AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಡರ್ ಕಂಟ್ರೋಲ್ ಮೂಲಕ ಕ್ರಮ: ಎಡಿಜಿಪಿ ಚಂದ್ರಶೇಖರ್​ಗೆ ಜೋಶಿ ಎಚ್ಚರಿಕೆ

ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ "ಹಂದಿ" ಪದ ಬಳಸಿ ಅವಹೇಳನ ಮಾಡಿದ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಹ್ಲಾದ್​ ಜೋಶಿ ಎಚ್ಚರಿಸಿದ್ದಾರೆ.

ಕೇಡರ್ ಕಂಟ್ರೋಲ್ ಮೂಲಕ ಕ್ರಮ: ಎಡಿಜಿಪಿ ಚಂದ್ರಶೇಖರ್​ಗೆ ಜೋಶಿ ಎಚ್ಚರಿಕೆ
ಎಡಿಜಿಪಿ ಚಂದ್ರಶೇಖರ್​ಗೆ ಜೋಶಿ ಎಚ್ಚರಿಕೆ
ಕಿರಣ್ ಹನುಮಂತ್​ ಮಾದಾರ್
|

Updated on: Sep 29, 2024 | 3:49 PM

Share

ಹುಬ್ಬಳ್ಳಿ, ಸೆ.29: ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ “ಹಂದಿ” ಪದ ಬಳಸಿ ಅವಹೇಳನ ಮಾಡಿದ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಹ್ಲಾದ್​ ಜೋಶಿ(pralhad joshi)ಎಚ್ಚರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಈ ಲೋಕಾಯುಕ್ತ ಎಡಿಜಿಪಿಗೆ ಏನಾದರೂ ಸರ್ವೀಸ್ ಕಂಡಕ್ಟ್ ರೂಲ್ ಬಗ್ಗೆ ಜ್ಞಾನವಿದ್ದರೆ ತಕ್ಷಣ ಕ್ಷಮಾಪಣೆ ಕೇಳಲಿ ಎಂದು ಸೂಚಿಸಿದರು.

ಜೊತೆಗೆ ಒಬ್ಬ ಜನಪ್ರತಿನಿಧಿ, ಅದರಲ್ಲೂ ಕೇಂದ್ರ ಸಚಿವರ ಬಗ್ಗೆ ಹೀಗೆ ಅಸಭ್ಯ ಭಾಷೆಯಲ್ಲಿ, ಕೆಟ್ಟ ಪದ ಬಳಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕೇಡರ್ ಕಂಟ್ರೋಲ್ ಇದನ್ನು ಗಂಭೀರವಾಗಿ ಪರಿಗಣಿಸಲಿದೆ. ಕುಮಾರಸ್ವಾಮಿ ಅವರು ಯಾವತ್ತೂ ಯಾರ ಬಗ್ಗೆಯೂ ಹೀಗೆ ಅಸಭ್ಯ ಭಾಷೆ ಬಳಸಿದವರಲ್ಲ. ಈ ಅಧಿಕಾರಿ ಬಗ್ಗೆಯೂ ಹಾಗೆಲ್ಲ ಏಕವಚನದಲ್ಲಿ ಮಾತನಾಡಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಕುಮಾರಸ್ವಾಮಿಗೆ ಹಂದಿ ಎಂದ ಐಪಿಎಸ್ ಅಧಿಕಾರಿಯ ಮತ್ತಷ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜೆಡಿಎಸ್

ಎಡಿಜಿಪಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ

ಕುಮಾರಸ್ವಾಮಿ ಅವರ ಬಗ್ಗೆ ಕೆಟ್ಟ ಪದದಲ್ಲಿ ಸಂಬೋಧನೆ ಮಾಡಿರುವುದು ಅಧಿಕಾರಿಯ ಅಹಂಕಾರದ ಪರಮಾವಧಿಯಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಜೋಶಿ ಎಚ್ಚರಿಸಿದರು. ಸರ್ಕಾರದ ಆದೇಶವಿದ್ದರೆ ತನಿಖೆ ನಡೆಸಲಿ. ಎಚ್ಡಿಕೆ ಆರೋಪ ಮಾಡಿದ್ದರೆ ಗೌರವಯುತ ಭಾಷೆಯಲ್ಲಿ, ಸಭ್ಯ ಪದಗಳಲ್ಲಿ ಸ್ಪಷ್ಟನೆ ಕೊಡಲಿ. ಅದು ಬಿಟ್ಟು ಈ ರೀತಿ ಕೆಟ್ಟದಾಗಿ ಸಂಬೋಧಿಸುವುದು ಯಾವುದೇ ಅಧಿಕಾರಿಗಳಿಗೂ ಶೋಭೆ ತರುವುದಿಲ್ಲ ಎಂದು ಸಚಿವ ಜೋಶಿ ಹೇಳಿದರು.

ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ

ಒಬ್ಬ ಜನಪ್ರತಿನಿಧಿ ಬಗ್ಗೆ ಲೋಕಾಯುಕ್ತ ಎಡಿಜಿಪಿ ಕೆಟ್ಟ ಪದ ಬಳಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಇದು ಕಾಂಗ್ರೆಸ್​ಗೆ ಮುಳುವಾಗಲಿದೆ. ಕಾಂಗ್ರೆಸ್ ಎಂಥೆಂಥ ಅಧಿಕಾರಿಗಳನ್ನು ಬೆಳೆಸುತ್ತಿದೆಯಲ್ಲ! ಎಂದು ಕಿಡಿ ಕಾರಿದರು.

ಈ ಸರ್ಕಾರವೇ ಶಾಶ್ವತವಲ್ಲಎಚ್ಚರ

ರಾಜ್ಯದಲ್ಲಿ ಈ ಸರ್ಕಾರವೇ ಶಾಶ್ವತವಾಗಿ ಇರುವುದಿಲ್ಲ. ಸ್ವಲ್ಪ ಎಚ್ಚರ ವಹಿಸಿ ಮಾತನಾಡಿ, ಕೆಲಸ ಮಾಡಿ ಎಂದು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್​ಗೆ ಕೇಂದ್ರ ಸಚಿವ ಜೋಶಿ ಚಾಟಿ ಬೀಸಿದರು.

ಇದನ್ನೂ ಓದಿ:ಹೆಚ್​ಡಿ ಕುಮಾರಸ್ವಾಮಿ ನನ್ನ ಮೇಲೆ ಸುಳ್ಳು ಆರೋಪದ ಜೊತೆಗೆ ಬೆದರಿಕೆ ಹಾಕಿದ್ದಾರೆ: ಎಡಿಜಿಪಿ ಚಂದ್ರಶೇಖರ್

ಇನ್ಸ್ಪೆಕ್ಟರ್​ಗೆ 20 ಕೋಟಿ ಡಿಮ್ಯಾಂಡ್ ಮಾಡಿದ್ರು: ADGP ಚಂದ್ರಶೇಖರ್ ವಿರುದ್ಧ ಎಚ್​ಡಿಕೆ ಆರೋಪ

ಇನ್ನು ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ,  ‘ADGP ಚಂದ್ರಶೇಖರ್ ಒಬ್ಬ ಬ್ಲ್ಯಾಕ್ ಮೇಲರ್, ಕ್ರಿಮಿನಲ್ ಎಂದು ಗುಡುಗಿದರು. ಆತ ತನ್ನ ಸಹೋದ್ಯೋಗಿಗಳಿಗೆ ಬರೆದಿರುವ ಪತ್ರವನ್ನು ಚೆನ್ನಾಗಿ ತಯಾರು ಮಾಡಿದ್ದಾರೆ. ಆ ಪತ್ರವನ್ನು ಯಾರು, ಎಲ್ಲಿ ತಯಾರು ಮಾಡಿಕೊಟ್ಟರು ಎನ್ನುವುದು ನನಗೂ ಚೆನ್ನಾಗಿ ಗೊತ್ತಿದೆ. ಉತ್ತರ ಕೊಡುವ ಜಾಗದಲ್ಲಿ, ಸಂದರ್ಭದಲ್ಲಿ ಇದಕ್ಕೆ ಉತ್ತರ ಕೊಡುತ್ತೇನೆ ಎಂದು ಅವರು ಹೇಳಿದರು.

ಆತ ಹೇಳಿರುವಂತೆ ನಾನು ಪ್ರಕರಣದಲ್ಲಿ ಆರೋಪಿ ಇರಬಹುದು. ಆದರೆ, ಆತ ಅಧಿಕಾರಿ ಸೋಗಿನಲ್ಲಿರುವ ಕ್ರಿಮಿನಲ್. ಆತನ ವಿರುದ್ಧ ಸರಣಿ ಅಪರಾಧ ಕೃತ್ಯಗಳನ್ನು ಎಸಗಿರುವ ಆರೋಪಗಳಿವೆ ಎಂದು ಸಚಿವರು ಕಿಡಿಕಾರಿದರು. ಲೋಕಾಯುಕ್ತರಿಗೆ ರಾಜ್ಯಪಾಲರು ಬರೆದ ಪತ್ರವು ಸರಕಾರಿ ಪ್ರಾಯೋಜಿತ ಒಂದು ನಿರ್ದಿಷ್ಟ ಸುದ್ದಿ ವಾಹಿನಿಗೆ ಸೋರಿಕೆ ಆಗಿತ್ತು. ಅದನ್ನು ಸೋರಿಕೆ ಮಾಡಿದ್ದು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ, ಅದು ರಾಜಭವನದಿಂದಲೇ ಸೋರಿಕೆ ಆಗಿರಬೇಕೆಂದು ಕಥೆ ಕಟ್ಟಿ, ರಾಜಭವನ ಸಿಬ್ಬಂದಿಯನ್ನೇ ತನಿಖೆ ಮಾಡಬೇಕು, ಅನುಮತಿ ಕೊಡಿ ಎಂದು ಅಧಿಕಾರಿ ಚಂದ್ರಶೇಖರ್ ತನ್ನ ಉನ್ನತ ಅಧಿಕಾರಿಗೆ ಪತ್ರ ಬರೆದಿದ್ದರು. ಹೀಗಾಗಿ ಆ ಅಧಿಕಾರಿಯ ದರ್ಪ ಹಾಗೂ ಆತನ ಹಿನ್ನೆಲೆಯ ಬಗ್ಗೆ ನಾನು ದಾಖಲೆಗಳ ಸಮೇತ ಮಾತನಾಡಿದ್ದೇನೆ ಎಂದು ಹೇಳಿದರು.

ನನ್ನ ಪ್ರಶ್ನೆಗಳಿಗೆ ಅಧಿಕಾರಿ ಉತ್ತರಿಸಲಿ

ನಾನು ಕೇಳಿರುವ ಪ್ರಶ್ನೆಗಳಿಗೆ ಆತ ಉತ್ತರ ನೀಡಿಲ್ಲ. ಬದಲಿಗೆ ಕ್ರಿಮಿನಲ್ ಮನಃಸ್ಥಿತಿಯ ಕೊಳಕು ಭಾಷೆಯನ್ನು ಬಳಸಿ, ಒಬ್ಬ ಕೇಂದ್ರ ಸಚಿವರ ಬಗ್ಗೆ ಕೆಟ್ಟದ್ದಾಗಿ ಪತ್ರದಲ್ಲಿ ಪದ ಬಳಕೆ ಮಾಡಿದ್ದಾರೆ. ಇದಕ್ಕೆ ಏನು ಮಾಡಬೇಕು, ಎಲ್ಲಿ ಉತ್ತರ ಕೊಡಬೇಕು ಎನ್ನುವುದು ನನಗೆ ಗೊತ್ತಿದೆ. ನಾನು ದಾಖಲೆ, ವಿಷಯ ಇಲ್ಲದೆ ಮಾತನಾಡುವುದಿಲ್ಲ. ಅಧಿಕಾರಿ ಬರೆದಿರುವ ಪತ್ರವನ್ನು ಚೆನ್ನಾಗಿ ಸಿದ್ಧ ಮಾಡಿಕೊಟ್ಟಿದ್ದಾರೆ. ನಾನು ಶನಿವಾರ ಬೆಳಗ್ಗೆ ಮಾಧ್ಯಮಗೋಷ್ಠಿ ಮಾಡಿದ ಮೇಲೆ, ಸಂಜೆ ಆ ಅಧಿಕಾರಿ ಎಲ್ಲಿ ಹೋಗಿದ್ದ ಎನ್ನುವುದು ಗೊತ್ತಿದೆ. ಅವರ ಪತ್ರವನ್ನು ಅಲ್ಲಿ ಯಾವ ಕಾನೂನು ಪಂಡಿತರು ರೆಡಿ ಮಾಡಿಕೊಟ್ಟರು, ಅವರೊಂದಿಗೆ ಇನ್ನೊಬ್ಬರು ಯಾರಿದ್ದರು ಎನ್ನುವುದು ನನಗೆ ಗೊತ್ತಿದೆ ಎಂದರು.

ನಾನು ದಾಖಲೆ ಇಟ್ಕೊಂಡೇ ನಿನ್ನೆ ಮಾತಾಡಿದ್ದೇನೆ. ಈತ ಆಂಧ್ರ ಪ್ರದೇಶ ಮೂಲದವನು, ಹಿಮಾಚಲ ಪ್ರದೇಶ ಕೇಡರ್ ಅಧಿಕಾರಿ 25 ವರ್ಷಗಳಿಂದ ಇಲ್ಲಿದ್ದಾರೆ. ಯಾರು ಯಾರನ್ನು ಹಿಡಿದು ಇಲ್ಲಿಗೆ ಬಂದಿದ್ದೀರಿ? ಆತ ಬಳಕೆ ಮಾಡಿರುವ ಭಾಷೆ ಆತನ ಸಂಸ್ಕೃತಿಯನ್ನು ತೋರಿಸುತ್ತದೆ. ಯಾರು ಯಾರ ಜತೆ ಈತನ ಕ್ರಿಮಿನಲ್ ನಂಟಿದೆ ಎನ್ನುವುದನ್ನು ಶನಿವಾರವೇ ದಾಖಲೆ ಸಮೇತ ಹೇಳಿದ್ದೇನೆ. ಒಬ್ಬ ಕೇಂದ್ರ ಮಂತ್ರಿ ಬಗ್ಗೆ ಯಾವ ಭಾಷೆ ಬಳಸಿದ್ದಾನೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಮೊದಲು ಕುಮಾರಸ್ವಾಮಿ ರಾಜೀನಾಮೆ ಕೊಡಲಿ ಎಂದ ಪ್ರದೀಪ್ ಈಶ್ವರ್

ನಾನು ದೂರು ಕೊಟ್ಟಿದ್ದೀನಾ?

ಪತ್ರದಲ್ಲಿ ಸತ್ಯಮೆಯ ಜಯತೆ ಎಂದು ಆತ ಬರೆದಿದ್ದಾರೆ. ನಾನು ಹೋರಾಟ ಮಾಡುತ್ತಿರುವುದು ಕೂಡ ಅದೇ ಉದ್ದೇಶಕ್ಕೆ. ಶನಿವಾರ ಅಷ್ಟು ದಾಖಲೆಗಳ ಸಮೇತ ಈ ವ್ಯಕ್ತಿ ಬಗ್ಗೆ ಹೇಳಿದ್ದು ಕೂಡ ಸತ್ಯಮೇವ ಜಯತೇ ಕಾರಣಕ್ಕಾಗಿಯೇ ಎಂದು ಕುಮಾರಸ್ವಾಮಿ ಹೇಳಿದರು. ಪೊಲೀಸ್ ಠಾಣೆಗೆ ಈ ಅಧಿಕಾರಿ ವಿರುದ್ಧ ನಾನು ದೂರು ಕೊಟ್ಟಿದ್ದೀನಾ? ಅವರ ಕೈಕೆಳಗೆ ಕೆಲಸ ಮಾಡುವ ಇನ್ಸ್ಪೆಕ್ಟರ್ ಗೆ ₹20 ಕೋಟಿ ಡಿಮ್ಯಾಂಡ್ ಇಟ್ಟು ಸಿಕ್ಕಿಬಿದ್ದಿದ್ದಾನೆ. ಆ ಇನ್ಸ್ಪೆಕ್ಟರ್ ಈ ಅಧಿಕಾರಿ ವಿರುದ್ಧ ದೂರು ನೀಡಿದ್ದಾರೆ. ತಕ್ಷಣ 2 ಕೋಟಿ ರೂ. ತಂದು ಕೊಡಬೇಕು ಎಂದು ಬ್ಲಾಕ್ ಮೇಲ್ ಮಾಡಿದ್ದು ಈತನೇ ಅಲ್ಲವೇ? FIR ಹಾಕಿದ ನಂತರ ಕೇಸ್ ಕೋರ್ಟ್ ಮುಂದೆ ಇದೆಯಲ್ಲ. ಇದೇನಾ ಆತನ ಸತ್ಯಮೇವ ಜಯತೆ? ಎಂದು ಕಿಡಿಕಾರಿದರು.

ನನ್ನ ರಾಜೀನಾಮೆ ಕೇಳುವ ನೈತಿಕತೆ ಇಲ್ಲ

ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪಟಾಲಂಗೆ ನನ್ನ ರಾಜೀನಾಮೆ ಕೇಳುವ ನೈತಿಕತೆ ಇಲ್ಲ. ಸಿದ್ದರಾಮಯ್ಯ ಮೆಚ್ಚಿಸಲು ನಾನು ರಾಜೀನಾಮೆ ಕೊಡಬೇಕಾ? ನಾನು ತಪ್ಪು ಮಾಡಿಲ್ಲ, ತಪ್ಪು ಮಾಡಿಲ್ಲ ಅಂದ್ಮೇಲೆ ರಾಜೀನಾಮೆ ಯಾಕೆ ಕೊಡಲಿ? ಸುಳ್ಳು ಹೇಳ್ತಿರೋದು ನಾನಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ