ಕೊಪ್ಪಳ, ಮಾ.26: ಜಿಲ್ಲೆಯ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಜಲಾಶಯ(Tungabhadra Dam), ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಜನರಿಗೆ ಜೀವನಾಡಿಯಾಗಿದೆ. ತುಂಗಭದ್ರಾ ನದಿ ತುಂಬಿ ಹರಿದರೆ ಈ ನಾಲ್ಕು ಜಿಲ್ಲೆಯ ಜನರ ಸಂತಸ ಇಮ್ಮಡಿಯಾಗುತ್ತದೆ. ಆದ್ರೆ, ಈ ಬಾರಿ ಭೀಕರ ಬರಗಾಲಕ್ಕೆ ತುಂಗಭದ್ರೆ ನಲುಗಿ ಹೋಗಿದ್ದಾಳೆ. ಅನೇಕ ದಿನಗಳ ಹಿಂದೆಯೇ ನದಿ ಸಂಪೂರ್ಣವಾಗಿ ಖಾಲಿಯಾಗಿದೆ. ಇದೀಗ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಜಲಾಶಯ ಕೂಡ ಸಂಪೂರ್ಣವಾಗಿ ಬರಿದಾಗುವ ಹಂತಕ್ಕೆ ಬಂದಿದೆ.
ಹೌದು, ಮುನಿರಾಬಾದ್ ಬಳಿ, ತುಂಗಭದ್ರಾ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಕಳೆದ ಮೂರ್ನಾಲ್ಕು ವರ್ಷ ತುಂಬಿದ್ದ ಜಲಾಶಯ, ಈ ಬಾರಿ ಬರಗಾಲದಿಂದ ಒಮ್ಮೆಯೂ ಕೂಡ ಭರ್ತಿಯಾಗಿಲ್ಲ. 105.79 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಈ ಜಲಾಶಯದಲ್ಲಿ, ಸದ್ಯ ಇರುವುದು ಕೇವಲ 5.32 ಟಿಎಂಸಿ ನೀರು ಮಾತ್ರ. ಕಳೆದ ವರ್ಷ ಇದೇ ಸಮಯದಲ್ಲಿ ಡ್ಯಾಂ ನಲ್ಲಿ 11.69 ಟಿಎಂಸಿ ನೀರು ಇತ್ತು. ಡ್ಯಾಂ ನ ಒಟ್ಟು ನೀರಿನ ಸ್ಟೋರೇಜ್ ಪೈಕಿ ಸದ್ಯ ಡ್ಯಾಂ ನಲ್ಲಿ ಇರುವ ನೀರು ಕೇವಲ ಶೇಕಡಾ 5 ರಷ್ಟು ಮಾತ್ರ. ಹಾಗಂತ ಇಷ್ಟು ನೀರು ಬಳಕೆಗೆ ಬರುತ್ತಾ ಅಂದರೆ, ಅಧಿಕಾರಿಗಳು ಇಲ್ಲ ಅಂತಿದ್ದಾರೆ.
ಇದನ್ನೂ ಓದಿ:ಬೇಸಿಗೆ ಆರಂಭಕ್ಕೂ ಮುನ್ನ ಬತ್ತುವ ಹಂತದಲ್ಲಿ ತುಂಗಭದ್ರಾ ಜಲಾಶಯ! ನಾಲ್ಕು ಜಿಲ್ಲೆಗಳಿಗೆ ಸಂಕಷ್ಟ
ಯಾಕೆಂದರೆ ಇರುವ ನೀರಲ್ಲಿ ಒಂದು ಟಿಎಂಸಿ ನೀರು ಆಂದ್ರಪ್ರದೇಶದ ಕೋಟಾದಲ್ಲಿನ ನೀರು ಡ್ಯಾಂ ನಲ್ಲಿ ಇದೆಯಂತೆ. ಇನ್ನು ಎರಡು ಟಿಎಂಸಿ ನೀರು ಡೆಡ್ ಸ್ಟೋರೆಜ್ ನೀರು. ಅದು ಬಳಕೆಗೆ ಬರಲ್ಲ. ಇನ್ನು ಎರಡು ಟಿಎಂಸಿ ನೀರು ಆವಿಯಾಗಿ ಹೋಗುವ ಸಾಧ್ಯತೆ ಇದೆಯಂತೆ. ಹೀಗಾಗಿ ಬಳಕೆಗೆ ಬರುವ ನೀರು ಕೇವಲ 0.32 ಟಿಎಂಸಿ ನೀರು ಮಾತ್ರ. ಇನ್ನು ಇದೇ ಜಲಾಶಯದ ನೀರಿನ ಮೇಲೆಯೆ ಕೊಪ್ಪಳ ನಗರ ಸೇರಿದಂತೆ ನಾಲ್ಕು ಜಿಲ್ಲೆಯ ಅನೇಕ ನಗರಗಳು, ಗ್ರಾಮಗಳು ಕುಡಿಯುವ ನೀರಿಗೆ ಅವಲಂಭಿತವಾಗಿವೆ. ಆದ್ರೆ, ಡ್ಯಾಂ ನಲ್ಲಿ ನೀರು ಖಾಲಿಯಾಗುತ್ತಿರುವುದು ಜನರ ಆತಂಕ ಹೆಚ್ಚಾಗುವಂತೆ ಮಾಡಿದೆ.
ಇನ್ನು ಕೂಡ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ರಣ ಬಿಸಿಲು ಇರುತ್ತದೆ. ಈ ಸಮಯದಲ್ಲಿ ಎಷ್ಟು ನೀರು ಇದ್ರು ಕೂಡ ಕಡಿಮೆಯೇ. ಆದ್ರೆ, ಡ್ಯಾಂ ಖಾಲಿಯಾಗುತ್ತಿರುವುದರಿಂದ ಮುಂದೇನು ಎನ್ನುವ ಆತಂಕ ನಾಲ್ಕು ಜಿಲ್ಲೆಯ ಜನರನ್ನು ಕಾಡುತ್ತಿದೆ. ಈಗಾಗಲೇ ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಯ ಕೆಲವಡೇ ನೀರು ಹರಿಸಲಾಗಿದೆ. ಆದ್ರೆ, ಮುಂದಿನ ಎರಡು ತಿಂಗಳಿಗೆ ಆಗುವಷ್ಟು ನೀರು ಡ್ಯಾಂ ನಲ್ಲಿ ಇಲ್ಲದೇ ಇರೋದು ಅಧಿಕಾರಿಗಳ ತಲೆಬಿಸಿ ಕೂಡ ಹೆಚ್ಚಾಗುವಂತೆ ಮಾಡಿದೆ. ಲಕ್ಷಾಂತರ ಜನರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ, ಸಂಪೂರ್ಣವಾಗಿ ಖಾಲಿಯಾಗುತ್ತಿದೆ. ಹೀಗಾಗಿ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆಯನ್ನು ಈಗಿನಿಂದಲೇ ಆರಂಭಿಸಬೇಕಿದೆ. ಜೊತೆಗೆ ಜನರು ಕೂಡ ಅತ್ಯಮುಲ್ಯವಾಗಿರುವ ನೀರನ್ನು ಸಂರಕ್ಷಿಸುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ