ಮಂಡ್ಯ: ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಜಿದ್ದಾಜಿದ್ದಿಗೆ ಬಿದ್ದಿದೆ. ಬೈ ಎಲೆಕ್ಷನ್ ಗೆಲ್ಲಲೇಬೇಕು ಎಂದು ಪಣತೊಟ್ಟಿವೆ ಅದಕ್ಕಾಗಿ ಎಲ್ಲ ಕಡೆಗಳಿಂದಲೂ ಬೆಂಬಲ ನಿರೀಕ್ಷಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಸ್ಟಾರ್ ಪ್ರಚಾರಕಿ ಆಗಿರುವ ಸಂಸದೆ ಸುಮಲತಾ ಅವರನ್ನ ತನ್ನತ್ತ ಸೆಳೆಯಲು ಎರಡೂ ಪಕ್ಷಗಳು ಹಾತೊರೆಯುತ್ತಿವೆ. ಸುಮಲತಾ ಪ್ರಚಾರ ನಿರೀಕ್ಷೆಯಲ್ಲಿ ಎರಡು ಪಕ್ಷದ ಅಭ್ಯರ್ಥಿಗಳು ಕಾದುಕುಳಿತಿದ್ದಾರೆ.
ಆದ್ರೆ ಸುಮಲತಾ ಬೆಂಬಲ ಯಾರಿಗೆ ಎಂಬುದು ಇನ್ನೂ ನಿಗೂಢವಾಗಿದೆ. ಅಷ್ಟಕ್ಕೂ ಸುಮಲತಾ ಯಾವ ಪಕ್ಷದ ಋಣ ತೀರಿಸುತ್ತಾರೆ? ಅಥವಾ ಸುಮಕ್ಕ ತಟಸ್ಥವಾಗಿ ಉಳಿತಾರಾ..? ಎಂಬುದು ಸದ್ಯಕ್ಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಏಕೆಂದ್ರೆ ನಾಮಪತ್ರ ಸಲ್ಲಿಕೆ ಪಕ್ರಿಯೆ ಮುಗಿದಿದ್ರೂ ಸಂಸದೆ ತಮ್ಮ ನಿರ್ಧಾರ ಏನು ಎಂಬುದನ್ನು ಬಹಿರಂಗಗೊಳಿಸಿಲ್ಲ.
ಅಖಾಡದಿಂದ ದೂರ ಉಳಿಯಲು ಸಹಕಾರವಾಗುತ್ತಾ ಅಧಿವೇಶನ?
ಈ ಮಧ್ಯೆ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಅಧಿವೇಶನದ ನೆಪದಲ್ಲಿ ಚುನಾವಣಾ ಪ್ರಚಾರದಿಂದ ದೂರ ಉಳಿಯುತ್ತಾರಾ ಸುಮಕ್ಕಾ? ತಟಸ್ಥವಾಗಿ ಉಳಿಯಲು ಅಧಿವೇಶನ ಭಾಗಿ ನೆಪ ಸುಮಲತಾಗೆ ಲಾಭ ಆಗುತ್ತಾ..? ಎಂಬುದು ಬೆಂಬಲದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ತಲೆಬಿಸಿ ತಂದಿದೆ.
ಎರಡೂ ಪಕ್ಷದ ಕಾರ್ಯಕರ್ತರ ಪ್ರೀತಿ ಉಳಿಸಿಕೊಳ್ಳುವ ಚಿಂತನೆಯಲ್ಲಿದ್ದಾರಾ ಸುಮಲತಾ..? ಎಂಬ ಪ್ರಶ್ನೆಯೂ ಎದ್ದಿದೆ. ಇನ್ನು ಕೆಲವು ದಿನಗಳ ಹಿಂದಷ್ಟೇ ಜನಾಭಿಪ್ರಾಯ ಕೇಳಿ ಯಾರಿಗೆ ಬೆಂಬಲ ಎಂಬುದನ್ನು ನಿರ್ಧಾರ ಮಾಡುವುದಾಗಿ ಸಂಸದೆ ಸುಮಲತಾ ತಿಳಿಸಿದ್ದರು. ಆದರೆ ರೆಬೆಲ್ ಸ್ಟಾರ್ ಪತ್ನಿ ಇದುವರೆಗೂ ಜನಾಭಿಪ್ರಾಯ ಕೇಳುವ ಶಾಸ್ತ್ರ ಮಾಡಿಲ್ಲ!
Published On - 10:22 am, Tue, 19 November 19