ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧೆ: ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು
ತಮ್ಮ ಪುತ್ರನಿಗೆ ಹಾವೇರಿ ಲೋಕಸಭಾ ಟಿಕೆಟ್ ನೀಡದಿದ್ದಕ್ಕೆ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಸಮಾಧಾನಗೊಂಡಿದ್ದಾರೆ. ಈ ವಿಚಾರವಾಗಿ ಹಾವೇರಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಕೂಡ ಒಬ್ಬರು ಎಂದು ಹೇಳಿದ್ದಾರೆ.
ಹಾವೇರಿ, ಮಾರ್ಚ್ 15: ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಕೂಡ ಒಬ್ಬರು. ಈಶ್ವರಪ್ಪನವರು ಶಿಸ್ತಿನ ಸಿಪಾಯಿ, ಅವರ ಜತೆ ನಾನು ಮಾತನಾಡುವೆ. ಬಿಜೆಪಿ ಟಿಕೆಟ್ ವರಿಷ್ಠರ ತೀರ್ಮಾನ, ಯಾರಿಗೂ ಮೋಸ ಮಾಡಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಅವರಿಗೆ ಎಲ್ಲಾ ಗೊತ್ತಿದೆ. ನಾನು ಏನು ಹೇಳಿದ್ದೆ? ಪಾರ್ಲಿಮೆಂಟರಿ ಬೋರ್ಡ್ನಲ್ಲಿ ಏನು ಹೇಳಿದ್ದೆ ಎಲ್ಲಾ ಅವರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.
ನೀನು ಸ್ಪರ್ಧಿಸು ಎಂದು ಪ್ರಧಾನಿ ಹೇಳಿದ್ದಾರೆ ಎಂದ ಬೊಮ್ಮಾಯಿ
ನನ್ನ ಹೆಸರು ಪಾರ್ಲಿಮೆಂಟರಿ ಬೋರ್ಡ್ನಲ್ಲಿ ಕೂಡ ಫೈನಲ್ ಆಗಿರಲಿಲ್ಲ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬೇರೆಯವರಿಗೆ ಅವಕಾಶ ಕೊಡಿ ಎಂದಿದ್ದೆ. ಪಿಎಂ, ನಡ್ಡಾಜಿ, ಗೃಹ ಸಚಿವರು ತಿಳಿಸಿದ ಬಳಿಕ ನಿರ್ಧಾರ ಮಾಡಬೇಕಾಯಿತು. ಅನಿವಾರ್ಯ ಇದೆ ನೀನು ಸ್ಪರ್ಧಿಸು ಎಂದು ಪ್ರಧಾನಿ, ವರಿಷ್ಠರು ಹೇಳಿದರು. ಹೀಗಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಟಿಕೆಟ್ ವಂಚಿತರ ಜೊತೆ ಸಭೆ… ಕುತೂಹಲ ಮೂಡಿಸಿದ ಈಶ್ವರಪ್ಪ ಮುಂದಿನ ನಡೆ!
ಮಾಜಿ ಶಾಸಕ ಓಲೆಕಾರ್ ನಿಲುವು ಗೊತ್ತಿಲ್ಲ. ನಾನು ಈಗ ಏನು ಹೇಳಲು ಆಗಲ್ಲ. ಸ್ಥಳೀಯ ನಾಯಕರ ಜೊತೆ ಚರ್ಚೆ ಮಾಡುವೆ. ನನಗೆ ಶಿಗ್ಗಾವಿ ಜೊತೆ ಭಾವನಾತ್ಮಕ ಸಂಬಂಧವಿದೆ. ಎಲ್ಲಾ ತಾಲೂಕುಗಳ ಅಭಿವೃದ್ಧಿ ಜೊತೆ ಶಿಗ್ಗಾವಿ ಅಭಿವೃದ್ಧಿ ಮಾಡಲಾಗುತ್ತೆ ಎಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ: ಕೆಲವು ಕ್ಷೇತ್ರಗಳಲ್ಲಿ ಅಸಮಾಧಾನ ಸ್ಫೋಟ; ಎಲ್ಲೆಲ್ಲಿ?
ಶಿಗ್ಗಾವಿ ಬೈ ಎಲೆಕ್ಷನ್ ನಡೆದರೆ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಈಗ ನಾನಿನ್ನೂ ಸ್ಪರ್ಧೆ ಮಾಡಿ ಲೋಕಸಭಾ ಚುನಾವಣೆ ಗೆಲ್ಲಬೇಕು. ಬಳಿಕ ಶಿಗ್ಗಾವಿಗೆ ಉಪಚುನಾವಣೆ ನಡೆಯಲಿದೆ. ಊಹೆ ಮಾಡಿ ನಾನು ಹೇಳಲು ಆಗಲ್ಲ. ಆ ಸಂದರ್ಭದಲ್ಲಿ ಜನರ ಅಭಿಪ್ರಾಯ, ಪಕ್ಷದ ಅಭಿಪ್ರಾಯ ಕೇಳಬೇಕು ಎಂದು ಹೇಳಿದ್ದಾರೆ.
ಬೊಮ್ಮಾಯಿ ಎದುರೇ ಕೈ ಕೈ ಮಿಲಾಯಿಸಿ ಕಾರ್ಯಕರ್ತರು
ಲೋಕಸಭಾ ಟಿಕೆಟ್ ಸಿಕ್ಕ ಬಳಿಕ ಮೊದಲ ಬಾರಿ ಜಿಲ್ಲಾ ಕಚೇರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು. ಈ ವೇಳೆ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿದೆ. ಬಸವರಾಜ ಬೊಮ್ಮಾಯಿ ಬರುತ್ತಿದ್ದಂತೆ ತಳ್ಳಾಟ ನೂಕಾಟ ಮಾಡಲಾಗಿದೆ. ಹಾವೇರಿ ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ವೆಂಕಟೇಶ್ ನಾರಾಯಣಿ ಬದಲಾವಣೆಗೆ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಅರವಿಂದ ಬೆಲ್ಲದ್ ಎದುರೇ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಚೇರ್ ಕಿತ್ತುಗೆದು, ಕಿತ್ತಾಡಿ, ಟೇಬಲ್ ಗುದ್ದಿ ಆಕ್ರೋಶ ಹೊರ ಹಾಕಿದರು. ಗಲಾಟೆ ಜೋರಾಗುತ್ತಿದ್ದಂತೆ ಕಚೇರಿಯಿಂದ ಬೊಮ್ಮಾಯಿ ಹೊರ ನಡೆದರು.
ವರದಿ: ಅಣ್ಣಪ್ಪ ಬಾರ್ಕಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:55 pm, Fri, 15 March 24