ಅಪಹರಣ ಕೇಸ್: ಪ್ರಕರಣದಿಂದ ಕೈಬಿಡುವಂತೆ ಕೋರಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಜಾ
ಕೆ.ಆರ್.ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಗುವ ನಿರೀಕ್ಷೆಯಲ್ಲಿದ್ದ ಭವಾನಿ ರೇವಣ್ಣಗೆ ನಿರಾಸೆಯಾಗಿದೆ. ಕೇಸ್ನಿಂದ ತಮ್ಮನ್ನು ಕೈಬಿಡುವಂತೆ ಕೋರಿ ಭವಾನಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಎ7 ಕೆ.ಎ.ರಾಜಗೋಪಾಲ್ ಮತ್ತು ಎ8 ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನ 42ನೇ ಎಸಿಜೆಎಂ ಕೋರ್ಟ್‌ನ ನ್ಯಾಯಾಧೀಶರಾದ ಕೆ.ಎನ್.ಶಿವಕುಮಾರ್ ವಜಾಗೊಳಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 13: ಕೆ.ಆರ್.ನಗರದ ಮಹಿಳೆಯ ಅಪಹರಣ ಪ್ರಕರಣದಿಂದ ಕೈಬಿಡುವಂತೆ ಕೋರಿ ಭವಾನಿ ರೇವಣ್ಣ (Bhavani Revanna) ಸಲ್ಲಿಸಿದ್ದ ಅರ್ಜಿಯನ್ನು 42ನೇ ಎಸಿಜೆಎಂ ಕೋರ್ಟ್ ವಜಾಗೊಳಿಸಿದೆ. ಎ7 ಕೆ.ಎ. ರಾಜಗೋಪಾಲ್ ಮತ್ತು ಎ8 ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನ ವಜಾಗೊಳಿಸಿ ನ್ಯಾ. ಕೆ.ಎನ್.ಶಿವಕುಮಾರ್ ಆದೇಶಿಸಿದ್ದಾರೆ. ಆ ಮೂಲಕ ಪ್ರಕರಣದಲ್ಲಿ ಭವಾನಿ ರೇವಣ್ಣಗೆ ಮತ್ತೆ ಹಿನ್ನಡೆಯಾಗಿದೆ.
ಘಟನೆ ಏನಾಗಿತ್ತು?
ವೈರಲ್ ಆಗಿದ್ದ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ‘ನನ್ನ ತಾಯಿಯ ಚಿತ್ರವೂ ಇದ್ದು, ಇದೀಗ ಅವರು ಕಣ್ಮರೆಯಾಗಿದ್ದಾರೆ ಎಂದು ಮೇ 2ರ ತಡರಾತ್ರಿ ಮೈಸೂರಿನ ಕೆ.ಆರ್ ನಗರ ಠಾಣೆಯಲ್ಲಿ ಸಂತ್ರಸ್ತೆಯೋರ್ವರ ಪುತ್ರ ಪ್ರಕರಣ ದಾಖಲಿಸಿದ್ದರು. ಅವರ ದೂರಿನ ಆಧಾರದಲ್ಲಿ ಹೆಚ್.ಡಿ. ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಂಬಂಧಿ ಬಾಬು ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಾಜಿ ಸಚಿವ ರೇವಣ್ಣ, ಅವರ ಪತ್ನಿ ಭವಾನಿ ಮತ್ತು ಬಾಬುವನ್ನು ಬಂಧಿಸಿದ್ದರು. ನಂತರ ಜಾಮೀನು ಕೋರಿ ಭವಾನಿ ರೇವಣ್ಣ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಅವರಿಗೆ ನಿರೀಕ್ಷಣಾ ಜಾಮೀನು ದೊರೆತಿತ್ತು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಭವಾನಿ ರೇವಣ್ಣ
ಆ ಬಳಿಕ ಪ್ರಕರಣ ಸುಪ್ರೀಂ ಕೋರ್ಟ್ವರೆಗೂ ಹೋಗಿದ್ದು, ಭವಾನಿ ರೇವಣ್ಣಗೆ ನೀಡಿದ್ದ ಜಾಮೀನು ರದ್ದುಪಡಿಸುವಂತೆ ಆಗ್ರಹಿಸಲಾಗಿತ್ತು. ಆರೋಪಿ ಮಹಿಳೆ ಪ್ರಕರಣದಲ್ಲಿ ನೇರವಾಗಿ ಸಂಬಂಧ ಹೊಂದಿದ್ದಾರೆ. ಅತ್ಯಾಚಾರ ಎಸಗಿದ ಆರೋಪಿಯ ತಾಯಿ ಕೂಡ ಆಗಿದ್ದಾರೆ. ಆರೋಪಿಗಳು ಪ್ರತಿಷ್ಠಿತ ರಾಜಕೀಯ ಕುಟುಂಬಕ್ಕೆ ಸಂಬಂಧಿಸಿದವರು. ಹೀಗಾಗಿ ಹೈಕೋರ್ಟ್ ನೀಡಿರುವ ನಿರಿಕ್ಷಣಾ ಜಾಮೀನು ರದ್ದು ಮಾಡಬೇಕು ಎಂದು ಎಸ್ಐಟಿ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ಜಾಮೀನನ್ನು ರದ್ದುಗೊಳಿಸಲಾಗದು ಎಂದು ಹೇಳಿದ್ದ ಸುಪ್ರೀಂಕೋರ್ಟ್, ರಾಜಕೀಯ ಕುಟುಂಬ ಎಂದು ಜಾಮೀನು ನಿರಾಕರಿಸಲು ಸಾಧ್ಯವಿಲ್ಲ. ಕೆಲ ರಾಜಕಾರಣಿಗಳು ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಹುದು. ಈ ಪ್ರಕರಣದಲ್ಲಿ ತನಿಖೆ ದಾರಿ ತಪ್ಪಿದೆಯಾ? ತಪ್ಪಿದ್ದರೆ ನಾವು ನಿಮ್ಮ ನೆರವಿಗೆ ಬರಬಹುದು. ಆದರೆ ಇಲ್ಲಿ ಯಾವುದೂ ಆ ರೀತಿ ಕಾಣುತ್ತಿಲ್ಲ ಎಂದಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



