ಹೆರಿಗೆ ಸಮಯದಲ್ಲಿ ಆಸ್ಪತ್ರೆ ಬಾಗಿಲನ್ನು ತೆರೆಯದೆ ಸಿಬ್ಬಂದಿ ಅಸಡ್ಡೆ; ಕರ್ತವ್ಯ ಲೋಪಕ್ಕೆ ವೈದ್ಯ ಡಾ.ನಾಗರಾಜ ಪಾಟೀಲ್ ಅಮಾನತು

  • TV9 Web Team
  • Published On - 11:51 AM, 3 Mar 2021
ಹೆರಿಗೆ ಸಮಯದಲ್ಲಿ ಆಸ್ಪತ್ರೆ ಬಾಗಿಲನ್ನು ತೆರೆಯದೆ ಸಿಬ್ಬಂದಿ ಅಸಡ್ಡೆ; ಕರ್ತವ್ಯ ಲೋಪಕ್ಕೆ  ವೈದ್ಯ ಡಾ.ನಾಗರಾಜ ಪಾಟೀಲ್ ಅಮಾನತು
ವೈದ್ಯ ನಾಗರಾಜ್ ಪಾಟೀಲ್ ಹಾಗೂ ಶುಶ್ರೂಷಕ ಬಸವರಾಜ

ಕೊಪ್ಪಳ: ಸಮುದಾಯ ಆರೋಗ್ಯ ಕೇಂದ್ರದ ಬಾಗಿಲಲ್ಲೇ ಮಹಿಳೆಗೆ ಹೆರಿಗೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪವೆಸಗಿದ ವೈದ್ಯ ಡಾ.ನಾಗರಾಜ ಪಾಟೀಲ್ ಹಾಗೂ ಶುಶ್ರೂಷಕ ಬಸವರಾಜ ಅವರನ್ನು ಅಮಾನತು ಮಾಡುವಂತೆ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಕನಕಗಿರಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಬಾಗಿಲಲ್ಲಿ, ಗೌರಿಪುರ ಗ್ರಾಮದ ಬೃಂದಾ ಎಂಬ ಮಹಿಳೆಯ ಹೆರಿಗೆಯಾಗಿತ್ತು. ಹೆರಿಗೆ ಸಮಯದಲ್ಲಿ ಬಾಗಿಲು ಬಳಿ ಬಂದು ನಿಂತರೂ ಆರೋಗ್ಯ ಕೇಂದ್ರ ಸಿಬ್ಬಂದಿಗಳು ಬಾಗಿಲು ತೆರೆಯದೇ ಹೊರಗೇ ನಿಲ್ಲಿಸಿದ್ದರು. ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮುಖ್ಯ ದ್ವಾರದಲ್ಲೇ ಮಹಿಳೆ ಬೃಂದಾ ಮಗುವಿಗೆ ಜನ್ಮ ನೀಡಿದ್ದಾಳೆ. ಬಾಗಿಲು ತೆರೆಯದೇ ಕರ್ತವ್ಯ ಲೋಪ ಮಾಡಿದ್ದರಿಂದ ಡಾ.ನಾಗರಾಜ ಪಾಟೀಲ್​ ಮತ್ತು ಶುಶ್ರೂಷಕ ಬಸವರಾಜರನ್ನು ಅಮಾನತುಗೊಳಿಸಲಾಗಿದೆ.

ಬೃಂದಾ, ಹೆರಿಗೆ ನೋವಿನಿಂದ ಬೆಳಗಿನ ಜಾವ 6 ಗಂಟೆಗೆ ಆಸ್ಪತ್ರೆಗೆ ಬಂದಿದ್ದಾರೆ. ಆದ್ರೆ ಸಿಬ್ಬಂದಿ ಆಸ್ಪತ್ರೆ ಬಾಗಿಲು ತೆರೆಯದೆ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ ಯಾವೊಬ್ಬ ವೈದ್ಯ ಸಹ ಮಹಿಳೆಗೆ ಚಿಕಿತ್ಸೆ ನೀಡಲು ಮುಂದಾಗಿಲ್ಲ.

ಅದಾದ ಬಳಿಕ ಆಸ್ಪತ್ರೆಯ ಮುಂಭಾಗದಲ್ಲೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗರ್ಭಿಣಿ ಜೊತೆ ಬಂದಿದ್ದ ಹಿರಿಯ ಮಹಿಳೆಯರೇ ಹೆರಿಗೆ ಮಾಡಿಸಿದ್ದು ಸದ್ಯ ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಆಸ್ಪತ್ರೆಯ ಬೇಜವಾಬ್ದಾರಿತನಕ್ಕೆ ಕುಟುಂಬಸ್ಥರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಇಷ್ಟೆಲ್ಲ ಆದ ಬಳಿಕ ಆಸ್ಪತ್ರೆ ಸಿಬ್ಬಂದಿ ತಾಯಿ-ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದರು. ಆದರೆ, ನೈಟ್ ಶಿಫ್ಟ್​ನಲ್ಲಿರುವ ವೈದ್ಯರನ್ನು ಅಮಾನತು ಮಾಡಿ, ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದರು.

suspend letter koppala

ವೈದ್ಯರನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ

suspend letter koppala

ಅಮಾನತು ಮಾಡುವಂತೆ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ

ಇದನ್ನೂ ಓದಿ: ಚಿಕಿತ್ಸೆ ಹಾಗಿರಲಿ, ಆಸ್ಪತ್ರೆ ಬಾಗಿಲನ್ನೂ ತೆರೆಯದೆ ಸಿಬ್ಬಂದಿ ಅಸಡ್ಡೆ: ಆಸ್ಪತ್ರೆ ಹೊರಗಡೆಯೇ ಮಗುವಿಗೆ ಜನ್ಮ ನೀಡಿದ ತಾಯಿ