ತೆಲಂಗಾಣದ ಮಹೀಂದ್ರಾ ಯೂನಿವರ್ಸಿಟಿಯಲ್ಲಿ 30 ಮಂದಿಗೆ ಕೊರೊನಾ ಸೋಂಕು; ವಿಶ್ವವಿದ್ಯಾಲಯ ಲಾಕ್, ಸೋಂಕಿತರು ಆಸ್ಪತ್ರೆಗೆ ದಾಖಲು
ಕರ್ನಾಟಕದಲ್ಲೂ ಇಂಥದ್ದೇ ಒಂದು ಘಟನೆ ನಡೆದಿದೆ. ಧಾರವಾಡದ ಸತ್ತೂರು ಬಡಾಣೆಯಲ್ಲಿರೋ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ.
ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಬೆನ್ನಲ್ಲೇ ಶಾಲಾ-ಕಾಲೇಜುಗಳು ಶುರುವಾಗಿವೆ. ಬಹುತೇಕ ಎಲ್ಲ ಸಂಸ್ಥೆಗಳು, ಸೇವೆಗಳೂ ಮರು ಆರಂಭಗೊಂಡಿವೆ. ಆದರೆ ಈಗೀಗ ಶಾಲಾ-ಕಾಲೇಜುಗಳಲ್ಲಿ ಸಾಮೂಹಿಕವಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಹಾಗೇ, ತೆಲಂಗಾಣದ ಮೇಡ್ಚಲ-ಮಲ್ಕಾಜಗಿರಿ ಜಿಲ್ಲೆಯಲ್ಲಿರುವ ಮಹೀಂದ್ರಾ ವಿಶ್ವವಿದ್ಯಾಲಯದಲ್ಲಿ 30 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸದ್ಯ ಆ ಯೂನಿವರ್ಸಿಟಿಗೆ ಲಾಕ್ಡೌನ್ ಹೇರಲಾಗಿದೆ ಎಂದು ಜಿಲ್ಲಾ ಉಪ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.
ಒಟ್ಟು 30 ಕೊರೊನಾ ಸೋಂಕಿತರಲ್ಲಿ 25 ಮಂದಿ ವಿದ್ಯಾರ್ಥಿಗಳಾಗಿದ್ದಾರೆ. ಉಳಿದ ಐವರು ಶಿಕ್ಷಕರು. ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಗೇ ಅವರು ಐಸೋಲೇಟ್ ಆಗಿದ್ದಾರೆ. ಸದ್ಯಕ್ಕಂತೂ ಯಾರ ಸ್ಥಿತಿಯೂ ಗಂಭೀರ ಪರಿಸ್ಥಿತಿ ತಲುಪಿಲ್ಲ ಎಂದು ಉಪ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಈ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕ ಸಿಬ್ಬಂದಿಯೆಲ್ಲ ಸೇರಿ 1700 ಮಂದಿ ಇದ್ದಾರೆ. ಸದ್ಯಕ್ಕಂತೂ ವಿಶ್ವವಿದ್ಯಾಲಯದ ಬಾಗಿಲು ಹಾಕಲಾಗಿದ್ದು, ಎಲ್ಲರೂ ಮನೆಯಲ್ಲಿ ಐಸೋಲೇಟ್ ಆಗಲು ಸೂಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಹಾಗಂತ ಕೊರೊನಾ ವೈರಸ್ಗೆ ಒಳಗಾದವರು ಎರಡೂ ಡೋಸ್ ವ್ಯಾಕ್ಸಿನ್ ಆದವರೇ ಆಗಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ಯೂನಿವರ್ಸಿಟಿಯಲ್ಲಿ ಕ್ಲಾಸ್ಗಳು ಮುಂದುವರಿಯಲಿವೆ. ಅಂದಹಾಗೆ ಮಹೀಂದ್ರಾ ವಿಶ್ವವಿದ್ಯಾಲಯ ಬಹದ್ದೂರ್ಪಲ್ಲಿದ್ದು, ಖಾಸಗಿ ಯೂನಿವರ್ಸಿಟಿಯಾಗಿದೆ. ಟೆಕ್ ಮಹೀಂದಾ ಕಂಪನಿಯ ಅಂಗಸಂಸ್ಥೆಯಾದ ಮಹೀಂದ್ರಾ ಶಿಕ್ಷಣ ಸಂಸ್ಥೆಗಳಿಂದ ಇದು ನಡೆಯುತ್ತಿದೆ.
ಕರ್ನಾಟಕದಲ್ಲೂ ಇಂಥದ್ದೇ ಒಂದು ಘಟನೆ ನಡೆದಿದೆ. ಧಾರವಾಡದ ಸತ್ತೂರು ಬಡಾಣೆಯಲ್ಲಿರೋ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಇಲ್ಲೂ ಸಹ ತರಗತಿಗಳು ಪ್ರಾರಂಭವಾಗಿದ್ದವು. ಆರಂಭದಲ್ಲಿ ನಾಲ್ವರು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಅವರ ಸಂಪರ್ಕಕ್ಕೆ ಬಂದ 300 ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಲಾಗಿದ್ದು, ಅದರಲ್ಲಿ 66 ಮಂದಿಗೆ ವೈರಸ್ ಇರುವುದು ಪತ್ತೆಯಾಗಿದೆ. ಸೋಂಕಿತರಿಗೆ ಇಲ್ಲಿನ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಗಾಯಕಿ ಹರಿಣಿ ತಂದೆ ಎ.ಕೆ. ರಾವ್ ಸಂಶಯಾಸ್ಪದ ಸಾವಿಗೆ ಬರೋಬ್ಬರಿ 390 ಕೋಟಿ ಸಾಲದ ನಂಟು
Published On - 9:43 am, Sat, 27 November 21