ಮೈಸೂರು, ಸೆಪ್ಟೆಂಬರ್ 29: ಮಾನ, ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ನಾನು 50 ವರ್ಷ ಆಯಿತು ದೇವಸ್ಥಾನಕ್ಕೆ ಹೋಗಿ. ದೇವಸ್ಥಾಕ್ಕೆ ಹೋದರೆ ಏನು ಆಗಲ್ಲ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ (KS Bhagawan) ಹೇಳಿದ್ದಾರೆ. ಆ ಮೂಲಕ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ. ನಗರದಲ್ಲಿ ಮಹಿಷ ದಸರಾದಲ್ಲಿ ಮಾತನಾಡಿದ ಅವರು, ಬುದ್ಧರನ್ನು ಹೊಗಳುವ ಭರದಲ್ಲಿ ಹಿಂದೂ ಧರ್ಮದ ಬಗ್ಗೆ ಹೀನವಾಗಿ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಜ್ಞಾನದ ಹಸಿವು ಇಲ್ಲದ ಕಾರಣ ಹಲವರು ಗುಲಾಮರಾಗಿದ್ದಾರೆ. ಹಿಂದೂ ಧರ್ಮ ಅಂದರೆ ಅದು ಹಿಂದೂಗಳ ಧರ್ಮ ಅಲ್ಲ. ಹಿಂದೂ ಧರ್ಮ ಅಂದರೆ ಅದು ಬ್ರಾಹ್ಮಣರ ಧರ್ಮ. ಹಿಂದೂ ಎಂದರೆ ಹಿಂದಕ್ಕೆ ಹೋಗುವ ಜನ. ಹಿಂದೂಗಳು ಮುಂದಕ್ಕೆ ಬಾರದ ಜನ ಹಾಗೂ ಬೇರೆಯವರನ್ನು ಮುಂದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಿಷ ಮಂಡಲೋತ್ಸವ ಆಚರಣೆ: ಇಂದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ
ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರನ್ನು ಬ್ರಾಹ್ಮಣರು ಎನ್ನಲ್ಲಾ, ಅವರನ್ನು ಶೂದ್ರರು ಅಂತಾರೆ. ದೇವಸ್ಥಾನ ಕಟ್ಟುವುದು ಶೂದ್ರರು. ದೇವಸ್ಥಾನದ ಒಳಗೆ ಇರುವವರ ಬ್ರಾಹ್ಮಣರು. ದೇವಸ್ಥಾನ ಕಟ್ಟಿದ ಶೂದ್ರರನ್ನೇ ಬಿಟ್ಟುಕೊಳ್ಳಲ್ಲ. ನಾವು ಶೂದ್ರರಲ್ಲಾ ಎಂದು ಹೇಳಬೇಕು ಎಂದಿದ್ದಾರೆ.
ತಟ್ಟೆಗೆ ದುಡ್ಡು ಹಾಕ್ತೀರಾ, ಅರ್ಧ ಕಾಯಿ ಇಟ್ಟುಕೊಂಡು ಅರ್ಧ ಕೊಡುತ್ತಾರೆ ಅಷ್ಟೇ. ದೇವಸ್ಥಾನಕ್ಕೆ ಹೋದರೆ ಕಳೆದುಕೊಳ್ಳುತ್ತೇವೆ. ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು. ಮನುಸ್ಮೃತಿಯಲ್ಲಿ ಶೂದ್ರ ಅಂದರೆ ಸೂಳೆಗೆ ಹುಟ್ಟಿದವನು ಅಂತಾ ಇದೆ. ನಾವು ಶೂದ್ರರು ಎಂದು ಒಪ್ಪಿಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ಕೈ ಬಿಟ್ಟ ಬಿಜೆಪಿ: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಹಿಂದೂ ಧರ್ಮ ನಮ್ಮದಲ್ಲ. ನಮಗೆ ಹಿಂದೂ ಧರ್ಮ ಬೇಕಿಲ್ಲ. ಎಲ್ಲರೂ ಬುದ್ಧ ಗುರುಗಳನ್ನು ನಂಬಿ. ನಾನು ಹೇಳಿದ್ದು ನಂಬಿ ಅಂತಾ ಬುದ್ಧ ಹೇಳಲ್ಲ. ನಾನು ಹೇಳಿದ್ದು ಕೇಳಬೇಕು ಇಲ್ಲದಿದ್ದರೆ ಸ್ವರ್ಗ ಸಿಗಲ್ಲ ಅಂತ ಏಸು ಹೇಳುತ್ತಾರೆ. ನನ್ನ ಮಾತು ಕೇಳದಿದ್ದರೆ ಮೋಕ್ಷ ಸಿಗಲ್ಲ ಅಂತ ಪ್ರವಾದಿ ಹೇಳುತ್ತಾನೆ. ನಾನು ಹೇಳಿದ್ದು ಕೇಳದಿದ್ದರೆ ನರಕ್ಕೆ ಹೋಗ್ತೀರಾ ಅಂತಾ ಕೃಷ್ಣ ಹೇಳುತ್ತಾನೆ. ಗುಲಾಮ, ಸೂಳೆಮಗ ಎಂದು ಹೇಳುವ ಹಿಂದೂ ಧರ್ಮದಲ್ಲಿ ಇರಬಾರದು. ನಾವು ಬುದ್ಧ ಧರ್ಮಕ್ಕೆ ಹೋಗಬೇಕು. ಹಿಂದೂ ಧರ್ಮಕ್ಕೆ ಎಡಗಾಲು ಎಕ್ಕಡ ತಗೊಂಡು ಹೊಡೆಯಬೇಕು. ಶೂದ್ರರು ಎಂಬ ಗುಲಾಮರನ್ನು ಎಚ್ಚರಿಸಬೇಕು. ಯಾರು ಹೀನನಾಗಿದ್ದಾನೆ ಅವನು ಹಿಂದೂ. ಹಿಂದೂ ಎಂದರೆ ಹೀನಾ ಎಂದು ಅರ್ಥ. ಯಾರು ಹಿಂದೂ ಆಗಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಾಜಿ ಮೇಯರ್ ಪುರುಷೋತ್ತಮ್ ಪ್ರತಿಕ್ರಿಯಿಸಿದ್ದು, ಬೆಟ್ಟಕ್ಕೆ ಹೋಗಿ ಮಹಿಷನಿಗೆ ಪುಷ್ಪಾರ್ಚನೆ ಮಾಡಲು ಐದು ಜನರಿಗೆ ಡಿಸಿಪಿ ಅವಕಾಶ ಮಾಡಿಕೊಟ್ಟಿದ್ದಾರೆ. ನಾವು ಈಗ ಐದು ಜನ ಹೋಗಿ ಪುಷ್ಪಾರ್ಚನೆ ಸಲ್ಲಿಸಲಿದ್ದೇವೆ. ಪೊಲೀಸರು ನಮ್ಮ ಜೊತೆ ಬರುತ್ತಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಹೋಗಿ ಪುಷ್ಪಾರ್ಚನೆ ಮಾಡುತ್ತೇವೆ. ನಾವು ಯಾರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸ ಮಾಡಿಲ್ಲ. ಇವತ್ತು ಹತ್ತು ಜನ ಭಾಷಣ ಮಾಡಿದರು ಯಾರು ಯಾರ ಭಾವನೆಗೂ ಧಕ್ಕೆ ತಂದಿಲ್ಲ. ಕೆಲವರು ವಿರೋಧಿಸುತ್ತಿರುವುದು ರಾಜಕೀಯ ಪ್ರೇರಿತ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.