ಎರಡನೇ ದಿನವೂ ಅದ್ದೂರಿಯಾಗಿ ಜರುಗಿದ ಬೆಂಗಳೂರಿನ ಐತಿಹಾಸಿಕ ಬಂಡಿದೇವರ ಉತ್ಸವ: ಡಿಕೆ ಶಿವಕುಮಾರ್ ಭಾಗಿ
ಬೆಂಗಳೂರು ಸಂಸ್ಥಾಪಕ ಕೆಂಪೇಗೌಡರ ಜಯಂತಿ ಪ್ರಯುಕ್ತ ಮೂರು ದಿನಗಳ ಕಾಲ ಐತಿಹಾಸಿಕ ‘ಬೆಂಗಳೂರು ಬಂಡಿದೇವರ ಉತ್ಸವʼ ಆಚರಿಸಲಾಯಿತು. ಎತ್ತಿನ ಬಂಡಿಗಳ ಮೆರವಣಿಗೆ, ಧಾರ್ಮಿಕ ವಿಧಿಗಳು ಹಾಗೂ ಜನಸಾಗರದೊಂದಿಗೆ ಉತ್ಸವ ಅದ್ದೂರಿಯಾಗಿ ನಡೆಯಿತು. ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರು, ಜೂನ್ 27: ಬೆಂಗಳೂರಿನ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರ (Kempe Gowda) ಜಯಂತಿ ಪ್ರಯುಕ್ತ ಐತಿಹಾಸಿಕ ‘ಬೆಂಗಳೂರು ಬಂಡಿದೇವರ ಉತ್ಸವʼ (Bandidevara utsava) ವನ್ನು ನಗರದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ಉತ್ಸವದ ಎರಡನೇ ದಿನವಾದ ಗುರುವಾರ ನಗರದ ಹೃದಯಭಾಗದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸಂಜೆ ಬಿಬಿಎಂಪಿ ಕಚೇರಿ ಆವರಣದಲ್ಲಿರುವ ಕೆಂಪೇಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಉತ್ಸವ ಆರಂಭಿಸಲಾಯಿತು. ಪುತ್ಥಳಿಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ನಂತರ ಮೆರವಣಿಗೆ ಕಾರ್ಯ ಆರಂಭಗೊಂಡಿತು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ರೈತಾಪಿ ವರ್ಗದವರನ್ನು ಪ್ರತಿನಿಧಿಸುವ ಬೆಂಗಳೂರಿನ ಸುತ್ತಮುತ್ತಲಿನಿಂದ ಸುಮಾರು 2೦ಕ್ಕೂ ಹೆಚ್ಚು ಅಲಂಕೃತವಾದ ಎತ್ತಿನಬಂಡಿಗಳು ಕಂಡುಬಂದವು. ಬಂಡಿಯಲ್ಲಿ ಕೆಂಪೇಗೌಡರ ಪೂರ್ವಿಕರಾದ ಕೆಂಪಣ್ಣಸ್ವಾಮಿ ಹಾಗೂ ಶ್ರೀ ವೀರಣ್ಣ ಸ್ವಾಮಿ ಉತ್ಸವ ಮೂರ್ತಿಗಳನ್ನಿಟ್ಟು ಪೂಜಿಸಿ, ನಂತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ಹಡ್ಸನ್ ಸರ್ಕಲ್, ಕಬ್ಬನ್ ಪಾರ್ಕ್ ಸೆಂಟ್ರಲ್ ಲೈಬ್ರರಿ, ಹೈಕೋರ್ಟ್ ಆವರಣ ಮತ್ತು ಗೋಪಾಲ್ ಗೌಡ ಸರ್ಕಲ್ ಮೂಲಕ ಸಾಗಿ, ವಿಧಾನಸೌಧದ ಬಳಿಯ ಕೆಂಪೇಗೌಡರ ಪ್ರತಿಮೆಯ ಬಳಿ ಮೆರವಣಿಗೆ ಸಾಗಿತು. ಸುಮಾರು ಎರಡು ಸಾವಿರ ಜನ ಈ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಬಂಡಿದೇವರ ಉತ್ಸವ ನಗರ ಭಾಗದಲ್ಲಿ ಆಚರಿಸುತ್ತಿರುವುದು ನಿಜಕ್ಕೂ ಸಂತಸದ ವಿಷಯ: ನಿರ್ಮಲಾನಂದನಾಥ ಸ್ವಾಮೀಜಿ
ವಿಧಾನಸೌಧದ ಆವರಣದ ಕೆಂಪೇಗೌಡರ ಪ್ರತಿಮೆಗೆ ನಮಸ್ಕರಿಸಿ ಬಳಿಕ ದಿವ್ಯಸಾನಿಧ್ಯವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಬಂಡಿದೇವರ ಉತ್ಸವವು ನಮ್ಮ ಬೇರುಗಳೊಂದಿಗೆ ನಮ್ಮನ್ನು ಸಂಪರ್ಕಿಸುವ ಆಚರಣೆ. ಮುಂಚೆ ಹಳ್ಳಿಗಳಲ್ಲಿ ಈ ಆಚರಣೆಯಿತ್ತು. ಈಗ ನಗರ ಭಾಗದಲ್ಲಿ ಈ ಆಚರಣೆ ಆರಂಭಗೊಂಡಿರುವುದು ನಿಜಕ್ಕೂ ಸಂತಸದ ವಿಷಯ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಜೃಂಭಣೆಯಿಂದ ಆಚರಿಸೋಣ ಎಂದರು.
ಕೆಂಪೇಗೌಡರ ಭವನಕ್ಕೆ 100 ಕೋಟಿ ರೂ ಮೀಸಲು: ಡಿಸಿಎಂ ಡಿ.ಕೆ ಶಿವಕುಮಾರ್
ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ರೈತ ಬಾಂಧವರೆಲ್ಲರೂ ಅತ್ಯಂತ ಸಂಭ್ರಮದಿಂದ ಬಂಡಿ ಉತ್ಸವವನ್ನು ಮಾಡಿದ್ದೀರಿ. ಈ ರೀತಿಯಾಗಿ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಪ್ರಯತ್ನವಾಗುತ್ತಿರುವುದು ನಿಜಕ್ಕೂ ಸಂತಸ. ನಾಳೆ ಸುಮ್ಮನಹಳ್ಳಿಯ 5 ಎಕರೆ ಜಾಗದಲ್ಲಿ ಕೆಂಪೇಗೌಡರ ಭವನಕ್ಕೆ ಶಂಕುಸ್ಥಾಪನೆಯಾಗಲಿದೆ. ನಮ್ಮ ಕೆಂಪೇಗೌಡರ ಭವನಕ್ಕೆ 100 ಕೋಟಿ ರೂ ಮೀಸಲಿಟ್ಟಿದ್ದೇವೆ. ಜೊತೆಗೆ ಅವರ ಹೆಸರಿನಲ್ಲಿ ಗ್ರಂಥಾಲಯಗಳನ್ನು ತೆರೆಯಲು ಯೋಜಿಸಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಅಮಾನವೀಯ ಘಟನೆ: ಸಾಲದ ಹಣಕ್ಕಾಗಿ ವ್ಯಕ್ತಿಯನ್ನ ಒತ್ತೆ ಇಟ್ಟುಕೊಂಡ ಸಾಲಗಾರ
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಮಹಾಲಕ್ಷ್ಮಿಪುರ ಶಾಸಕ ಗೋಪಾಲಯ್ಯ, ಹಿರಿಯ ಐಆರ್‌ಎಸ್ ಅಧಿಕಾರಿ ಹಾಗೂ ಉತ್ಸವ ಸಮಿತಿಯ ಗೌರವಾಧ್ಯಕ್ಷ ಜಯರಾಮ್ ರಾಯಪುರ, ಬೆಂಗಳೂರು ಬಂಡಿದೇವರ ಉತ್ಸವ ಸಮಿತಿಯ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ, ಕಾರ್ಯದರ್ಶಿ ಎಂ. ಅಮರೇಶ್, ಸಮಿತಿಯ ಉಪಾಧ್ಯಕ್ಷ ನಾಗರಾಜ್ (ನಿವೃತ್ತ ಎಸ್‌ಪಿ), ಹಿರಿಯ ಉಪಾಧ್ಯಕ್ಷ ಗೋವಿಂದೇಗೌಡರು, ಕೆಂಪೇಗೌಡ ಸಂಶೋಧನಾ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಜೆ. ನಾಗರಾಜ್, ಮುಖೇಶ್, ಮುನಿರಾಜು, ಎನ್.ನಾಗರಾಜು, ಮಧು ಹಾಗೂ ಕಾರ್ಯಕಾರಿ ಸಮಿತಿಯ ಡಾ.ಬಿ.ಎಸ್. ಪುಟ್ಟಸ್ವಾಮಿ, ದಿವ್ಯಾ ರಂಗೇನಹಳ್ಳಿ, ಜೆ.ನಾಗರಾಜ್, ಡಾ.ಸುನಿತಾ, ದಿವ್ಯಾ ಹರ್ಷ, ಡಾ.ಬಿ.ಪಾಂಡುಕುಮಾರ್, ಎನ್.ಆರ್. ಧನಂಜಯ, ಮ್ಯಾಗೇರಿ ನಾರಾಯಣಸ್ವಾಮಿ, ಶ್ರೀನಿವಾಸ್ ಜಿ.ಕಪ್ಪಣ್ಣ, ಪ್ರೊ.ಜಯಪ್ರಕಾಶಗೌಡ, ಎಸ್.ಎ.ಪುಟ್ಟರಾಜು, ಎಂ.ಎ.ಮದನ್ ಕುಮಾರ್, ಗೋವಿಂದೇಗೌಡ, ಹಳ್ಳಿಕಾರ್ ದೊಡ್ಡಗೌಡ, ಉಮಾ ಬಸವರಾಜ್, ಭಾರತಿ ಜಯರಾಮ ಹಾಗೂ ಫಸ್ಟ್ ಸರ್ಕಲ್ ಸಂಘಟನೆಯವರು ಉಪಸ್ಥಿತರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




