AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಂ ಕೋರ್ಟ್​ನಲ್ಲಿ ಭವಾನಿ ರೇವಣ್ಣಗೆ ಬಿಗ್ ರಿಲೀಫ್: ಜಾಮೀನು ರದ್ದತಿಗೆ ನಿರಾಕರಣೆ

ಲೈಂಗಿಕ ದೌರ್ಜನ್ಯ ಸಂತ್ರಸ್ತೆಯನ್ನು ಅಪರಹರಿಸಿದ ಪ್ರಕರಣದಲ್ಲಿ ಜೆಡಿಎಸ್ ನಾಯಕ ಹೆಚ್​ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣಗೆ ಸುಪ್ರೀಂ ಕೋರ್ಟ್​ನಲ್ಲಿ ಬಿಗ್ ರಿಲೀಫ್ ದೊರೆತಿದೆ. ಭವಾನಿ ರೇವಣ್ಣಗೆ ನೀಡಿರುವ ಜಾಮೀನಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಸುಪ್ರೀಂ ಕೋರ್ಟ್​ನಲ್ಲಿ ಭವಾನಿ ರೇವಣ್ಣಗೆ ಬಿಗ್ ರಿಲೀಫ್: ಜಾಮೀನು ರದ್ದತಿಗೆ ನಿರಾಕರಣೆ
ಭವಾನಿ ರೇವಣ್ಣ
ಹರೀಶ್ ಜಿ.ಆರ್​.
| Edited By: |

Updated on:Oct 18, 2024 | 11:26 AM

Share

ನವದೆಹಲಿ, ಅಕ್ಟೋಬರ್ 18: ಅಪಹರಣ ಪ್ರಕರಣದಲ್ಲಿ ಜೆಡಿಎಸ್ ನಾಯಕ ಹೆಚ್​ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣಗೆ ಕರ್ನಾಟಕ ಹೈಕೋರ್ಟ್​ ನೀಡಿರುವ ಜಾಮೀನನ್ನು ರದ್ದುಗೊಳಿಸಲಾಗದು ಎಂದು ಸುಪ್ರೀಂ ಕೋರ್ಟ್​ ಶುಕ್ರವಾರ ಹೇಳಿದೆ. ಇದರೊಂದಿಗೆ, ಭವಾನಿ ರೇವಣ್ಣ ನಿರಾಳರಾಗುವಂತಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಪ್ರಕರಣದಲ್ಲಿ ಈಗಾಗಲೇ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದೆ. ರಾಜಕೀಯ ಕುಟುಂಬ ಎಂದು ಜಾಮೀನು ನಿರಾಕರಿಸಲು ಸಾಧ್ಯವಿಲ್ಲ. ಕೆಲ ರಾಜಕಾರಣಿಗಳು ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಹುದು. ಈ ಪ್ರಕರಣದಲ್ಲಿ ತನಿಖೆ ದಾರಿ ತಪ್ಪಿದೆಯಾ? ತಪ್ಪಿದ್ದರೆ ನಾವು ನಿಮ್ಮ ನೆರವಿಗೆ ಬರಬಹುದು. ಆದರೆ ಇಲ್ಲಿ ಯಾವುದೂ ಆ ರೀತಿ ಕಾಣುತ್ತಿಲ್ಲ ಎಂದಿತು.

ಎಸ್​ಐಟಿ ವಕೀಲರ ವಾದವೇನು?

ಮೈಸೂರು ಜಿಲ್ಲೆ ಕೆಆರ್ ನಗರ ಮಹಿಳೆ ಕಿಡ್ನ್ಯಾಪ್​ ಆರೋಪ ಸಂಬಂಧ ಭವಾನಿ ರೇವಣ್ಣಗೆ ಜಾಮೀನು ನೀಡಬಾರದು ಎಂದು ಎಸ್​ಐಟಿ ಪರ ವಕೀಲರು ವಾದ ಮಂಡಿಸಿದ್ದಾರೆ. ಆರೋಪಿ ಮಹಿಳೆ ಪ್ರಕರಣದಲ್ಲಿ ನೇರವಾಗಿ ಸಂಬಂಧ ಹೊಂದಿದ್ದಾರೆ. ಅತ್ಯಾಚಾರ ಎಸಗಿದ ಆರೋಪಿಯ ತಾಯಿ ಕೂಡ ಆಗಿದ್ದಾರೆ. ಆರೋಪಿಗಳು ಪ್ರತಿಷ್ಠಿತ ರಾಜಕೀಯ ಕುಟುಂಬಕ್ಕೆ ಸಂಬಂಧಿಸಿದವರು. ಹೀಗಾಗಿ ನಿರೀಕ್ಷಣಾ ಜಾಮೀನು ರದ್ದು ಮಾಡಬೇಕು. ಹೈಕೋರ್ಟ್ ನೀಡಿರುವ ನಿರಿಕ್ಷಣಾ ಜಾಮೀನು ರದ್ದು ಮಾಡಬೇಕು ಎಂದು ಸುಪ್ರೀಂ ಕೋರ್ಟ್​ನಲ್ಲಿ ಎಸ್​ಐಟಿ ಅಧಿಕಾರಿಗಳ ಪರ ವಕೀಲರು ವಾದ ಮಂಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಹೇಳಿದ್ದೇನು?

ಪ್ರಕರಣದ ಪ್ರಮುಖರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಆರೋಪಿ ಮಗ ಮತ್ತು ಪತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಜಾಮೀನು ರದ್ದು ಮಾಡಲು ಯಾವುದೇ ಸಕಾರಣ ಕಾಣುತ್ತಿಲ್ಲ. ಪ್ರತಿಷ್ಠಿತ ರಾಜಕೀಯ ಕುಟುಂಬ ಎಂದು ಜಾಮೀನು ರದ್ದು ಮಾಡಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಏನಿದು ಪ್ರಕರಣ?

ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋ ಏಪ್ರಿಲ್​​ನಲ್ಲಿ ಬಹಿರಂಗವಾಗಿತ್ತು. ಆ ವಿಡಿಯೋದಲ್ಲಿ ತನ್ನ ತಾಯಿಯ ಚಿತ್ರವೂ ಇದ್ದು, ಇದೀಗ ಅವರು ಕಣ್ಮರೆಯಾಗಿದ್ದಾರೆ ಎಂದು ಮೇ 2ರ ತಡರಾತ್ರಿ ಮೈಸೂರಿನ ಕೆಆರ್​​ ನಗರ ಠಾಣೆಯಲ್ಲಿ ಸಂತ್ರಸ್ತೆಯ ಪುತ್ರ ದೂರು ನೀಡಿದ್ದರು. ಹೆಚ್​ಡಿ ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಂಬಂಧಿ ಬಾಬು ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಎಸ್​ಐಟಿ ಅಧಿಕಾರಿಗಳು ಭವಾನಿ ರೇವಣ್ಣ ಅವರನ್ನು ಬಂಧಿಸಿದ್ದರು.

ಇದನ್ನೂ ಓದಿ: ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ಸುಪ್ರೀಂಕೋರ್ಟ್​ ನೋಟಿಸ್

ನಂತರ ಜಾಮೀನು ಕೋರಿ ಭವಾನಿ ರೇವಣ್ಣ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಅವರಿಗೆ ನಿರೀಕ್ಷಣಾ ಜಾಮೀನು ದೊರೆತಿತ್ತು. ಭವಾನಿ ರೇವಣ್ಣ ಅವರು ಮೈಸೂರು, ಹಾಸನ ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಏಕಸದಸ್ಯ ಪೀಠ ಆದೇಶ ಹೊರಡಿಸಿತ್ತು. ನಂತರ ಕರ್ನಾಟಕ ಹೈಕೋರ್ಟ್​ ನೀಡಿದ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಎಸ್​​ಐಟಿ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅದರಂತೆ, ಸುಪ್ರೀಂ ಕೋರ್ಟ್ ಭವಾನಿ ರೇವಣ್ಣಗೆ ನೋಟಿಸ್ ಜಾರಿ ಮಾಡಿತ್ತು. ಇದೀಗ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:18 am, Fri, 18 October 24