ಬಸ್​​​ನಲ್ಲಿ 90 ಲಕ್ಷಕ್ಕೂ ಅಧಿಕ ಮೌಲ್ಯದ, ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ: ಊಟಕ್ಕೆ ನಿಲ್ಲಿಸಿದಾಗ ಕೃತ್ಯ

ಚಿನ್ನ, ಬೆಳ್ಳೆ ಬೆಲೆ ಏರುತ್ತಿರುವ ಸಮಯದಲ್ಲಿ ಕರ್ನಾಟಕದಲ್ಲಿ ಬಂಗಾರ ದರೋಡೆ ಪ್ರಕರಣಗಳು ಸಹ ಹೆಚ್ಚುತ್ತಿವೆ. ಇದೀಗ ಕೊಪ್ಪಳ ಜಿಲ್ಲೆಯ ಹೊರವಲಯದಲ್ಲಿ ಬಸ್​​ ನಿಲ್ಲಿಸಿದ್ದ ವೇಳೆ 90 ಲಕ್ಷಕ್ಕೂ ಅಧಿಕ ಮೌಲ್ಯದ, ಚಿನ್ನ, ವಜ್ರಾಭರಣವಿದ್ದ ಬ್ಯಾಗ್ ದರೋಡೆಯಾಗಿದ್ದು, ಈ ಪ್ರಕರಣ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮಂತ್ರಾಲಯದಿಂದ ಮಂಗಳೂರಿಗೆ ಬಸ್‌ನಲ್ಲಿ ಈ ದರೋಡೆಯಾಗಿದೆ.

ಬಸ್​​​ನಲ್ಲಿ 90 ಲಕ್ಷಕ್ಕೂ ಅಧಿಕ ಮೌಲ್ಯದ, ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ: ಊಟಕ್ಕೆ ನಿಲ್ಲಿಸಿದಾಗ ಕೃತ್ಯ
Bus Robbery
Edited By:

Updated on: Mar 12, 2026 | 5:22 PM

ಕೊಪ್ಪಳ (ಮಾರ್ಚ್ 12): ಮಂತ್ರಾಲಯದಿಂದ (Mantralaya) ಮಂಗಳೂರಿಗೆ (Mangaluru) ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್‌ನಲ್ಲಿ (Sleeper Coach Bus) 90 ಲಕ್ಷ ಮೌಲ್ಯದ ಚಿನ್ನ, ವಜ್ರಾಭರಣವಿದ್ದ (gold And diamond) ಬ್ಯಾಗ್ ದರೋಡೆಯಾಗಿದೆ. ಕೊಪ್ಪಳ (Koppal) ಹೊರಹೊಲಯದಲ್ಲಿ ಊಟಕ್ಕೆಂದು ಬಸ್ ನಿಲ್ಲಿಸಿದಾಗ ಮಂಗಳೂರಿನ ಮೊಹಮ್ಮದ್, ಇರ್ಷಾದ್​ ಎಂಬುವರಿಗೆ ಸೇರಿದ ಚಿನ್ನ, ವಜ್ರಾಭರಣವಿದ್ದ ಚೀಲವನ್ನು ಕದ್ದು ಪರಾರಿಯಾಗಿದ್ದಾರೆ. ಬಸ್‌ನಲ್ಲಿ ಮಲಗಿದ್ದ ಪ್ರಯಾಣಿಕನೋರ್ವ ಚಿನ್ನ ಬ್ಯಾಗ್​ ಹಿಡಿದು ಪರಾರಿಯಾಗುತ್ತಿರುವ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಪೊಲೀಸರು ಆರೋಪಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬಸ್ ಊಟಕ್ಕೆ ನಿಲ್ಲಿಸಿದಾಗ ಕೃತ್ಯ

ಈ ದರೋಡೆ ಘಟನೆ ಕೊಪ್ಪಳ ಹೊರವಲಯದಲ್ಲಿರುವ Tawa Punjab Hotel ಮುಂಭಾಗದಲ್ಲಿ ನಡೆದಿದೆ. ಮಂತ್ರಾಲಯದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್, ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿಕೊಂಡ ತವ ಪಂಜಾಬ್ ಹೊಟೇಲ್​​ ಬಳಿ ನಿಲ್ಲಿಸಿದೆ. ಆ ವೇಳೆ ಬಸ್‌ನಲ್ಲೇ ಮಲಗಿದ್ದ ಮಹಮ್ಮದ್ ಮತ್ತು ಇರ್ಷಾದ್ ಎಂಬ ಪ್ರಯಾಣಿಕರ ಬಳಿಯಿದ್ದ ಬಂಗಾರದ ಚೀಲವನ್ನು ಖದೀಮ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಇನ್ನು  ಚಿನ್ನಾಭರಗಳನ್ನು ಯುನಿಸೆಫ್ ಗೋಲ್ಡ್ ಕಂಪನಿಗೆ ಸೇರಿದ್ದು ಎನ್ನುವುದು ತಿಳಿದುಬಂದಿದೆ.

ಇದನ್ನೂ ಓದಿ: KSRTC ಬಸ್​​ನಲ್ಲಿದ್ದ ಅರ್ಧ ಕೋಟಿ ಹಣ ಕಳವು: ಸಿನೆಮಾ ಸ್ಟೈಲ್​ನಲ್ಲಿ ಆರೋಪಿ ಅರೆಸ್ಟ್​​

ಪ್ರಾಥಮಿಕ ತನಿಖೆಯ ಪ್ರಕಾರ, ಈ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಸಿಂಧನೂರಿನಿಂದ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸಿ ಕೊಪ್ಪಳಕ್ಕೆ ಬಂದಿದ್ದಾನೆ. ಅದೇ ವೇಳೆ ಇನ್ನೂ ಮೂವರು ಖದೀಮರು ಬೇರೆ ವಾಹನದಲ್ಲಿ ಬಸ್‌ನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಒಟ್ಟು ನಾಲ್ವರು ಮೊದಲೇ ಸಂಚು ರೂಪಿಸಿ ಈ  ಕೃತ್ಯವನ್ನು  ಮಾಡಿದ್ದಾರೆ.

ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಹೋಟೆಲ್ ಮುಂಭಾಗದಲ್ಲಿದ್ದ ಸಿಸಿ ಕ್ಯಾಮರದಲ್ಲಿ ಈ ದರೋಡೆ ಕೃತ್ಯದ ಸಂಪೂರ್ಣ ದೃಶ್ಯ ದಾಖಲಾಗಿದ್ದು, ಆರೋಪಿಗಳು ಹೇಗೆ ಬಸ್‌ಗೆ ಹತ್ತಿ ಬಂಗಾರದ ಚೀಲವನ್ನು ಕದ್ದುಕೊಂಡು ಹೋಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅವರದ್ದೇ ಆದ ಸಿಗ್ನಲ್‌ಗಳು ಒಬ್ಬೊಬ್ಬರಂತೆ ಬಂದು ಹೋಗುವುದು ಕಂಡುಬಂದಿದೆ. ಈ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ಬಸ್ ಪ್ರಯಾಣಿಕರ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ದರೋಡೆ ನಡೆಸಿದ ನಾಲ್ವರು ಖದೀಮರು ಯಾವ ದಿಕ್ಕಿಗೆ ಪರಾರಿಯಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ನಾಲ್ವರು ಸೇರಿಕೊಂಡು ದರೋಡೆ

ಖದೀಮರ ಪೈಕಿ ಓರ್ವ ಅದೇ ಬಸ್​​ನಲ್ಲಿ ಇದ್ದರೆ ಇನ್ನುಳಿದ ದರೋಡೆಕೋರರು ಬೊಲೆರೋ ವಾಹನದಲ್ಲಿ ಬಸ್ ಹಿಂಬಾಲಿಸಿಕೊಂಡು ಬಂದಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಹಮ್ಮದ್ ಮತ್ತು ಇರ್ಷಾದ್ ಚಿನ್ನಾಭರಣದ ಚೀಲವನ್ನು ಎಲ್ಲಿಂದ ತಂದಿದ್ದಾರೆ ಎನ್ನುವುದನ್ನು ಮೊದಲೇ ನೋಡಿದ್ದಾರೆ. ಹೀಗಾಗಿ ಅವರು ಇದ್ದ ಬಸ್ ಫಾಲೋ ಮಾಡಿಕೊಂಡು ಬಂದಿದ್ದು, ಬಳಿಕ ಸಿಂಧನೂರಿನಲ್ಲಿ ಓರ್ವ ಖದೀಮ ಬಸ್ ಏರಿದ್ದು, ಇನ್ನುಳಿದವರು ಬಸ್ ಫಾಲೋ ಮಾಡಿಕೊಂಡು ಬಂದು ಈ ಕೃತ್ಯ ಎಸಗಿದ್ದಾರೆ. ಇನ್ನು   ಮಹಮ್ಮದ್ ಮತ್ತು ಇರ್ಷಾದ್ ಎಂಬವರು ಚಿನ್ನದ ಚೀಲದ ಮೇಲೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ. ಇಷ್ಟೊಂದು ಮೌಲ್ಯದ ಚಿನ್ನ, ವಜ್ರಾಭರಣವನ್ನು ಎಲ್ಲಿಂದ ತೆಗೆದುಕೊಂಡು ಹೋಗುತ್ತಿದ್ದರು?  ಯಾರಿಂದ ತೆಗೆದುಕೊಂಡು ಹೋಗಿ ಯಾರಿಗೆ ಕೊಡುತ್ತಿದ್ದರು? ಹೀಗೆ ಹಲವು ಪ್ರಶ್ನೆಗಳು ಸಹ ಹುಟ್ಟಿಕೊಂಡಿದ್ದು, ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Thu, 12 March 26

Follow Us