ಕೊಪ್ಪಳ, ಜೂ.30: ನಿರ್ಮಾಣವಾಗಿರುವ ಬೃಹತ್ ಕಟ್ಟಡ. ಮತ್ತೊದೆಡೆ ಅಂತಿಮ ಹಂತದ ಸಿದ್ದತೆ ಮಾಡುತ್ತಿರುವ ಸಿಬ್ಬಂದಿ. ಸಂಗ್ರಹವಾಗಿರುವ ದವಸ ಧಾನ್ಯಗಳು ಒಂದೆಡೆಯಾದ್ರೆ, ಇನ್ನೊಂದೆಡೆ ಸಾವಿರಾರು ವಿದ್ಯಾರ್ಥಿಗಳಿಗೆ ಬಿಸಿಬಿಸಿ ಊಟ ತಯಾರು ಮಾಡಲು ಸಿದ್ದವಾಗಿರೋ ಅತ್ಯಾಧುನಿಕ ಅಡುಗೆ ಮನೆ. ಇಂತಹದೊಂದು ಸಿದ್ದತೆ ಆರಂಭವಾಗಿರೋದು ಕೊಪ್ಪಳ ನಗರದ ಗವಿಮಠ(Gavimath)ದಲ್ಲಿ. ಈ ಭವ್ಯ ಕಟ್ಟಡ, ಅಡುಗೆ ಮನೆಯನ್ನು ಮಾಡಿರುವುದು ಭಕ್ತರಿಗಾಗಿ ಅಲ್ಲ, ಬದಲಾಗಿ ಬಡ ಮಕ್ಕಳ ಶಿಕ್ಷಣಕ್ಕಾಗಿ. ಹೌದು, ಸರಿಸುಮಾರು ಐದು ಸಾವಿರ ವಿದ್ಯಾರ್ಥಿಗಳು ವಸತಿ ಸಹಿತ ಇರಬಹುದಾದ ವಸತಿ ಮತ್ತು ಪ್ರಸಾದ ನಿಲಯ ನಾಳೆ (ಸೋಮವಾರ) ಉದ್ಘಾಟನೆಗೊಳ್ಳಲಿದೆ.
ಜುಲೈ 1 ರಂದು ಲಿಂಗೈಕ್ಯ ಮರಿಶಾಂತ ಶಿವಯೋಗಿಗಳ 57 ನೇ ಪುಣ್ಯಸ್ಮರಣೋತ್ಸವದ ದಿನವೇ, ಉಚಿತ ವಸತಿ ಪ್ರಸಾದ ನಿಲಯ ಉದ್ಘಾಟನೆಯಾಗಲಿದೆ. ಇನ್ನು ಗವಿಮಠದಲ್ಲಿ ಶೈಕ್ಷಣಿಕ ಸೇವೆಗೆ ಮುನ್ನುಡಿಯನ್ನು ಬರೆದಿದ್ದೇ ಲಿಂಗೈಕ್ಯ ಮರಿಶಾಂತ ಶಿವಯೋಗಿಗಳು. ಅವರ ಶೈಕ್ಷಣಿಕ ಸೇವೆಯನ್ನು ಮತ್ತಷ್ಟು ವಿಸ್ತಾರಗೊಳಿಸಿದ್ದು ಸದ್ಯದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ. ಈಗಾಗಲೇ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಮಠದಲ್ಲಿ ಓದುತ್ತಿದ್ದಾರೆ. ಆದ್ರೆ, ಇನ್ನು ಹೆಚ್ಚಿನ ಮಕ್ಕಳು ಬಂದಾಗ, ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲೂ ಆಗದೇ, ಇರೋದಕ್ಕೆ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಎರಡು ವರ್ಷದ ಹಿಂದೆ ಕಣ್ಣೀರು ಹಾಕಿದ್ದರು.
ಇದನ್ನೂ ಓದಿ:ಇದೇ ಮೊದಲ ಬಾರಿಗೆ ಶಾಲೆ ಮೆಟ್ಟಿಲು ಹತ್ತುವ ಮಕ್ಕಳಿಗೆ ಕೊಪ್ಪಳದ ಗವಿಮಠದಲ್ಲಿ ಅಕ್ಷರಾಭ್ಯಾಸ
ಬಡ ಮಕ್ಕಳಿಗೆ ಶಿಕ್ಷಣ ಕೊಡಲಿಕ್ಕಾಗದೇ ಇರೋದಕ್ಕೆ ನೋವನ್ನು ವ್ಯಕ್ತಪಡಿಸಿದ್ದರು. ಸ್ವಾಮೀಜಿಯ ನೋವಿಗೆ ಅಂದು ಅನೇಕ ಕೈಗಳು ಮುಂದೆ ಬಂದು ಕಣ್ಣೀರು ಒರೆಸುವ ಕೆಲಸ ಮಾಡಿದ್ದರು. ಅನೇಕ ದಾನಿಗಳು, ನಾವು ನಿಮಗೆ ನೆರವಾಗುತ್ತೇವೆ, ನೀವು ಮಕ್ಕಳ ಶಿಕ್ಷಣಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿ ಎಂದು ಎರಡು ವರ್ಷದ ಹಿಂದೆ ಹೇಳಿದ್ದರು. ಹೀಗಾಗಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಮಠದ ಆವರಣದಲ್ಲಿಯೇ ಹಾಸ್ಟೇಲ್ ನಿರ್ಮಾಣ ಕೆಲಸ ಆರಂಭಿಸಿದ್ದರು. ಇದೀಗ ಹಾಸ್ಟೇಲ್ ನಿರ್ಮಾಣ ಕೆಲಸ ಮುಗಿದಿದ್ದು, ನಾಳೆ ಉದ್ಘಾಟನೆಯಾಗಲಿದೆ.
ನೂತನ ಕಟ್ಟಡದಲ್ಲಿ 130 ಕೊಠಡಿಗಳಿವೆ. ವಿಶಾಲವಾದ ಪ್ರಸಾದ ನಿಲಯ. ಸ್ನಾನಗೃಹಗಳು ಇವೆ. ಇನ್ನು ಅತ್ಯಾಧುನಿಕ ಅಡುಗೆ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಒಂದು ಗಂಟೆಗೆ ಸಾವಿರದ ಐನೂರು ಚಪಾತಿ ಮಾಡುವ ಯಂತ್ರ. ಹತ್ತೇ ನಿಮಿಷದಲ್ಲಿ ಹತ್ತು ಸಾವಿರ ಇಡ್ಲಿ ಮಾಡೋ ಮಷಿನ್ ಗಳನ್ನು ತರಿಸಲಾಗಿದೆ. ಸರಿಸುಮಾರು ಐದು ಸಾವಿರ ವಿದ್ಯಾರ್ಥಿಗಳಿಗೆ ಯಾವುದೇ ಸಣ್ಣ ತೊಂದರೆಯಾಗದಂತೆ ನೋಡಿಕೊಳ್ಳುವಂತಹ ಹಾಸ್ಟೇಲ್ ನಿರ್ಮಾಣ ಮಾಡಲಾಗಿದೆ. ನಾಳೆ ಸರಳವಾಗಿ ಅನೇಕ ಸ್ವಾಮೀಜಿಗಳು, ಕೆಲ ಸಾಧಕರು ಹಾಸ್ಟೇಲ್ ಉದ್ಘಾಟನೆ ಮಾಡಲಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಇಂದಿಗೂ ಕೂಡ ಬಡ ಮಕ್ಕಳ ಶಿಕ್ಷಣಕ್ಕೆ ಮಠಗಳೇ ಆಧಾರವಾಗಿವೆ. ಜಾತಿ ಬೇಧವೆನ್ನದೇ ಮಠಗಳು ಮಕ್ಕಳಿಗೆ ಉಚಿತ ವಸತಿ, ಪ್ರಸಾದ ಮತ್ತು ಶಿಕ್ಷಣದ ವ್ಯವಸ್ಥೆಯನ್ನು ಮಾಡುತ್ತಿವೆ.ಅದರಲ್ಲೂ ಗವಿಮಠ, ಭಕ್ತರ ಸಹಕಾರಿಂದ ಇದೀಗ ಸಾವಿರಾರು ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಮಾಡಿದೆ. ಕೊಪ್ಪಳದ ಗವಿಮಠದ ಕಾರ್ಯ, ಶ್ಲಾಘನೀಯವಾಗಿದೆ. ಧರ್ಮ, ಜಾತಿಗಳನ್ನು ನೋಡದೆ, ಸರ್ವಧರ್ಮದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ಕನಸು ಮತ್ತಷ್ಟು ವಿಸ್ತಾರವಾಗುತ್ತಿದೆ. ಬಡ ಮಕ್ಕಳಿಗೆ ಗವಿಮಠ ಆಶ್ರಯತಾಣವಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:12 pm, Sun, 30 June 24