ವಿಜಯನಗರ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆ, ಇಂದು (ಡಿಸೆಂಬರ್ 6) ವಿಶ್ವವಿದ್ಯಾಲಯದ ಕಾರ್ಯಕಾರಿ (ಸಿಂಡಿಕೇಟ್) ಸಮಿತಿಯ ಸಭೆ ನಡೆಯಲಿದೆ. ಹೀಗಾಗಿ ಅನಧಿಕೃತ ವ್ಯಕ್ತಿಗಳಿಗೆ ಇಂದು ಹಂಪಿ ವಿಶ್ವವಿದ್ಯಾಲಯದ ಒಳಗಡೆ ಪ್ರವೇಶವಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ವಿವಿಯ ಕುಲಸಚಿವ ಡಾ. ಸುಬ್ಬಣ್ಣ ರೈ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿವಿ ಆಡಳಿತ ಮಂಡಳಿಯ ನಡೆಗೆ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಇಂದು ನಾನಾ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಪತ್ರಗಳನ್ನು ನೀಡಲು ನೌಕರರ ಸಂಘ ತಿರ್ಮಾನಿಸಿದೆ. ಹೀಗಾಗಿ ಅನಾವಶ್ಯಕ ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದು ವಿವಿಯ ಆಡಳಿತ ಮಂಡಳಿ ಈ ರೀತಿಯಾಗಿ ಪ್ರವೇಶ ನಿರ್ಬಂಧ ಆದೇಶ ಹೊರಡಿಸಿದೆ.
ನೌಕರರ ವೇತನಕ್ಕಾಗಿ ಪ್ರಸ್ತಾವನೆ
ಸದ್ಯ ವಿವಿ ಬಳಿ ಅನುದಾನ ಇಲ್ಲದ ಇರುವ ಕಾರಣ ಇದೇ ಮೊದಲ ಬಾರಿಗೆ ಕಳೆದ 15-20 ವರ್ಷಗಳಿಂದ ಕೆಲಸ ಮಾಡುತ್ತ ಬಂದಿರುವ 140ಕ್ಕೂ ಹೆಚ್ಚು ಕ್ರೂಢೀಕೃತ, ಗುತ್ತಿಗೆ ನೌಕರರಿಗೆ ಹತ್ತು ತಿಂಗಳಿಂದ ವೇತನ ನೀಡಿಲ್ಲ. ಗುತ್ತಿಗೆ ನೌಕರರ ವೇತನಕ್ಕಾಗಿ 6 ಕೋಟಿ ಪ್ರತ್ಯೇಕ ಅನುದಾನ ಬಿಡುಗಡೆ ಮಾಡುವಂತೆ ಸಹ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಇದುವರೆಗೆ ನಯಾಪೈಸೆ ಸರ್ಕಾರದಿಂದ ನೀಡಿಲ್ಲ. ಮೇಲಿಂದ ಮೇಲೆ ಪ್ರಸ್ತಾವನೆಗಳು ಕಳುಹಿಸಲಾಗುತ್ತಿದೆ ಹೊರತು ಸರ್ಕಾರದಿಂದ ಬಿಡಿಗಾಸು ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಕನಿಷ್ಠ ವಿದ್ಯುತ್ ಬಿಲ್ ಕೂಡ ಪಾವತಿ ಮಾಡಲು ಅನುದಾನ ಇಲ್ಲದ ಪರಿಸ್ಥಿತಿ ವಿವಿಗೆ ನಿರ್ಮಾಣವಾಗಿದ್ದು, ಸುಮಾರು 60 ಲಕ್ಷ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಬಿಲ್ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಂಪಿ ಕನ್ನಡ ವಿವಿಗೆ ರಾಜ್ಯ ಸರ್ಕಾರ ಸಮರ್ಪಕ ಅನುದಾನ ಬಿಡುಗಡೆ ಮಾಡಬೇಕು ಅಂತಾ ಸಾಹಿತಿಗಳು ಒತ್ತಾಯಿಸುತ್ತಿದ್ದಾರೆ.
ಬೇರೆ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚು ಕಾಲೇಜುಗಳಿರುವ ಕಾರಣ ವಿದ್ಯಾರ್ಥಿಗಳಿಂದ ನೀಡುವ ಶುಲ್ಕದಿಂದ ಖರ್ಚು ನಿಭಾಯಿಸುತ್ತವೆ. ಆದರೆ ಕನ್ನಡ ವಿವಿ ಸಂಶೋಧನಾ ಪ್ರಾಧಾನವಾಗಿರುವುದರಿಂದ ಸರ್ಕಾರದ ಅನುದಾನದ ಆಧಾರದ ಮೇಲೆ ನಿಂತಿದೆ.
ಇದನ್ನೂ ಓದಿ:
ಕರ್ನಾಟಕದ 31ನೇ ಜಿಲ್ಲೆಯಾಗಿ ಉದಯಿಸಲಿದೆ ವಿಜಯನಗರ; ಹಂಪಿ ಪರಿಕಲ್ಪನೆಯಲ್ಲಿ ವೇದಿಕೆ ಸಿದ್ಧ
Published On - 12:05 pm, Mon, 6 December 21