ಸೋಂಕಿತ ಮೃತರ ಮನೆಗಳಿಗೆ ಒಬ್ಬ ಸಚಿವರೂ ಭೇಟಿ ಕೊಟ್ಟಿಲ್ಲ; ಹೆಣದ ರಾಶಿಯ ಫೋಟೋಗಳು ನಮ್ಮ ಬಳಿ ಇವೆ: ಡಿಕೆ ಶಿವಕುಮಾರ್
DK Shivakumar press meet: ಕಳೆದ ತಿಂಗಳು ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ 36 ಕುಟುಂಬಗಳಲ್ಲಿ 28 ಕುಟುಂಬಗಳನ್ನು ಭೇಟಿ ಮಾಡಿ ಬೆಂಗಳೂರಿಗೆ ಮರಳಿದೆ. ಅವರೆಲ್ಲರ ಕರುಣಾಜನಕ ಕಥೆಗಳನ್ನು ಕೇಳಿ ಮನಸ್ಸಿಗೆ ತೀರಾ ನೋವಾಯಿತು. ಬಿಜೆಪಿ ಸರ್ಕಾರದ ಅಲಕ್ಷ್ಯದಿಂದಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ತಾಂಡವವಾಡುತ್ತಿರುವ ಕೊರೊನಾ ಮಹಾಮಾರಿಯ ಸ್ಥಿತಿಗತಿಗಳ ಬಗ್ಗೆ ರಾಜ್ಯ ಪ್ರವಾಸ ಮಾಡಿರುವ ಕಾಂಗ್ರೆಸ್ ನಾಯಕರು ಇಂದು ಸುದ್ದಿಗೋಷ್ಠಿಯಲ್ಲಿ ತಾವು ಕಂಡ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ನೀಡಿದ ಮಾಹಿತಿ, ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧದ ಆರೋಪಗಳು ಇಲ್ಲಿದೆ:
ಮೃತರ ಮನೆಗಳಿಗೆ ಒಬ್ಬ ಸಚಿವರೂ ಕೂಡ ಭೇಟಿ ಕೊಟ್ಟಿಲ್ಲ. ಭೇಟಿ ಕೊಟ್ಟು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿಲ್ಲ. ಇದು ಕೊಲೆಯೋ, ಆಕಸ್ಮಿಕವೋ ಮಾತನಾಡೋದು ಬೇಡ. ಆಸ್ಪತ್ರೆಯಲ್ಲಿ ತಾಯಿ ಮಡಿಲಲ್ಲೇ ಮಗ ಮೃತಪಟ್ಟಿದ್ದಾನೆ. ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರೇ ಇಲ್ಲ. ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳ ಕೊರತೆ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಕ್ರೋಶ ವ್ಯಪ್ತಪಡಿಸಿದರು.
ಒಂದು ಕೊಠಡಿಯಲ್ಲಿ 14ರಿಂದ 15 ಸೋಂಕಿತರನ್ನ ತುಂಬಿದ್ದಾರೆ. ಆಸ್ಪತ್ರೆಯಲ್ಲಿ ಹಲವು ರೋಗಿಗಳು ಮೃತಪಟ್ಟಿದ್ದಾರೆ. ಅವರು ಮೃತಪಟ್ಟ ಕೂಡಲೇ ಮತ್ತೆ ರೋಗಿಗಳನ್ನು ತುಂಬಿದ್ದಾರೆ. ಹೆಣದ ರಾಶಿಯ ಫೋಟೋಗಳು ನಮ್ಮ ಬಳಿ ಇವೆ. ಆದರೆ ಯಾವುದನ್ನೂ ಪ್ರದರ್ಶಿಸಲು ಹೋಗುವುದಿಲ್ಲ. ಮೃತರಲ್ಲಿ ಬಹುತೇಕರು ಯುವಕರೇ ಹೆಚ್ಚಾಗಿ ಇದ್ದಾರೆ. ಪ್ರತಿಯೊಂದನ್ನೂ ಬಿಡಿಸಿ ಹೇಳುವುದಕ್ಕೆ ಹೋಗುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ಕಳೆದ ತಿಂಗಳು ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ 36 ಕುಟುಂಬಗಳಲ್ಲಿ 28 ಕುಟುಂಬಗಳನ್ನು ಭೇಟಿ ಮಾಡಿ ಬೆಂಗಳೂರಿಗೆ ಮರಳಿದೆ. ಅವರೆಲ್ಲರ ಕರುಣಾಜನಕ ಕಥೆಗಳನ್ನು ಕೇಳಿ ಮನಸ್ಸಿಗೆ ತೀರಾ ನೋವಾಯಿತು. ಬಿಜೆಪಿ ಸರ್ಕಾರದ ಅಲಕ್ಷ್ಯದಿಂದಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಯಿತು ಎಂದರು.
ಸರ್ಕಾರ ವಿಧಾನಮಂಡಲ ಅಧಿವೇಶನವನ್ನು ಕರೆಯಲಿ. ಅಲ್ಲಿ ಪ್ರತಿಯೊಂದು ವಿಚಾರದ ಬಗ್ಗೆಯೂ ಮಾತನಾಡುತ್ತೇನೆ. ಜಿಲ್ಲಾಸ್ಪತ್ರೆಯಲ್ಲೇ ಇಂತಹ ಅವಘಡ ಆಗಿದೆ ಅಂದ್ರೆ ಹೇಗೆ? ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
(KPCC president dk shivakumar press meet on his state tour during corona times)