ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಮಿರ್ಚಿ ದಾಸೋಹ- ಸಿದ್ದವಾಗುತ್ತಿವೆ ಲಕ್ಷ ಲಕ್ಷ ಮಿರ್ಚಿ
ಕೊಪ್ಪಳದ ಸುಪ್ರಸಿದ್ಧ ಗವಿಮಠದ ಜಾತ್ರೆ ಶನಿವಾರದಿಂದ ಆರಂಭವಾಗಿದೆ. ಎರಡನೇ ದಿನದ ಜಾತ್ರೆಯನ್ನು ಭಕ್ತರು ಮಿರ್ಚಿ ಜಾತ್ರೆ ಅಂತಲೇ ಕರೆಯುತ್ತಾರೆ. ಇದಕ್ಕೆ ಕಾರಣ ರವಿವಾರ (ಜ.28) ಮಠದ ಮಹಾ ದಾಸೋಹದಲ್ಲಿ ಪ್ರಸಾದಕ್ಕೆ ಬರುವವರಿಗೆ ಊಟದ ಜೊತೆಗೆ ಮಿರ್ಚಿಯನ್ನು ಕೇಳಿದಷ್ಟು ನೀಡುತ್ತಾರೆ. ಹಾಗಿದ್ದರೆ ಯಾರು ತಯಾರಿಸುತ್ತಾರೆ ಈ ಮಿರ್ಚಿಗಳನ್ನು? ಮತ್ತು ಮಿರ್ಚಿ ಜಾತ್ರೆ ಯಾಕೆ ಮನಡೆಯುತ್ತದೆ? ಇಲ್ಲಿದೆ ಓದಿ

ಕೊಪ್ಪಳ, ಜನವರಿ 28: ಉತ್ತರ ಕರ್ನಾಟಕ (North Karnataka) ಭಾಗದ ಸುಪ್ರಸಿದ್ಧ ತಿನಿಸು ಅಂದರೇ ಅದು ಮಿರ್ಚಿ. ಮುಂಜಾನೆ ಉಪಹಾರವಿರಲಿ, ಮಧ್ಯಾಹ್ನ ಊಟವಿರಲಿ ಮಿರ್ಚಿ (Mirchi) ನೀಡಿದರೇ ಯಾರು ಬೇಡ ಅನ್ನುವುದಿಲ್ಲ. ಜಾತ್ರೆಗೆ (Fair) ಬಂದ ಲಕ್ಷಾಂತರ ಮಂದಿಗೆ ಇಂದು (ಜ.28) ಇಡೀ ದಿನ ಊಟದಲ್ಲಿ ಬೇಕಾದಷ್ಟು ಮಿರ್ಚಿ ನೀಡಲಾಗುತ್ತದೆ. ಇಂತಹದೊಂದು ಮಿರ್ಚಿ ಜಾತ್ರೆ ನಡೆಯುವುದು ಕೊಪ್ಪಳದ ಗವಿಮಠದಲ್ಲಿ (Koppal Gavimath Fair) . ಹೌದು ಗವಿಮಠದ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಉತ್ತರ ಕರ್ನಾಟಕ ಮಂದಿಯ ನೆಚ್ಚಿನ ತಿನಿಸನ್ನು ಜಾತ್ರೆಯ ದಾಸೋಹದಲ್ಲಿ ಕೂಡಾ ನೀಡಬೇಕು ಎಂಬ ಇಚ್ಛೆ ಹೊಂದಿದ್ದಾರೆ. ಹೀಗಾಗಿ ಅನೇಕ ವರ್ಷಗಳಿಂದ ಜಾತ್ರೆಯಲ್ಲಿ ಮಿರ್ಚಿ ದಾಸೋಹ ನಡೆಯುತ್ತಿದೆ.
ಎರಡನೇ ದಿನದ ಜಾತ್ರೆ ಮಿರ್ಚಿ ಜಾತ್ರೆ ಅಂತಲೇ ಪ್ರಸಿದ್ಧಿ
ಕೊಪ್ಪಳದ ಸುಪ್ರಸಿದ್ಧ ಗವಿಮಠದ ಜಾತ್ರೆ ಶನಿವಾರ (ಜ.27) ರಿಂದ ಆರಂಭವಾಗಿದೆ. ಎರಡನೇ ದಿನದ ಜಾತ್ರೆಯನ್ನು ಭಕ್ತರು ಮಿರ್ಚಿ ಜಾತ್ರೆ ಅಂತಲೇ ಕರೆಯುತ್ತಾರೆ. ಇದಕ್ಕೆ ಕಾರಣ ರವಿವಾರ (ಜ.28) ಮಠದ ಮಹಾ ದಾಸೋಹದಲ್ಲಿ ಪ್ರಸಾದಕ್ಕೆ ಬರುವವರಿಗೆ ಊಟದ ಜೊತೆಗೆ ಮಿರ್ಚಿಯನ್ನು ಕೇಳಿದಷ್ಟು ನೀಡುತ್ತಾರೆ. ಅದಕ್ಕಾಗಿಯೇ ಲಕ್ಷ ಲಕ್ಷ ಮಿರ್ಚಿ ತಯಾರಿಕೆ ನಸುಕಿನ ಜಾವ ಐದು ಗಂಟೆಗೆ ಆರಂಭವಾಗಿದ್ದು, ರಾತ್ರಿ ಹನ್ನೆರಡು ಗಂಟೆವರಗೆ ಮಿರ್ಚಿ ಮಾಡುವ ಕೆಲಸ ಒಂದಡೆ ನಡೆದರೆ ಮಿರ್ಚಿ ನೀಡುವ ದಾಸೋಹ ಮತ್ತೊಂದಡೆ ನಡೆಯುತ್ತದೆ.
ಇದನ್ನೂ ಓದಿ: ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಭಕ್ತರಿಗೆ ಭೂರಿ ಭೋಜನ -ದಾಸೋಹಕ್ಕೆ ಲಕ್ಷ ಲಕ್ಷ ಹೋಳಿಗೆ, ರೊಟ್ಟಿ ನೀಡಿದ ಭಕ್ತರು
ಸರಿಸುಮಾರು ಐದು ಲಕ್ಷ ಮಿರ್ಚಿ ಮಾಡುವ ಗುರಿಯನ್ನು ಭಕ್ತರು ಹಾಕಿಕೊಂಡಿದ್ದಾರೆ. ಹೀಗಾಗಿ ಮಿರ್ಚಿ ತಯಾರಿಕೆಗೆ 25 ಕ್ವಿಂಟಲ್ ಹಸಿ ಕಡ್ಲಿ ಹಿಟ್ಟು, 20 ಕ್ವಿಂಟಲ್ ಹಸಿ ಮೆಣಸಿನಕಾಯಿ, 10 ಬ್ಯಾರಲ್ ಎಣ್ಣೆ, 60 ಸಿಲಿಂಡರ್ಗಳನ್ನು ಬಳಸಿ ಮಿರ್ಚಿ ತಯಾರಿಕೆ ಮಾಡಲಾಗುತ್ತದೆ. ನೂರು ಜನರಂತೆ ನಾಲ್ಕು ತಂಡಗಳಲ್ಲಿ ಮಿರ್ಚಿ ತಯಾರಿಕೆ ಕೆಲಸ ನಡೆಯುತ್ತಿದೆ.
ಮಿರ್ಚಿ ತಯಾರಿಕೆ ಭಕ್ತ ಮಂಡಳಿಯೇ ಇದೆ. ಜಾತ್ರೆಗೆ ಒಂದು ತಿಂಗಳ ಮುನ್ನವೇ ಮಿರ್ಚಿ ತಯಾರಿಕೆಯ ಭಕ್ತರು ಮೀಟಿಂಗ್ ಮಾಡುತ್ತಾರೆ. ಜಾತ್ರೆಯ ಎರಡನೇ ದಿನ ಸ್ವಯಂ ಪ್ರೇರಣೆಯಿಂದ ಭಕ್ತರು ಬಂದು ಮಿರ್ಚಿ ತಯಾರು ಮಾಡುತ್ತಾರೆ. ಮಿರ್ಚಿ ತಯಾರಿಕೆಗೆ ಬೇಕಾಗುವ ಹಿಟ್ಟು ಸೇರಿದಂತೆ ಎಲ್ಲಾ ವಸ್ತುಗಳನ್ನು ಶ್ರೀಮಠ ನೀಡಿದರೇ, ಮಿರ್ಚಿ ತಯಾರಿಕೆ ಕೆಲಸವನ್ನು ಭಕ್ತರು ಮಾಡುತ್ತಾರೆ. ಅನೇಕ ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ ಅಂತಿದ್ದಾರೆ ಭಕ್ತ ಸಂತೋಷ ದೇಶಪಾಂಡೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



