ರಾಜ್ಯದ ಹಲವಡೆ ಮಳೆ ಅಬ್ಬರ: ಕೊಪ್ಪಳದಲ್ಲಿ ಮಾತ್ರ ತೀವ್ರ ಮಳೆ ಕೊರತೆ, ಆತಂಕದಲ್ಲಿ ಜಿಲ್ಲೆಯ ರೈತರು

| Updated By: Ganapathi Sharma

Updated on: Jul 05, 2024 | 2:17 PM

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳು, ಉತ್ತರ ಕನ್ನಡ, ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಅತ್ತ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿಯೂ ಮಳೆಯಾಗುತ್ತಿದೆ. ಆದರೆ ಕೊಪ್ಪಳ ಮಾತ್ರ ಇದಕ್ಕೆ ಅಪವಾದ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಮಳೆ ಎಂಬುದು ಮರೀಚಿಕೆಯಾಗಿದೆ. ಇದರಿಂದಾಗಿ ರೈತರೂ ಕಂಗಾಲಾಗಿದ್ದಾರೆ.

ರಾಜ್ಯದ ಹಲವಡೆ ಮಳೆ ಅಬ್ಬರ: ಕೊಪ್ಪಳದಲ್ಲಿ ಮಾತ್ರ ತೀವ್ರ ಮಳೆ ಕೊರತೆ, ಆತಂಕದಲ್ಲಿ ಜಿಲ್ಲೆಯ ರೈತರು
ರಾಜ್ಯದ ಹಲವಡೆ ಮಳೆ ಅಬ್ಬರ: ಕೊಪ್ಪಳದಲ್ಲಿ ಮಾತ್ರ ತೀವ್ರ ಮಳೆ ಕೊರತೆ
Follow us on

ಕೊಪ್ಪಳ, ಜುಲೈ 5: ರಾಜ್ಯದ ಹಲವಡೆ ಮಳೆಯ ಅಬ್ಬರ ಜೋರಾಗಿದೆ. ಆದರೆ ಕೊಪ್ಪಳ ಜಿಲ್ಲೆಯ ರೈತರು ಮಾತ್ರ ಕಳೆದ ಮೂರು ವಾರಗಳಿಂದ ಮೋಡಗಳನ್ನು ನೋಡುತ್ತಾ ಕೂರುವಂತಾಗಿದೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯತ್ತ ವರುಣದೇವ ಮುಖ ಮಾಡದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳದಿದ್ದ ಬೆಳೆಗಳು ಮಳೆಗಾಗಿ ಕಾದು ನಿಂತಿವೆ. ಮಳೆಯಾಗದೇ ಇದ್ದರೆ ರೈತರ ಬದುಕು ಬೀದಿಗೆ ಬೀಳಲಿದೆ.

ಇನ್ನೊಂದಡೆ ಮಳೆಗಾಲದಲ್ಲಿ ಸದಾ ಹಸಿಯಿಂದ ಇರಬೇಕಿದ್ದ ಭೂಮಿ ಇದೀಗ ಬೇಸಿಗೆ ಕಾಲದಲ್ಲಿರುವಂತೆ ಒಣಗಿರೋದನ್ನು ನೋಡಿ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮುಂಕಪ್ಪಿ, ಇಂದರಗಿ, ಯಲಬುರ್ಗಾ, ಕುಕನೂರು ತಾಲೂಕಿನ ಅನೇಕ ಗ್ರಾಮಗಳಲ್ಲಿ ಇನ್ನೂ ಮಳೆಯಾಗುತ್ತಿಲ್ಲ. ರಾಜ್ಯದ ಹಲವಡೆ ವರುಣದೇವನ ಆರ್ಭಟ ಜೋರಾಗಿದೆ. ಪ್ರತಿನಿತ್ಯ ಅನೇಕ ಕಡೆ ಮಳೆಯಾಗುತ್ತಿರುವ ಸುದ್ದಿಗಳನ್ನು ಕೇಳಿ, ಕೊಪ್ಪಳ ರೈತರು, ನಮ್ಮೂರಿಗೆ ಕೂಡಾ ಯಾವಾಗ ಮಳೆ ಬರುತ್ತೆ ಅಂತ ಕಾಯುತ್ತಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಮಳೆ ಕೊರತೆ ತೀವ್ರವಾಗಿದೆ. ಕಳೆದ ಒಂದು ವಾರದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 13 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಕೇವಲ ಏಳು ಮಿಮೀ ಮಳೆಯಾಗಿದೆ. ಅಂದರೆ ಶೇಕಡಾ 47 ರಷ್ಟು ಮಳೆ ಕೊರತೆಯಾಗಿದೆ. ಇನ್ನು ಜಿಲ್ಲೆಯಲ್ಲಿ ಏಳು ಮಿಮೀ ಮಳೆಯಾಗಿದ್ದು ಕೂಡಾ ಕೇವಲ ಕೊಪ್ಪಳ ತಾಲೂಕಿನ ಕೆಲ ಗ್ರಾಮಗಳು ಸೇರಿ, ಜಿಲ್ಲೆಯ ಕೆಲವೇ ಕೆಲ ಬಾಗದಲ್ಲಿ ಮಾತ್ರ. ಉಳಿದ ಬಹುತೇಕ ಬಾಗದಲ್ಲಿ ಕಳೆದ ಮೂರು ವಾರಗಳಿಂದ ಮಳೆಯಾಗಿಲ್ಲಾ. ಇದು ರೈತರ ಆತಂಕವನ್ನು ಹೆಚ್ಚಿಸುತ್ತಿದೆ.

ಈಗಾಗಲೇ ಜಿಲ್ಲೆಯ ಸಾವಿರಾರು ರೈತರು ಬೀಜ, ಗೊಬ್ಬರಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ ಮೆಕ್ಕೆಜೋಳ, ಹೆಸರು ಸೇರಿದಂತೆ ಅನೇಕ ಬೆಳೆಗಳನ್ನು ಬೆಳದಿದ್ದಾರೆ. ಜೂನ್ ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಬಿತ್ತನೆ ಮಾಡಿದ್ದರು. ಬೆಳೆ ಕೂಡಾ ಚೆನ್ನಾಗಿ ಬರೋದನ್ನು ನೋಡಿ ಸಂತಸ ಪಟ್ಟಿದ್ದರು. ಆದರೆ ಇದೀಗ ದಿಢೀರನೆ ಮಳೆ ಕೊರತೆ ಉಂಟಾಗಿದೆ ಅಂತ ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಬೆಳೆಗಳಿಗೆ ತೇವಾಂಶ ಕೊರತೆ

ಮಳೆಯಾಗದೇ ಇರೋದರಿಂದ ಭೂಮಿಯಲ್ಲಿ ತೇವಾಂಶ ಇಲ್ಲದಂತಾಗಿದೆ. ಹೀಗಾಗಿ ಬೆಳೆಗಳು ಇದೀಗ ಹಳದೆ ಬಣ್ಣಕ್ಕೆ ತಿರುಗಲು ಆರಂಭವಾಗಿವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಮಳೆಯಾಗದೇ ಇದ್ದರೆ ಬೆಳೆ ಒಣಗುತ್ತದೆ. ಒಂದು ಸಲ ಬೆಳೆ ಒಣಗಿದರೆ ಅದು ಯಾವುದೇ ಪ್ರಯೋಜನಕ್ಕೂ ಕೂಡಾ ಬರುವುದಿಲ್ಲ. ಹೀಗಾಗಿ ವರುಣದೇವ, ಕೃಪೆ ತೋರಿ, ನಮಗೂ ಮಳೆ ಸುರಿಸು ಅಂತ ರೈತರು ಪ್ರಾರ್ಥನೆ ಮಾಡುತ್ತಿದ್ದಾರೆ. ಇನ್ನು ಕಳೆದ ವರ್ಷ ಕೂಡಾ ಬರಗಾಲದಿಂದ ಕೊಪ್ಪಳ ಜಿಲ್ಲೆಯ ರೈತರು ದೊಡ್ಡ ಸಂಕಷ್ಟ ಅನುಭವಿಸಿದ್ದಾರೆ. ಆದರೆ ಈ ಬಾರಿ ಉತ್ತಮ ಮಳೆಯಾಗುತ್ತೆ, ಕಳೆದ ವರ್ಷ ಮಾಡಿದ ಸಾಲವನ್ನು ತೀರಿಸಬೇಕು ಅಂತ ಅಂದುಕೊಂಡಿದ್ದ ರೈತರಿಗೆ ಇದೀಗ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಕೊಪ್ಪಳ ಎಸ್​​ಪಿ ವರ್ಗಾವಣೆಗೆ ಕಾಂಗ್ರೆಸ್​ ಶಾಸಕರಿಂದಲೇ ವಿರೋಧ: ಶಿವರಾಜ್ ತಂಗಡಗಿ ವಿರುದ್ಧ ಆಕ್ರೋಶ

ಸದ್ಯ ಮಳೆಯಾಗದೇ ಇರುವುದರಿಂದ, ಕೊಪ್ಪಳ ಜಿಲ್ಲೆಯ ರೈತರು ಆತಂಕದಲ್ಲಿದ್ದಾರೆ. ಸರ್ಕಾರ ಕೂಡಾ ಸಂಕಷ್ಟದ ಸಮಯದಲ್ಲಿ ರೈತರ ನೆರವಿಗೆ ಸ್ಪಂದಿಸಿ, ಅವರ ಜತೆ ನಿಲ್ಲಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ