ್ರಾಪ್ ಮಾಡ್ತೇವೆ ಎಂದು ಹೇಳಿ, ತಮ್ಮ ಸ್ಕೂಟಿಯಲ್ಲಿ ವೃದ್ದನನ್ನು ಹತ್ತಿಸಿಕೊಂಡಿದ್ದ.

ಯುವಕರು ಗಂಗಾವತಿ ಪಟ್ಟಣದ ಮೆಹಬೂಬ್ ನಗರದಲ್ಲಿರುವ ನನ್ನ ಮನೆಗೆ ಕೆರದುಕೊಂಡು ಹೋಗದೆ, ಗಂಗಾವತಿ ಪಟ್ಟಣದ ಹೊರವಲಯದಲ್ಲಿರುವ ಪಂಪಾ ನಗರದ ಬಳಿಯಿರುವ ಖಾಲಿ ಜಾಗಕ್ಕೆ ಕರೆದುಕೊಂಡು ಹೋಗಿದ್ದರು. ಆದ್ರೆ, ಪಂಪಾ ನಗರದ ಬಳಿ ಹೋದ ದುಷ್ಕರ್ಮಿಗಳು, ನನ್ನ ಗಡ್ಡವನ್ನು ಗ್ಲಾಸ್​ನಿಂದ ಕತ್ತರಿಸಿದ್ದರು. ಜೈ ಶ್ರೀರಾಮ್ ಎಂದು ಹೇಳುವಂತೆ ಪೀಡಿಸಿದ್ದರು. ವೃದ್ದ ಅನ್ನೋದನ್ನು ನೋಡದೆ, ಅನೇಕ ಕಡೆ ಹೊಡೆದು ಗಾಯ ಮಾಡಿದ್ದರು. ಅಣ್ಣಾ ನನ್ನನ್ನು ಬಿಟ್ಟುಬಿಡಿ, ವಯಸ್ಸಾಗಿದೆ, ಕಣ್ಣು ಕಾಣೋದಿಲ್ಲಾ ಎಂದು ಗೋಳಾಟ ನಡೆಸಿದ್ರು ಕೂಡ, ಕಟುಕರು ಬಿಡದೇ ತಮ್ಮಲ್ಲಿರುವ ಮೃಗತ್ವವನ್ನು ತೋರಿಸಿದ್ದರು ಎಂದು ನವಂಬರ್ 30 ರಂದು ಹುಸೇನಸಾಬ್ ಗಂಗಾವತಿ ನಗರ ಠಾಣೆಗೆ ದೂರು ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ