
ಬೆಂಗಳೂರು, ಜೂನ್ 27: ಕೆಆರ್‌ಎಸ್ ಡ್ಯಾಂ (KRS Dam) ಬಳಿ ಡಿಸ್ನಿಲ್ಯಾಂಡ್ ಮಾದರಿಯ ಮನರಂಜನಾ ಪಾರ್ಕ್ ಕಾಮಗಾರಿ ಮತ್ತು ಕಾವೇರಿ ಆರತಿಗೆ (Cauvery Arti) ನಿರ್ಮಾಣ ಕಾಮಗಾರಿ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ನಲ್ಲಿ (Karnataka High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿ.ಕಾಮೇಶ್ವರ ರಾವ್, ಸಿಎಂ.ಜೋಷಿ ಅವರಿದ್ದ ಪೀಠ ಕರ್ನಾಟಕ ಸರ್ಕಾರಕ್ಕೆ ಮತ್ತು ಕಾವೇರಿ ನೀರಾವರಿ ನಿಗಮಕ್ಕೆ ನೋಟಿಸ್ ನೀಡಿ ವಿವರಣೆ ಕೋರಿದೆ. ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ್ ನ್ಯಾಯಾಲಯಕ್ಕೆ ಹಾಜರಾದರು.
ಡ್ಯಾಮ್ ಬಳಿ 120 ಅಡಿಯ ಕಾವೇರಿ ವಿಗ್ರಹ ಸ್ಥಾಪಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ಅದರ ಕಾಮಗಾರಿಗೆ ಯಂತ್ರಗಳನ್ನು ಉಪಯೋಗಿಸಿರುವ ಫೋಟೊ ಸಲ್ಲಿಕೆ ಮಾಡಲಾಗಿದೆ.
ಸದ್ಯಕ್ಕೆ ಕಾವೇರಿ ಪ್ರತಿಮೆ ಮಾತ್ರ ಸ್ಥಾಪಿಸಲು ಟೆಂಡರ್ ನೀಡಲಾಗಿದೆ. ಕಾವೇರಿ ಪ್ರತಿಮೆ ಸ್ಥಾಪನೆಗೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆ. ಮನರಂಜನಾ ಪಾರ್ಕ್ ಟೆಂಡರ್ ಪೂರ್ಣಗೊಂಡಿಲ್ಲವೆಂದು ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ಕಾಮಗಾರಿಗೆ ಅಗೆಯುವುದರಿಂದ ಡ್ಯಾಂಗೆ ಹಾನಿಯಾಗುವುದಿಲ್ಲವೇ? ಜಲಾಶಯದ ಸುರಕ್ಷತೆ ಸಮಿತಿಯ ಅನುಮತಿ ಏಕೆ ಪಡೆದಿಲ್ಲ? ಮನರಂಜನಾ ಪಾರ್ಕ್ ಕಾಮಗಾರಿಗೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆಯೇ ? ಕಾವೇರಿ ಪ್ರತಿಮೆ ಸ್ಥಾಪಿಸುವಾಗ ತಜ್ಞರ ಸಲಹೆ ಪಾಲಿಸಲಾಗಿದೆಯೇ ಎಂದು ಸರ್ಕಾರವನ್ನು ಹಾಗೂ ಕಾವೇರಿ ನೀರಾವರಿ ನಿಗಮವನ್ನು ಹೈಕೋರ್ಟ್ ಪ್ರಶ್ನಿಸಿದೆ. ಅಲ್ಲದೆ, 2 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ.
ಈ ಬೆಳವಣಿಗೆಯೊಂದಿಗೆ, ಡಿಸಿಎಂ ಡಿಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಮನರಂಜನಾ ಪಾರ್ಕ್ ಹಾಗೂ ಕಾವೇರಿ ಆರತಿ ಯೋಜನೆಗಳಿಗೆ ತುಸು ಹಿನ್ನಡೆಯಾದಂತಾಗಿದೆ.
ಯೋಜನೆಗೆ ಆರಂಭದಲ್ಲೇ ರೈತರಿಂದ ವಿರೋಧ ವ್ಯಕ್ತವಾಗಿತ್ತು ಮತ್ತು ಈಗಲೂ ಮುಂದುವರಿದಿದೆ. ಅತ್ತ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಸಹ ವಿರೋಧ ವ್ಯಕ್ತಪಡಿಸಿದ್ದವು. ಆದರೆ, ಅಚ್ಚರಿಯೆಂಬಂತೆ ಮಂಡ್ಯ ಜಿಲ್ಲೆಯ ಹಿಂದೂ ಸಂಘಟನೆಗಳು ಇತ್ತೀಚೆಗೆ ಕಾವೇರಿ ಆರತಿ ವಿಚಾರದಲ್ಲಿ ಡಿಕೆ ಶಿವಕುಮಾರ್ಗೆ ಬೆಂಬಲ ಸೂಚಿಸಿವೆ.
‘ಕಾವೇರಿ ಆರತಿ’ಗೆ ರೈತರಿಂದ ವಿರೋಧ ವ್ಯಕ್ತವಾಗಿರುವ ಕಾರಣ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ವಿಧಾನಸೌಧದಲ್ಲಿ ರೈತ ಮುಖಂಡರ ಜತೆ ಮಹತ್ವದ ಸಭೆ ನಡೆಸಿ, ಅವರ ಮನವೊಲಿಸುವ ಪ್ರಯತ್ನ ಪಟ್ಟಿದ್ದರು. ಆ ಸಂದರ್ಭದಲ್ಲಿ, ಕಾವೇರಿ ಆರತಿ ವೇದಿಕೆಯ ಪ್ರಾಜೆಕ್ಟ್ ಪ್ಲಾನ್ ವೀಕ್ಷಿಸಿ, ಆ ಕುರಿತು ರೈತ ಮುಖಂಡರಿಗೂ ಮಾಹಿತಿ ನೀಡಲಾಗಿತ್ತು.
ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ನಲ್ಲೇ ಭರ್ತಿ!
ಇದೀಗ ಯೋಜನೆ ಬಗ್ಗೆ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕಯಾಗಿರುವುದು ಸರ್ಕಾರಕ್ಕೆ ಹೊಸ ತಲೆನೋವಾಗಿದೆ. ಈ ಬಗ್ಗೆ ಸರ್ಕಾರ ಹಾಗೂ ಕಾವೇರಿ ನೀರಾವರಿ ನಿಗಮ ಹೈಕೋರ್ಟ್ಗೆ ಯಾವ ರೀತಿ ಪ್ರತಿಕ್ರಿಯೆ ಸಲ್ಲಿಸಲಿವೆ? ಮುಂದೇನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.