ದಕ್ಷಿಣ ಭಾರತದ ಕುಂಭಮೇಳ ಕೊಪ್ಪಳ ಅಜ್ಜನ ಜಾತ್ರೆಗೆ ಸಿದ್ಧತೆ: ಈ ಬಾರಿ ಭಕ್ತರಿಗೆ ಏನು ಸ್ಪೆಷಲ್ ಗೊತ್ತಾ?
ಕೊಪ್ಪಳದ ಗವಿಮಠ ಜಾತ್ರೆ ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧ. ಜನವರಿ 1 ರಿಂದ 18 ರವರೆಗೆ ನಡೆಯುವ ಮಹಾ ದಾಸೋಹದಲ್ಲಿ ಲಕ್ಷಾಂತರ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ರಾಜ್ಯಪಾಲರ ಸಮ್ಮುಖದಲ್ಲಿ ರಥೋತ್ಸವ ನಡೆಯಲಿದೆ. ಈ ಬಾರಿ ಮಹಾ ದಾಸೋಹದಲ್ಲಿ ಏನು ಸ್ಪೆಷಲ್ ಎಂಬ ಮಾಹಿತಿ ಇಲ್ಲಿದೆ.

ಕೊಪ್ಪಳ, ಡಿಸೆಂಬರ್ 27: ದಕ್ಷಿಣ ಭಾರತ ಕುಂಭಮೇಳ ಎಂದು ಹೆಸರಾಗಿರುವ ಗವಿಮಠದ ಜಾತ್ರೆಗೆ (Gavi Matha fair) ದಿನಗಣನೆ ಶುರುವಾಗಿದೆ. ಮಠದ ಜಾತ್ರೆಗೆ ಲಕ್ಷ ಲಕ್ಷ ಜನ ಬರುತ್ತಾರೆ. ರಥೋತ್ಸವದ ವೈಶಿಷ್ಟ್ಯವೇ ಮಠದ ದಾಸೋಹ. ಹೀಗಾಗಿ ಮಠದ ಆವರಣದಲ್ಲಿ ಮಹಾ ದಾಸೋಹಕ್ಕೆ ಅಂತಿಮ ಸಿದ್ದತೆಗಳು ನಡೆಯುತ್ತಿವೆ. ಲಕ್ಷ ಲಕ್ಷ ಜನ ಬರುವ ಜಾತ್ರೆಯಲ್ಲಿ ನಿರಂತರ 18 ದಿನಗಳ ಕಾಲ ದಾಸೋಹ ನಡೆಯಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಭಕ್ತರು ಆ ಜಾತ್ರೆಗೆ ಬರುವ ನೀರಿಕ್ಷೆಯಿದೆ. ಈ ಬಾರಿ ರಥೋತ್ಸವಕ್ಕೂ ಐದು ದಿನ ಮೊದಲೇ ದಾಸೋಹಕ್ಕೆ ಪ್ಲ್ಯಾನ್ ಮಾಡಲಾಗಿದೆ. ಜೊತೆಗೆ ಉತ್ತರ ಕರ್ನಾಟಕದ ಫೇಮಸ್ ಮಿರ್ಚಿ ಕೂಡ ದಾಸೋಹದಲ್ಲಿ ಇರಲಿದೆ. ಸುಮಾರು ಐದು ಲಕ್ಷ ಜನರಿಗೆ ಮಿರ್ಚಿ ಉಣಬಡಿಸಲು ಭಕ್ತ ಸಮೂಹ ಸಿದ್ಧವಾಗಿದೆ.
ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರಾಗಿರುವ ಕೊಪ್ಪಳದ ಗವಿಮಠದ ಜಾತ್ರೆಗೆ ದಿನಗಣನೆ ಶುರುವಾಗಿದೆ. ಜನವರಿ 5ರಂದು ಗವಿ ಮಠದ ಜಾತ್ರೆಗೆ ಕೊಪ್ಪಳ ಜಿಲ್ಲೆಯವರೇ ಆದ ರಾಜ್ಯಪಾಲರಾಗಿರುವ ವಿಜಯ್ ಶಂಕರ್ ಅವರು ಚಾಲನೆ ನೀಡಲಿದ್ದಾರೆ. ಕೊಪ್ಪಳದ ಗವಿ ಮಠದ ಜಾತ್ರೆ ಅಂದ್ರೆ ಅದು ದಾಸೋಹ. ಜಾತ್ರೆಯಲ್ಲಿ ಲಕ್ಷ ಲಕ್ಷ ಜನರಿಗೆ ಊಟ ಬಡಿಸಲಾಗತ್ತೆ. ಈಗಾಗಲೇ ಮಹಾ ದಾಸೋಹಕ್ಕೆ ಬೇಕಾದ ಸಿದ್ದತೆಗಳನ್ನ ಮಾಡಿಕೊಳ್ಳಲಾಗ್ತಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಬಲ್ಡೋಟಾ ಸ್ಟೀಲ್ ಕಾರ್ಖಾನೆ ಆರಂಭಕ್ಕೆ ವಿರೋಧ: ದುಸ್ಥಿತಿ ಕಂಡು ಗವಿಸಿದ್ದೇಶ್ವರ ಸ್ವಾಮೀಜಿ ಕಣ್ಣೀರು
ಗವಿ ಮಠದ ಪಕ್ಕದ ಜಾಗದಲ್ಲಿ ಈಗಾಗಲೇ ಊಟದ ಕೌಂಟರ್ಗಳನ್ನ ನಿರ್ಮಾಣ ಮಾಡಲಾಗಿದೆ. ಸುಮಾರು 80 ಕೌಂಟರ್ಗಳನ್ನ ನಿರ್ಮಾಣ ಮಾಡಲಾಗಿದೆ. ಸುಮಾರು 6 ಎಕರೆ ಪ್ರದೇಶದಲ್ಲಿ ದಾಸೋಹಕ್ಕೆ ಸಿದ್ದತೆ ಮಾಡಿಕೊಳ್ಳಲಾಗ್ತಿದೆ. ಈಗಾಗಲೇ ದಾಸೋಹಕ್ಕೆ ಅವಶ್ಯವಿರುವ ಅಕ್ಕಿ ಜೊತೆಗೆ ರೊಟ್ಟಿಗಳನ್ನ ಸಂಗ್ರಹ ಮಾಡಲಾಗಿದೆ. ಅಲ್ಲದೆ 3 ಟನ್ಗಳಷ್ಟು ಕಟ್ಟಿಗೆ ಸಂಗ್ರಹ ಮಾಡಲಾಗಿದೆ. ಜನವರಿ 5ರಂದು ರಥೋತ್ಸವ ಇದ್ದರೂ ಈ ಬಾರಿ ಜನವರಿ 1ರಿಂದ ದಾಸೋಹಕ್ಕೆ ಚಾಲನೆ ನೀಡಲಾಗ್ತಿದೆ. ಜಾತ್ರೆಗಿಂತ ಐದು ದಿನ ಮೊದಲೇ ದಾಸೋಹ ಆರಂಭವಾಗಲಿದೆ. ಈಗಾಗಲೇ ಭಕ್ತರು ಅವರ ಶಕ್ತಿಗಣುಸಾರವಾಗಿ ರೊಟ್ಟಿ, ಅಕ್ಕಿಯನ್ನ ಕೊಟ್ಟು ಹೋಗುತ್ತಿದ್ದಾರೆ.
ಇನ್ನು ಕೊಪ್ಪಳ ಗವಿ ಮಠದ ಜಾತ್ರೆಗೆ ಅದರದ್ದೇ ಆದ ಇತಿಹಾಸವಿದೆ. ಈ ಜಾತ್ರೆಯಲ್ಲಿ ಸುಮಾರು ಐದರಿಂದ ಆರು ಲಕ್ಷ ಜನ ಭಾಗಿಯಾಗ್ತಾರೆ. ಈ ಜಾತ್ರೆಯ ವಿಶೇಷವೇ ಮಾಹಾ ದಾಸೋಹ. ಭಕ್ತರು ಅಜ್ಜನಿಗೆ ಈಗಾಗಲೇ ದಾಸೋಹಕ್ಕೆ ಅವಶ್ಯವಿರುವ ವಸ್ತುಗಳನ್ನ ಮಠಕ್ಕೆ ಅರ್ಪಿಸಿತ್ತಿದ್ದಾರೆ. ಕೊಪ್ಪಳ, ಗದಗ, ಸಿಂಧನೂರ ಭಾಗದಿಂದ ಭಕ್ತರು ರೊಟ್ಟಿಗಳನ್ನ ತಂದು ಕೊಡ್ತಾರೆ. ನಿರಂತರ 18 ದಿನ ನಡೆಯುವ ದಾಸೋಹದಲ್ಲಿ ಸುಮಾರು 10 ರಿಂದ 15 ಲಕ್ಷ ಜನ ಊಟ ಮಾಡಲಿದ್ದಾರೆ.
ಇದನ್ನೂ ಓದಿ: ವಾರದಲ್ಲಿ 6 ದಿನ ಮೌನ ವ್ರತ: ಭಕ್ತರ ಅಚ್ಚರಿಗೆ ಕಾರಣವಾಯ್ತು ಗವಿಸಿದ್ದೇಶ್ವರ ಸ್ವಾಮೀಜಿ ನಡೆ
ದಾಸೋಹದ ಜೊತೆಗೆ ಜಾತ್ರೆಯ ಮತ್ತೊಂದು ವಿಶೇಷ ಮಿರ್ಚಿ. ಗವಿ ಮಠದ ಭಕ್ತರು ಕಳೆದ 10 ವರ್ಷಗಳಿಂದ ರಥೋತ್ಸವದ ಮರುದಿನ ಭಕ್ತರಿಗೆ ಮಿರ್ಚಿ ಉಣಬಡಿಸಲಾಗುತ್ತದೆ. ಈ ಬಾರಿಯೂ ಸುಮಾರು ಐದರಿಂದ ಆರು ಲಕ್ಷ ಜನರಿಗೆ ಮಿರ್ಚಿ ಉಣಬಡಿಸೋದಕ್ಕೆ ಭಕ್ತ ಸಮೂಹ ಪ್ಲ್ಯಾನ್ ಮಾಡಿಕೊಂಡಿದೆ. ಕಳೆದ ವರ್ಷ 20 ಕ್ವಿಂಟಾಲ್ ಹಸೆ ಹಿಟ್ಟು ಬಳಕೆಯಾಗಿತ್ತು. ಈ ಬಾರಿ 25 ಕ್ವಿಂಟಾಲ್ ಹಸೆ ಹಿಟ್ಟು ಬಳಸಲು ಸಿದ್ದರಾಗಿದ್ದಾರೆ.
ದಾಸೋಹದಲ್ಲಿ ಮೈಸೂರ್ ಪಾಕ್
ಒಟ್ಟಾರೆ ಗವಿ ಮಠದ ಜಾತ್ರೆಗೆ ದಿನಗಣನೆ ಶುರುವಾಗಿದೆ. ಈ ಬಾರಿ ದಾಸೋಹದಲ್ಲಿ ಮೈಸೂರ್ ಪಾಕ್ ಕೂಡ ಸಿಗಲಿದೆ. ಸಿಂಧನೂರಿನ ಗವಿ ಮಠದ ಭಕ್ತರು 5 ಲಕ್ಷ ಮೈಸೂರ್ ಪಾಕ್ ನೀಡಲು ಮುಂದಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



