ಬೆಂಗಳೂರು: ಕೊವಿಡ್ ನಿಯಮಾವಳಿ ಪ್ರಕಾರ ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ನಾಳೆಯಿಂದ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದ್ದು, ಸಿಆರ್ಪಿಸಿ ಸೆಕ್ಷನ್ 144ರ ಪ್ರತಿಭಟನೆಗೆ ಅವಕಾಶವಿರುವುದಿಲ್ಲ. ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸಿದರೆ ಬಂಧಿಸುತ್ತೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.
ನಿಯಮ ಉಲ್ಲಂಘಿಸಿದರೆ, ಬಂಧಿಸಿ ಠಾಣೆಯಲ್ಲಿ ಕೂರಿಸಿ ಸುಮ್ಮನೆ ಬಿಟ್ಟು ಕಳುಹಿಸುವುದಿಲ್ಲ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಸಮಸ್ಯೆ ಆಗದಂತೆ ಬಂದೋಬಸ್ತ್ ಮಾಡುತ್ತೇವೆ. ನಿಷೇಧಾಜ್ಞೆ ಉಲ್ಲಂಘಿಸಿ ಚೇಷ್ಟೆ ಮಾಡಿದರೆ ನಾವು ಸುಮ್ಮನೆ ಬಿಡುವುದಿಲ್ಲ. ನಾಳೆ ಬಿಎಂಟಿಸಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿ, ಬಸ್ ಸಂಚಾರಕ್ಕೆ ಪೊಲೀಸ್ ಭದ್ರತೆ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
ಹೆಚ್ಚು ಪ್ರಯಾಣಿಕರು ಸಂಚಾರ ಮಾಡುವ ಮಾರ್ಗಗಳಲ್ಲಿ ನಾಳೆ ಖಾಸಗಿ ವಾಹನಗಳು ಸಂಚಾರ ಮಾಡಲಿವೆ: ಬಿಎಂಟಿಸಿ ಎಂಡಿ ಸಿ.ಶಿಖಾ
ನಾಳೆ ಮುಷ್ಕರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾರಿಗೆ ಸಿಬ್ಬಂದಿಗಳ ಮುಖಂಡರ ಜೊತೆಗೆ ಮಾತುಕತೆ ನಡೆಸಲಾಗಿದೆ. ಆದರೂ ಅವರು ಮುಷ್ಕರಕ್ಕೆ ಮುಂದಾಗಿದ್ದಾರೆ. ಬೆಂಗಳೂರಲ್ಲಿ ಬಹಳ ಪ್ರಯಾಣಿಕರು ಬಿಎಂಟಿಸಿಯನ್ನು ಅವಲಂಬಿಸಿದ್ದಾರೆ. ಹೀಗಾಗಿ ನಾಳೆ ಖಾಸಗಿ ವಾಹನಗಳನ್ನು ಓಡಿಸುವ ಬಗ್ಗೆ ಸಾರಿಗೆ ಆಯುಕ್ತರು ನಮ್ಮ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಪ್ರಮುಖ ಮಾರ್ಗದಲ್ಲಿ ಖಾಸಗಿ ವಾಹನಗಳನ್ನು ಸಂಚಾರ ಮಾಡಲು ನಾವು ಈಗಾಗಲೇ ಮಾರ್ಗದ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. ಹೆಚ್ಚಿನ ಪ್ರಯಾಣಿಕರು ಸಂಚಾರ ಮಾಡುವ ಮಾರ್ಗಗಳಲ್ಲಿ ಖಾಸಗಿ ವಾಹನಗಳು ಸಂಚಾರ ಮಾಡಲಿವೆ ಎಂದು ಟಿವಿ9 ಪ್ರತಿನಿಧಿಗೆ ಬಿಎಂಟಿಸಿ ಎಂಡಿ ಸಿ.ಶಿಖಾ ತಿಳಿಸಿದ್ದಾರೆ.
ಇದನ್ನೂ ಓದಿ: Bus Strike: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗಿಂತ ಸಂಬಳಕ್ಕೆ ಸಾಕಷ್ಟು ಹಣ ಖರ್ಚಾಗುತ್ತಿದೆ: ಕಂದಾಯ ಸಚಿವ ಆರ್.ಅಶೋಕ್
(KSRTC BMTC bus strike if covid 19 guidelines fails protestors will be arrested says police commissioner kamal pant in Bengaluru)
Published On - 4:36 pm, Tue, 6 April 21