ತುಂಗಭದ್ರಾ ಜಲಾಶಯ ಗೇಟ್‌‌ ದುರಸ್ತಿ ಸಂಪೂರ್ಣ ಮುಕ್ತಾಯ: ಹನಿ ನೀರು ಹೊರಹೋಗದಂತೆ ತಡೆಯುವಲ್ಲಿ ಸಿಬ್ಬಂದಿ ಯಶಸ್ವಿ

| Updated By: ರಮೇಶ್ ಬಿ. ಜವಳಗೇರಾ

Updated on: Aug 20, 2024 | 5:57 PM

ತುಂಗಭದ್ರಾ ಜಲಾಶಯದ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿದ್ದು ದೊಡ್ಡ ಮಟ್ಟದ ಆತಂಕವನ್ನು ಹೆಚ್ಚಿಸಿತ್ತು. ಆದ್ರೆ ವಾರದ ನಂತರ ಜಲಾಶಯಕ್ಕೆ ಸ್ಟಾಪ್ ಲಾಗ್ ಗೇಟ್ ಅಳವಡಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದರು. ಆದರೂ ಕೂಡಾ ಒಂದಿಷ್ಟು ನೀರು ಲಿಕೇಜ್ ಆಗ್ತಿತ್ತು. ಆದ್ರೆ ಇದೀಗ ಅದನ್ನು ಕೂಡಾ ಬಂದ್ ಮಾಡುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇನ್ನೊಂದಡೆ ತುಂಬಿ ಹರಿಯುತ್ತಿದ್ದ ನದಿ ಇದೀಗ ಬಿಕೋ ಅಂತಿದೆ.

ತುಂಗಭದ್ರಾ ಜಲಾಶಯ ಗೇಟ್‌‌ ದುರಸ್ತಿ ಸಂಪೂರ್ಣ ಮುಕ್ತಾಯ: ಹನಿ ನೀರು ಹೊರಹೋಗದಂತೆ ತಡೆಯುವಲ್ಲಿ ಸಿಬ್ಬಂದಿ ಯಶಸ್ವಿ
ತುಂಗಭದ್ರಾ
Follow us on

ಕೊಪ್ಪಳ, (ಆಗಸ್ಟ್ 20): ಸಂಪೂರ್ಣ ಭರ್ತಿಯಾಗಿದ್ದ ತುಂಗಾಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ 19 ಕಿತ್ತುಕೊಂಡು ಹೋಗಿತ್ತು. ಇದರಿಂದ ರಿಪೇರಿ ಮಾಡಲು ಡ್ಯಾಂನಲ್ಲಿದ್ದ ಅರ್ಧದಷ್ಟು ನೀರು ಖಾಲಿ ಮಾಡಬೇಕಿತ್ತು. ಇದರಿಂದ ರೈತರು ಆತಂಕಕ್ಕೀಡಾಗಿದ್ದರು. ಆದ್ರೆ, ತಜ್ಞ ಹರಸಾಹಸಪಟ್ಟು ಇನ್ನೂ ಜಲಾಶಯದಲ್ಲಿ 70 ಟಿಎಂಸಿ ನೀರು ಇರುವಾಗಲೇ ಗೇಟ್ ದುರಸ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಆತಂಕದಲ್ಲಿದ್ದ ರೈತರು ಕೊಂಚ ನಿರಾಳರಾಗಿದ್ದರು. ಆದ್ರೆ, ಇದೀಗ ಗೇಟ್​ನ ದುರಸ್ತಿ ಸಂಪೂರ್ಣ ಮುಕ್ತಾಯವಾಗಿದ್ದು, ಒಂದು ಹನಿ ನೀರು ಪೋಲಾಗದಂತೆ ಮಾಡಿದ್ದಾರೆ. ಅಲ್ಲದೇ ಜಲಾಶಯಕ್ಕೆ ನೀರು ಸಹ ಹರಿದುಬರುತ್ತಿದೆ. ಇದರಿಂದ ಜಲಾಶಯ ತುಂಬುವ ಭರವಸೆ ಚಿಗುರೊಡೆದಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ.

ಹೌದು.. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟಗೇಟ್ ಇದೇ ಆಗಸ್ಟ್ 10 ರಂದು ಕೊಚ್ಚಿಕೊಂಡು ಹೋಗಿತ್ತು. 19 ನೇ ಗೇಟ್ ವೊಂದರಿಂದಲೇ ಬರೋಬ್ಬರಿ 35 ಸಾವಿರ ಕ್ಯೂಸೆಕ್ ನೀರು ಹೊರ ಹೋಗ್ತಿತ್ತು. ಇನ್ನು ಜಲಾಶಯದಿಂದ ಒಂದೇ ವಾರದಲ್ಲಿ ನಲವತ್ತೈದು ಟಿಎಂಸಿಗೂ ಹೆಚ್ಚು ನೀರು ವ್ಯರ್ಥವಾಗಿ ಹರಿದು ಹೋಗಿತ್ತು. ಇನ್ನು ನಿರಂತರವಾಗಿ ಒಂದು ವಾರ ಕಾಲ ಶ್ರಮವಹಿಸಿದ್ದ ಸಿಬ್ಬಂದಿ, ಸ್ಟಾಪ್ ಲಾಗ್ ಗೇಟ್ ನ ಐದು ಎಲಿಮೆಂಟ್ ಗಳನ್ನು ಅಳವಡಿಸಿ, ಹರಿಯುವ ನೀರನ್ನು ತಡೆಯುವಲ್ಲಿ ಸಫಲರಾಗಿದ್ದರು. ಆಗಸ್ಟ್ 17 ರಂದು ಐದು ಎಲಿಮೆಂಟ್ ಗಳ ಪ್ರಕ್ರಿಯೇಯನ್ನು ಮುಗಿಸಿದ್ದರು. ಎಲಿಮೆಂಟ್ ಅಳವಡಿಕೆ ಪೂರ್ಣಗೊಂಡರು ಕೂಡಾ ಗೇಟ್ ನಿಂದ ಅಲ್ಪಪ್ರಮಾಣದ ನೀರು ಹೊರ ಹೋಗುತ್ತಿತ್ತು. ಹೀಗಾಗಿ ಕಳೆದ ಎರಡು ದಿನಗಳಿಂದ ಮತ್ತೆ ಕೆಲಸ ಆರಂಭಿಸಿದ ಸಿಬ್ಬಂದಿ, ಇದೀಗ ಹನಿ ನೀರು ಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಗೇಟ್​ ಅಳವಡಿಕೆ: ಕಾರ್ಮಿಕರ ಸಾಹಸಮಯ ಕೆಲಸದ ವಿಡಿಯೋ ವೈರಲ್

ಶಿವಮೊಗ್ಗದಿಂದ ಬಂದಿದ್ದ ಮುಳುಗು ತಜ್ಞರು ಮತ್ತು ಜಲಾಶಯದ ಸಿಬ್ಬಂದಿ, ಎಲಿಮೆಂಟ್ ಗಳಿಗೆ ವೇಲ್ಡಿಂಗ್ ಮಾಡುವ ಮೂಲಕ ನೀರು ಹೊರಹೋಗದನ್ನು ತಡೆಯುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ಹೀಗಾಗಿ ನಿನ್ನೆಯಿಂದ 19ನೇ ಗೇಟ್ ಸೇರಿದಂತೆ ಜಲಾಶಯದಿಂದ ನದಿಗೆ ಹನಿ ನೀರು ಕೂಡಾ ಹೊರಗೆ ಹೋಗುತ್ತಿಲ್ಲ. ಇದರಿಂದ ತುಂಗಭದ್ರಾ ನದಿ ಇದೀಗ ಬಿಕೋ ಅಂತಿದೆ.

ಮೊನ್ನೆವರಗೆ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟಿದ್ದರಿಂದ ನದಿ ತುಂಬಿ ಹರಿಯುತ್ತಿತ್ತು. ಆದ್ರೆ ಇದೀಗ ಜಲಾಶಯದಲ್ಲಿ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ನೀರನ್ನು ಸ್ಟಾಪ್ ಮಾಡಲಾಗಿದೆ. ಹೀಗಾಗಿ ತುಂಗಭದ್ರಾ ನದಿಯಲ್ಲಿ ಕಲ್ಲುಬಂಡೆಗಳು ಮಾತ್ರ ಕಾಣುತ್ತಿವೆ.

ಜಲಾಶಯದಲ್ಲಿ ಹೆಚ್ಚಾಗುತ್ತಿದೆ ನೀರಿನ ಪ್ರಮಾಣ

ಇನ್ನು ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಆಗಸ್ಟ್ 17 ರಂದು ಜಲಾಶಯದಲ್ಲಿ 71 ಟಿಎಂಸಿ ನೀರು ಇತ್ತು. ಆದ್ರೆ ಮೂರೇ ದಿನದಲ್ಲಿ ಜಲಾಶಯದ ಮಟ್ಟಿಗೆ 77 ಟಿಎಂಸಿಗೆ ಹೆಚ್ಚಳವಾಗಿದೆ. ಮೂರೇ ದಿನದಲ್ಲಿ ಆರು ಟಿಎಂಸಿಯಷ್ಟು ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಜಲಾಶಯ ಮತ್ತೆ ತುಂಬುವ ಭರವಸೆ ಮೂಡಿದೆ.

ಪ್ರತಿನಿತ್ಯ ಜಲಾಶಯಕ್ಕೆ ಮೂವತ್ತೈದು ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇದೆ. ಇನ್ನು ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವದರಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬರುವ ಸಾಧ್ಯತೆ ಇದೆ. ಹೀಗಾಗಿ ಇನ್ನು ಕೆಲವೇ ದಿನದಲ್ಲಿ ಜಲಾಶಯ ತುಂಬಬಹುದು ಎಂದು ಹೇಳಲಾಗುತ್ತಿದೆ. ಇದು ಜಲಾಶಯದ ನೀರನ್ನೇ ನಂಬಿದವರ ಸಂತಸ ಹೆಚ್ಚಳ ಮಾಡುವಂತೆ ಮಾಡಿದೆ.

ಜಲಾಶಯದ ಗೇಟ್ ಸಂಪೂರ್ಣವಾಗಿ ಬಂದ್ ಆಗಿರುವುದು ಒಂದಡೆ ಖುಷಿ ಆಗಿದ್ದರೆ, ಇನ್ನೊಂದಡೆ ಮತ್ತೆ ಜಲಾಶಯಕ್ಕೆ ನೀರು ಬರ್ತಿರೋದು ಜನರ ಸಂತಸವನ್ನು ಇಮ್ಮಡಿಗೊಳಿಸಿದೆ. ಆದಷ್ಟು ಬೇಗನೆ ಜಲಾಶಯ ತುಂಬಲಿ, ಜಲಾಶಯದ ನೀರನ್ನೇ ನಂಬಿ ಬದುಕಿದವರಿಗೆ ನೀರು ಸಿಗುವಂತಾಗಲಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.