ಕೊಪ್ಪಳ: ಮುಸ್ಲಿಂ ವ್ಯಕ್ತಿಯನ್ನು ಥಳಿಸಿ, ಜೈ ಶ್ರೀ ರಾಮ್ ಎಂದು ಕೂಗುವಂತೆ ಒತ್ತಾಯ; ಎಫ್‌ಐಆರ್ ದಾಖಲು
ಎಸ್‌ಡಿಪಿಐ ಸದಸ್ಯರು ಗಂಗಾವತಿಯಲ್ಲಿರುವ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದು, ‘ನಮ್ಮ ಜಿಲ್ಲೆಯಲ್ಲಿ ಎಲ್ಲ ವರ್ಗದ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ, ಯಾರೂ ಕಿಡಿಗೇಡಿಗಳು ಹುಸೇನ್ ಸಾಬ್ನನ್ನು ಥಳಿಸಿ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಬಲವಂತ ಮಾಡಿರುವುದು ಕ್ರೂರತನ ಎಂದಿದ್ದಾರೆ.
ಕೊಪ್ಪಳ, ಡಿ.01: ಕೊಪ್ಪಳ ಜಿಲ್ಲೆಯ ಗಂಗಾವತಿ (Gangavati) ಪಟ್ಟಣದ 65 ವರ್ಷದ ಮುಸ್ಲಿಂ ವ್ಯಕ್ತಿಗೆ ಇಬ್ಬರು ಅಪರಿಚಿತರು ಚಿತ್ರಹಿಂಸೆ ನೀಡಿದ ಆಘಾತಕಾರಿ ಘಟನೆ ನಡೆದಿದೆ. ಈ ಹಿನ್ನಲೆ ಸಂತ್ರಸ್ತ ಹುಸೇನ್ ಸಾಬ್ ಎನ್ನುವವರು ನವೆಂಬರ್ 30 ರಂದು ಪೊಲೀಸ್ ಠಾಣೆ(Police Station)ಗೆ ಹೋಗಿ ದೂರು ದಾಖಲಿಸಿದ್ದಾರೆ. ಎಫ್‌ಐಆರ್ ಪ್ರಕಾರ, ಹುಸೇನ್ ಸಾಬ್ ನ. 25 ರಂದು ರಾತ್ರಿ ಹೊಸಪೇಟೆಯಿಂದ ಗಂಗಾವತಿಗೆ ಬಂದಿದ್ದಾರೆ. ಈ ವೇಳೆ ಚಹಾ ಕುಡಿದು ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಬಳಿಗೆ ಬಂದು, ಎಲ್ಲಿಗೆ ಹೋಗುತ್ತಿದ್ದೀರಿ ಎಂದ ಅಪರಿಚಿತರು ಡ್ರಾಪ್ ಕೊಡಲು ಮುಂದಾಗಿದ್ದಾರೆ.
ಬೈಕ್ ಚಲಿಸುತ್ತಿದ್ದಂತೆ ಇಬ್ಬರೂ ಹುಸೇನ್‌ಸಾಬ್‌ಗೆ ಥಳಿಸಲು ಆರಂಭಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಂತೆ. ‘ಇಬ್ಬರು ನನ್ನನ್ನು ಪಂಪಾನಗರ ಪ್ರದೇಶದ ಬಳಿ ಕರೆದೊಯ್ದು ಬೈಕ್ನಿಂದ ನನ್ನನ್ನು ತಳ್ಳಿ ನಿಂದಿಸಲು ಪ್ರಾರಂಭಿಸಿದರು. ಕತ್ತಲಾಗಿದ್ದರಿಂದ ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದೆ. ಬಳಿಕ ದುಷ್ಕರ್ಮಿಗಳು ಜೈ ಶ್ರೀರಾಮ್ ಎಂದು ಕೂಗುವಂತೆ ಒತ್ತಾಯಿಸಿದರು. ಅವರು ಹೇಳಿದಂತೆ ಮಾಡಿದರೂ ನನ್ನ ಮೇಲೆ ಹಲ್ಲೆ ಮಾಡುವುದನ್ನು ನಿಲ್ಲಿಸಲಿಲ್ಲ ಎಂದು ಹುಸೇನ್ ಸಾಬ್ ಹೇಳಿದ್ದಾರೆ.
ಇದಾದ ನಂತರ ಆರೋಪಿಗಳು ಬಿಯರ್ ಬಾಟಲಿಯನ್ನು ಒಡೆದು ಗಾಜಿನ ತುಂಡಿನಿಂದ ಅವರ ಗಡ್ಡವನ್ನು ಕತ್ತರಿಸಲು ಪ್ರಯತ್ನಿಸಿದ್ದು, ಅದು ಆಗದೇ ಇದ್ದಾಗ ಬೆಂಕಿ ಕಡ್ಡಿಯನ್ನು ತೆಗೆದು ಹುಸೇನ್ ಸಾಬ್ ಗಡ್ಡವನ್ನು ಸುಟ್ಟಿದ್ದಾರೆ. ಇದರಿಂದ ಸಂತ್ರಸ್ತ ಚಿತರಾಡಿದ್ದು, ಕೂಗು ಕೇಳಿದ ನಂತರ ಕೆಲವು ಕುರುಬರು ಎಚ್ಚರಗೊಂಡು ಬಂದಿದ್ದಾರೆ. ಕೂಡಲೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
#TNIEexclusive #Karnataka In a heinous act a 65-years-old Muslim man was beaten by a duo, forced to chant Jai Shriram and burnt his beard in #Gangavati town of #Koppal FIR registered. Security increased in the town.@NewIndianXpress@XpressBengaluru @KannadaPrabha pic.twitter.com/NKuOkypCKl
— Amit Upadhye (@AmitSUpadhye) December 1, 2023
ಠಾಣೆಗೆ ದೂರು ದಾಖಲು
ಈ ಸಂಬಂಧ ಪಟ್ಟಣ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನು ಹುಸೇನ್ ಸಾಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಸ್ ನಿಲ್ದಾಣ, ಮುಖ್ಯರಸ್ತೆ, ಪಂಪಾನಗರದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಂತ್ರಸ್ತ ಹುಸೇನಸಾಬ್ ತನ್ನ ಮಗಳೊಂದಿಗೆ ಗಂಗಾವತಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದಾನೆ. ದೃಷ್ಟಿ ಹೀನವಾಗುತ್ತಿರುವುದರಿಂದ ಕಳೆದ ಕೆಲ ತಿಂಗಳಿಂದ ಕೊಪ್ಪಳ, ವಿಜಯನಗರ ಜಿಲ್ಲೆಗಳ ಹಲವೆಡೆ ಭಿಕ್ಷಾಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ಮುಂದಾದ ಎಸ್‌ಡಿಪಿಐ
ಇನ್ನು ಈ ಮಧ್ಯೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸದಸ್ಯರು ಗಂಗಾವತಿಯಲ್ಲಿರುವ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದು, ‘ನಮ್ಮ ಜಿಲ್ಲೆಯಲ್ಲಿ ಎಲ್ಲ ವರ್ಗದ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ, ಯಾರೂ ಕಿಡಿಗೇಡಿಗಳು ಹುಸೇನ್ ಸಾಬ್ನನ್ನು ಥಳಿಸಿ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಬಲವಂತ ಮಾಡಿರುವುದು ಕ್ರೂರತನ. ಈ ಕೃತ್ಯಕ್ಕೆ ಕಾರಣರಾದ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಜೊತೆಗೆ ಹುಸೇನ್ಸಾಬ್ ಅವರ ಚಿಕಿತ್ಸಾ ವೆಚ್ಚವನ್ನು ಎಸ್‌ಡಿಪಿಐ ಭರಿಸಲು ನಿರ್ಧರಿಸಿದೆ ಎಂದು ಕೊಪ್ಪಳದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸಲೀಂ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Fri, 1 December 23