ಹೊಸ ವರ್ಷಕ್ಕೆ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್​​​ನ್ಯೂಸ್​​: ಪ್ರಾಯೋಗಿಕ ಪರೀಕ್ಷೆಗಳಿಗೆ ಹೊಸ ರೂಲ್ಸ್​​​ ತಂದ ಇಲಾಖೆ

KSEAB 2nd PUC Exams 2026 Web-Streaming: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗಳಿಗೆ ವೆಬ್‌ಸ್ಟ್ರೀಮಿಂಗ್ ಕಡ್ಡಾಯಗೊಳಿಸಿದೆ. ಪರೀಕ್ಷೆಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು, ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ರಿಯಲ್-ಟೈಮ್ ಲೈವ್ ಸ್ಟ್ರೀಮಿಂಗ್ ಮತ್ತು ಕೃತಕ ಬುದ್ಧಿಮತ್ತೆ (AI) ಮೂಲಕ ಮೇಲ್ವಿಚಾರಣೆ ನಡೆಯಲಿದೆ. ಜನವರಿ 27 ರಿಂದ ಫೆಬ್ರವರಿ 14 ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಇದು ಹೊಸ ಉತ್ತೀರ್ಣ ನಿಯಮಗಳಿಗೆ ಪೂರಕವಾಗಿದೆ.

ಹೊಸ ವರ್ಷಕ್ಕೆ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್​​​ನ್ಯೂಸ್​​: ಪ್ರಾಯೋಗಿಕ ಪರೀಕ್ಷೆಗಳಿಗೆ ಹೊಸ ರೂಲ್ಸ್​​​ ತಂದ ಇಲಾಖೆ
ಸಾಂದರ್ಭಿಕ ಚಿತ್ರ

Updated on: Jan 02, 2026 | 9:57 AM

ಬೆಂಗಳೂರು, ಜ.2: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಈ ವರ್ಷ ದ್ವಿತೀಯ ಪಿಯು ಕೋರ್ಸ್‌ಗಳ ಪ್ರಾಯೋಗಿಕ ಪರೀಕ್ಷೆಗಳಿಗೆ ವೆಬ್-ಸ್ಟ್ರೀಮಿಂಗ್ ಕಡ್ಡಾಯಗೊಳಿಸಿದೆ. ಪರೀಕ್ಷೆಯಲ್ಲಿ ಪಾರದರ್ಶಕತೆ ತರಲು ಈ ಕ್ರಮವನ್ನು ಕೆಎಸ್‌ಇಎಬಿ ತಂದಿದೆ. ಈ ಹೊಸ ವ್ಯವಸ್ಥೆಯನ್ನು ತರುವ ಮೂಲಕ ವಿದ್ಯಾರ್ಥಿಗಳಿಗೆ ಅಂಕದಲ್ಲಿ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುತ್ತದೆ. ಪರೀಕ್ಷಾ ಕೇಂದ್ರದಲ್ಲಿ ನಡೆಯುವ ಎಲ್ಲಾ ಚಟುವಟಿಕೆಯನ್ನು ರಿಯಲ್​​​ ಟೈಮ್​​ನಲ್ಲಿ ಲೈವ್​​ ಸ್ಟ್ರೀಮ್​​​​ ಮಾಡಲಾಗುತ್ತದೆ. ಕಳೆದ ವರ್ಷ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ್ದರೂ, ಥಿಯರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿ ಉತ್ತೀರ್ಣರಾಗಲು ವಿಫಲರಾಗಿರುವುದರಿಂದ ಪ್ರಾಯೋಗಿಕ ಪರೀಕ್ಷೆಗಳನ್ನು ವೆಬ್‌ಕಾಸ್ಟ್ ಮಾಡಲು ಮಂಡಳಿಯು ಎಲ್ಲಾ ಕೇಂದ್ರಗಳಿಗೆ ಸೂಚನೆ ನೀಡಿದೆ. ಮಂಡಳಿಯು ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಮೇಲ್ವಿಚಾರಣೆ ಮಾಡುತ್ತದೆ. ಸಂಪೂರ್ಣ ಪ್ರಕ್ರಿಯೆಗಾಗಿ ಕೃತಕ ಬುದ್ಧಿಮತ್ತೆಯನ್ನು ಸಕ್ರಿಯಗೊಳಿಸಲಾಗುತ್ತದೆ ಎಂದು ಹೇಳಿದೆ.

ಜನವರಿ 27 ರಿಂದ ಫೆಬ್ರವರಿ 14 ರವರೆಗೆ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಮಂಡಳಿಯು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ. ಈ ವರ್ಷ ಪ್ರಾಯೋಗಿಕ ಪರೀಕ್ಷೆಗಳು 30 ಅಂಕಗಳಿಗೆ ನಡೆಯಲಿದ್ದು, ಥಿಯರಿ 70 ಅಂಕಗಳಿಗೆ ನಡೆಯಲಿದೆ. ಒಬ್ಬ ವಿದ್ಯಾರ್ಥಿಯು ಥಿಯರಿಯಲ್ಲಿ ಕನಿಷ್ಠ 21 ಅಂಕಗಳನ್ನು ಪಡೆದರೆ ಆ ವಿದ್ಯಾರ್ಥಿಯನ್ನು ಉತ್ತೀರ್ಣರೆಂದು ಘೋಷಿಸಲಾಗುತ್ತದೆ. ಆದರೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಈ ಮಿತಿ ಇಲ್ಲದಿರುವ ಕಾರಣ, ಹೆಚ್ಚಿನ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಪೂರ್ಣ ಅಂಕವನ್ನು ನೀಡಲಾಗುತ್ತದೆ.

ಇದನ್ನೂ ಓದಿ: SSLC ಫಲಿತಾಂಶ ಸುಧಾರಣೆ ಮಾಡುವ ಶಿಕ್ಷಕರಿಗೆ ಬಂಪರ್ ಗಿಫ್ಟ್ ಘೋಷಿಸಿದ ಸರ್ಕಾರ

ಆದರೆ ಈ ಹಿಂದಿನ ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ 30 ಅಂಕಗಳನ್ನು ಪಡೆದಿದ್ದರು, ಆದರೆ ಥಿಯರಿ ಪರೀಕ್ಷೆಯಲ್ಲಿ 10 ಅಂಕ ಪಡೆದು ಫೇಲ್​​ ಆಗಿರುವ ಸುಮಾರು ನಿದರ್ಶನಗಳು ಇದೆ. ಅದಕ್ಕಾಗಿ ಪ್ರಾಯೋಗಿಕ ಪರೀಕ್ಷೆಗಳನ್ನು ಮೇಲ್ವಿಚಾರಣೆ ಮಾಡಲು ಒತ್ತಾಯಗಳು ಬಂದಿದೆ ಎಂದು ಕೆಎಸ್‌ಇಎಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಾಯೋಗಿಕ ಪರೀಕ್ಷೆಗಳಲ್ಲಿಯೂ ಸಹ, 10 ಅಂಕಗಳು ಹಾಜರಾತಿ ಆಧಾರಿತವಾಗಿರುತ್ತವೆ ಮತ್ತು ಉಳಿದ 20 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ವರ್ಷದಿಂದ, ಮಂಡಳಿಯು ಕನಿಷ್ಠ ಉತ್ತೀರ್ಣ ಅಂಕಗಳನ್ನು 33% ಕ್ಕೆ ಇಳಿಸಿದೆ. ಥಿಯರಿ ಮತ್ತು ಪ್ರಾಕ್ಟಿಕಲ್ ಎರಡರ ಅಂಕವನ್ನು ಸೇರಿಸಿ 30 ಅಂಕಗಳನ್ನು ಪಡೆದರೆ ಅಂತಹ ವಿದ್ಯಾರ್ಥಿಗಳನ್ನು ಉತ್ತೀರ್ಣರೆಂದು ಘೋಷಿಸಲಾಗುತ್ತದೆ. ಅದಕ್ಕಾಗಿ ಈ ವರ್ಷದಿಂದ ಪ್ರಾಯೋಗಿಕ ಪರೀಕ್ಷೆಗಳು ನಡೆಯುವ ಕೇಂದ್ರಗಳಲ್ಲಿ ವೆಬ್-ಸ್ಟ್ರೀಮಿಂಗ್ ಕಡ್ಡಾಯಗೊಳಿಸಲಾಗಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ