3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಮಸೂದೆ ಸಂಸತ್ತಿನಲ್ಲಿ ಸೋಮವಾರ ಮಂಡನೆ; ಬಿಜೆಪಿ ಸಂಸದರಿಗೂ ವಿಪ್ ಜಾರಿ
ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ನಡುವಿನ ಹಲವು ಸುತ್ತಿನ ಮಾತುಕತೆಗಳು ವಿಫಲವಾದ ಬೆನ್ನಲ್ಲೇ ನವೆಂಬರ್ 19ರ ಗುರುನಾನಕ್ ಜಯಂತಿಯಂದು ಈ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು.
ಮೂರು ಕೃಷಿ ಕಾಯ್ದೆ(Farm Laws) ಗಳನ್ನು ವಾಪಸ್ ಪಡೆಯುವ ಮಸೂದೆ ಸೋಮವಾರ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಈ ಬಿಲ್ ಮಂಡನೆ ಮಾಡಲಿದ್ದಾರೆ. ಅಂದು ಕಡ್ಡಾಯವಾಗಿ ಬಿಜೆಪಿ ಸಂಸದರು ಲೋಕಸಭೆಯಲ್ಲಿ ಹಾಜರಿರಲೇಬೇಕು ಎಂದು ವಿಪ್ ಜಾರಿ ಮಾಡಲಾಗಿದೆ. ಹಾಗೇ, ರಾಜ್ಯಸಭೆ ಸದಸ್ಯರಿಗೂ ವಿಪ್ ಜಾರಿಯಾಗಿದೆ. ಇನ್ನು ಕಾಂಗ್ರೆಸ್ ಕೂಡ ತನ್ನ ಸಂಸದರಿಗೆ ಮೂರು ಸಾಲಿನ ವಿಪ್ ಜಾರಿ ಮಾಡಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಇದೆ. ಮೂರು ಕೃಷಿ ಕಾಯ್ದೆಗಳ ರದ್ದತಿ ಮಸೂದೆಯನ್ನೂ ಅಧಿವೇಶನದ ಇತರ 26 ಕಾರ್ಯಸೂಚಿಯೊಂದಿಗೆ ಕೇಂದ್ರ ಸರ್ಕಾರ ಸೇರಿಸಿದೆ. ಇನ್ನುಳಿದಂತೆ ಕ್ರಿಪ್ಟೋಕರೆನ್ಸಿ ಮಸೂದೆ, ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಸರ್ಕಾರದ ಪಾಲನ್ನು ಶೇ.51ರಿಂದ ಶೇ.26ಕ್ಕೆ ಇಳಿಸುವ ಬಿಲ್ಗಳೂ ಸೇರಿದ್ದು, ಇವು ಬಹುಮುಖ್ಯವಾಗಿವೆ. ಈ ಕೃಷಿ ಕಾಯ್ದೆಗಳನ್ನು ಕಳೆದ ವರ್ಷದ ಮುಂಗಾರು ಅಧಿವೇಶನದಲ್ಲಿ ಅಂಗೀಕಾರ ಮಾಡಲಾಗಿತ್ತು. ಆದರೆ ಕೃಷಿ ಮಸೂದೆಗಳು ಪಾಸ್ ಆಗಿ ಕಾಯ್ದೆಯಾಗಿ ರೂಪುಗೊಂಡಾಗಿನಿಂದಲೂ ರೈತರು ಸಿಕ್ಕಾಪಟೆ ಪ್ರತಿಭಟನೆ ಮಾಡುತ್ತಲೇ ಇದ್ದರು. ಕಳೆದೊಂದು ವರ್ಷದಿಂದಲೂ ದೆಹಲಿಯ ಗಡಿಭಾಗಗಳಲ್ಲಿ ರೈತರ ಹೋರಾಟ ಮುಂದುವರಿದಿತ್ತು.
ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ನಡುವಿನ ಹಲವು ಸುತ್ತಿನ ಮಾತುಕತೆಗಳು ವಿಫಲವಾದ ಬೆನ್ನಲ್ಲೇ ನವೆಂಬರ್ 19ರ ಗುರುನಾನಕ್ ಜಯಂತಿಯಂದು ಈ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು. ಆದರೆ ಸಂಸತ್ತಿನಲ್ಲಿ ರದ್ದುಗೊಂಡ ವಿನಃ ಹೋರಾಟ ಕೈಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಇದೀಗ ಅದನ್ನು ರದ್ದುಪಡಿಸಲು ಮತ್ತೊಂದು ಬಿಲ್ ಅಂಗೀಕಾರ ಮಾಡಬೇಕಾಗಿದೆ.
ಇದನ್ನೂ ಓದಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ 59ನೇ ಹುಟ್ಟುಹಬ್ಬ: ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಶುಭಾಶಯ
Published On - 12:01 pm, Sat, 27 November 21