ವಿಜಯಪುರದಲ್ಲಿ ಅಮಾನವೀಯ ಘಟನೆ: ಸಾಲದ ಹಣಕ್ಕಾಗಿ ವ್ಯಕ್ತಿಯನ್ನ ಒತ್ತೆ ಇಟ್ಟುಕೊಂಡ ಸಾಲಗಾರ
ವಿಜಯಪುರ ಜಿಲ್ಲೆಯಲ್ಲಿ ಅಮಾನವೀಯ ಘಟನೆ ಒಂದು ನಡೆದಿದೆ. ಓರ್ವ ವ್ಯಕ್ತಿಯನ್ನು ಸಾಲದ ಹಣಕ್ಕಾಗಿ 27 ದಿನಗಳಿಂದ ಒತ್ತೆಯಾಳಾಗಿ ಇಟ್ಟುಕೊಂಡಿರುವಂತಹ ಗಂಭೀರ ಆರೋಪ ಒಂದು ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಸದ್ಯ ವ್ಯಕ್ತಿಯನ್ನು ಬಿಡಿಸಿಲು ಕುಟುಂಬಸ್ಥರು ಪರದಾಡುತ್ತಿದ್ದಾರೆ.

ವಿಜಯಪುರ, ಜೂನ್ 27: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸಾಲದ (Debt) ಹಣ (money) ವಸೂಲಿ ಮಾಡುವ ನೆಪದಲ್ಲಿ ವ್ಯಕ್ತಿಯನ್ನು ಒತ್ತೆಯಾಗಿಟ್ಟುಕೊಂಡಿರೋ ಗಂಭೀರ ಆರೋಪ ಕೇಳಿ ಬಂದಿದೆ. ಸಾಲ ಪಡೆದ ಹಣ ನೀಡದೇ ಇದ್ದ ಕಾರಣಕ್ಕೆ ಕಳೆದ 27 ದಿನಗಳಿಂದ ದೇವರಹಿಪ್ಪರಗಿ ತಾಲೂಕಿನ ಪಡಗಾನೂರು ಗ್ರಾಮದ ಉದಯಕುಮಾರ ಬಾವಿಮನಿ ಎಂಬುವವರನ್ನು ಬಸವನಬಾಗೇವಾಡಿ ಪಟ್ಟಣದ ನಿವಾಸಿ ಪ್ರಭಾಕರ ಢವಳಗಿ ಎಂಬುವವರು ಕೂಡಿಟ್ಟುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಇತ್ತ ಉದಯಕುಮಾರನನ್ನು ಬಿಡಿಸಲು ಕುಟುಂಬಸ್ಥರು ಪರದಾಡುತ್ತಿದ್ದಾರೆ.
ಉದಯಕುಮಾರ ಬೆಂಗಳೂರಿನಲ್ಲಿ ಖಾಸಗಿ ಶಾಲಾ ಶಿಕ್ಷಕರಾಗಿದ್ದಾರೆ. ಸಾಲ ನೀಡಿರುವ ಪ್ರಭಾಕರ ಢವಳಗಿ ಕೂಡ ಶಿಕ್ಷಕರಾಗಿದ್ದು, ನಿವೃತ್ತರಾಗಿದ್ದಾರೆ. 31.50 ಲಕ್ಷ ರೂ ಹಣ ಸಾಲದ ಹಣ ನೀಡಬೇಕೆಂದು ಉದಯಕುಮಾರ ಮನೆಯವರಿಗೆ ಪ್ರಭಾಕರ ಹೇಳುತ್ತಿದ್ದಾರೆ.
ಇದನ್ನೂ ಓದಿ: KRS Dam Full: ಕೆಆರ್ಎಸ್ ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ನಲ್ಲೇ ಭರ್ತಿ!
ಉದಯಕುಮಾರ ಗೋವಾಕ್ಕೆ ಹೋಗಿದ್ದಾಗ ಅಲ್ಲಿಂದಲೇ ಅವರನ್ನು ಪ್ರಭಾಕರ ಢವಳಗಿ ಕರೆದುಕೊಂಡು ಹೋಗಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಪ್ರಭಾಕರ ಬಳಿ ಉದಯಕುಮಾರ ಏಕೆ ಹಾಗೂ ಎಷ್ಟು ಸಾಲ ಮಾಡಿದ್ದಾರೆಂದು ಗೊತ್ತಿಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ಕಡು ಬಡತನದ ಕುಟುಂಬದಲ್ಲಿ ಉದಯಕುಮಾರ ಹಾಗೂ ನಾಲ್ವರು ಸಹೋದರು, ವೃದ್ದ ತಾಯಿ ಇದ್ದಾರೆ. ಓರ್ವ ಸಹೋದರ ಶಿವಪ್ಪ ಮಹಾರಾಷ್ಟ್ರದ ಕೊಲ್ಹಾಪುರ ನಗರದಲ್ಲಿ ಮರಳು ಅನ್ ಲೋಡ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಮತ್ತೋರ್ವ ಸಹೋದರ ಆನಂದ ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಇನ್ನೋರ್ವ ಸಹೋದರ ಯಶವಂತ ಪಡಗಾನೂರು ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಉದಯಕುಮಾರ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಉದಯಕುಮಾರ ಪ್ರಭಾಕರ ಬಳಿ ಸಾಲ ಮಾಡಿದ್ದಾರೆ ಆದರೆ ಯಾಕೆ, ಎಷ್ಟು ಸಾಲ ಮಾಡಿದ್ಧಾರೆಂಬುದು ಗೊತ್ತಿಲ್ಲಾ ಎಂಬುದು ಕುಟುಂಬದವರ ಮಾತಾಗಿದೆ. ಉದಯಕುಮಾರನನ್ನು ಬಿಡಿಸಿಕೊಂಡು ಬರಲು ಗ್ರಾಮದ ಹಿರಿಯನ್ನು ಕರೆದುಕೊಂಡು ಪ್ರಭಾಕರ ಬಳಿ ಹೋಗಿ ಮನವಿ ಮಾಡಿಕೊಂಡರೂ ಸಾಲದ ಹಣ ನೀಡಿ ಆತನನ್ನು ಕರೆದುಕೊಂಡು ಹೋಗಿ, ಅಲ್ಲಿವರೆಗೂ ಆತನನ್ನು ಬಿಡಲ್ಲ ಎಂದು ಖಡಕ್ ಆಗಿ ಹೇಳಿ ಕಳುಹಿಸಿದ್ದಾರಂತೆ.
ಉದಯಕುಮಾರ ಪತ್ನಿ ರೇಶ್ಮಾ ಹೇಳಿದ್ದಿಷ್ಟು
ಈ ಬಗ್ಗೆ ಉದಯಕುಮಾರ ಅವರ ಪತ್ನಿ ರೇಶ್ಮಾ ಬಾವಿಮನಿ ಪ್ರತಿಕ್ರಿಯಿಸಿದ್ದು, ಕಳೆದ 27 ದಿನಗಳಿಂದ ಪ್ರಭಾಕರ ಢವಳಗಿ ನನ್ನ ಪತಿ ಉದಯಕುಮಾರನನ್ನು ಒತ್ತೆಯಳಾಗಿ ಇಟ್ಟುಕೊಂಡಿದ್ದಾರೆ. ಬೇಗ ಹಣ ಬೇಕೆಂದು ಕರೆ ಮಾಡುತ್ತಿದ್ದಾರೆ. ಪ್ರಭಾಕರ ಪತ್ನಿ ಸಹ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಇನ್ನು ಎಷ್ಟು ದಿನ ನಿನ್ನ ಗಂಡನನ್ನು ಇಟ್ಟುಕೊಳ್ಳಬೇಕು ನಾವು, ಈಗಾಗಲೇ 25 ದಿನಗಳಾಗಿವೆ. ನಾಚಿಕೆ ಆಗಲ್ವಾ ನಿನಗೆ ಎಂದಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ವಸತಿ ಇಲಾಖೆ ಅಧಿಕಾರಿಗಳ ವಿರುದ್ಧ ಮತ್ತೊಂದು ದೂರು: ತಮಗೆ ಬೇಕಾದವರಿಗೆ ಪ್ಯಾಕೇಜ್ ಟೆಂಡರ್ ಆರೋಪ
ಬೇಗನೇ ಹಣ ನೀಡಿ ಇಲ್ಲವಾದರೆ ಉದಯಕುಮಾರನ್ನು ಬೇರೆಡೆ ಶಿಫ್ಟ್ ಮಾಡುತ್ತೇವೆಂದು ಬೆದರಿಕೆ ಹಾಕಿದ್ದು, ಅಜ್ಞಾತ ಸ್ಥಳದಲ್ಲಿ ಪತಿ ಉದಯಕುಮಾರನನ್ನು ಒತ್ತೆಯಾಗಿ ಇಟ್ಟಿದ್ದಾರೆ. ಭಯದಿಂದ ಪೊಲೀಸರಿಗೆ ಈವರೆಗೂ ದೂರು ನೀಡಿಲ್ಲ ಎಂದು ರೇಶ್ಮಾ ತಿಳಿಸಿದ್ದಾರೆ. ಇನ್ನು ಉದಯಕುಮಾರ ಮಾಡಿಕೊಂಡಿರುವ ಸಾಲದ ಬಗ್ಗೆ ಕುಟುಂಬಸ್ಥರಿಗೆ ಗೊತ್ತಿಲ್ಲ. ಉದಯಕುಮಾರನನ್ನು ಬಿಡಿಸಲು ಪಿತ್ರಾರ್ಜಿತ ಮೂರು ಎಕರೆ ಜಮೀನು ಮಾರಾಟ ಮಾಡಿ ಬಂದ ಹಣದಲ್ಲಿ ಸಾಲ ತೀರಿಸಲು ಪ್ರಯತ್ನಿಸುತ್ತಿದ್ದಾರೆ.
ಸದ್ಯ ಈ ವಿಚಾರವನ್ನು ಎಸ್ಪಿ ಲಕ್ಷ್ಮಣ್ ನಿಂಬರಗಿ ಅವರ ಗಮನಕ್ಕೆ ತರಲಾಗಿದೆ. ಮಾಹಿತಿ ಪಡೆದುಕೊಂಡಿರುವ ಎಸ್ಪಿ, ಕುಟುಂದಸ್ಥರು ದೂರು ನೀಡಲಿ. ಜೊತೆಗೆ ಸಂಬಂಧಪಟ್ಟ ಪೊಲೀಸ್ ಆಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಕ್ರಮತೆಗೆದುಕೊಳ್ಳುವಂತೆ ಸೂಚನೆ ನೀಡುವುದಾಗಿ ಹೇಳಿದ್ಧಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:44 am, Fri, 27 June 25







