AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bus Strike: ಬಸ್​ ಮುಷ್ಕರದ ಬೆನ್ನಲ್ಲೇ ವಿವಿಧ ವಿಭಾಗಗಳಿಂದ ಸಾರಿಗೆ ನೌಕರರ ವರ್ಗಾವಣೆ

KSRTC BMTC Workers Strike: ಆಡಳಿತಾತ್ಮಕ ಕಾರಣ ನೀಡಿ ಸಾರಿಗೆ ನೌಕರರನ್ನು ವರ್ಗಾವಣೆ ಮಾಡಲಾಗಿದ್ದು, ಚಿತ್ರದುರ್ಗ ವಿಭಾಗದಲ್ಲಿ 10 ಸಾರಿಗೆ ನೌಕರರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಅಂತೆಯೇ, ಮಂಡ್ಯ ವಿಭಾಗದ 14 ನೌಕರರು ಹಾಗೂ ಮೈಸೂರು ವಿಭಾಗದ 33 ನೌಕರರಿಗೂ ವರ್ಗಾವಣೆ ನೀಡಲಾಗಿದೆ.

Bus Strike: ಬಸ್​ ಮುಷ್ಕರದ ಬೆನ್ನಲ್ಲೇ ವಿವಿಧ ವಿಭಾಗಗಳಿಂದ ಸಾರಿಗೆ ನೌಕರರ ವರ್ಗಾವಣೆ
ಪ್ರಾತಿನಿಧಿಕ ಚಿತ್ರ
Follow us
Skanda
| Updated By: preethi shettigar

Updated on: Apr 10, 2021 | 8:46 AM

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಜಿದ್ದಾಜಿದ್ದಿ ಮುಂದುವರೆದಿದ್ದು ಸಾರಿಗೆ ನೌಕರರು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಬಸ್​ಗಳು ರಸ್ತೆಗಿಳಿಯದೇ ಖಾಸಗಿ ವಾಹನಗಳ ದರ್ಬಾರ್ ಮುಂದುವರೆದಿದೆ. ಏತನ್ಮಧ್ಯೆ, ವಿವಿಧ ನಿಗಮಗಳ ಸಾರಿಗೆ ನೌಕರರನ್ನು ಅಧಿಕಾರಿಗಳು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಚಿತ್ರದುರ್ಗ, ಮೈಸೂರು, ಮಂಡ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ವರ್ಗಾವಣೆ ಮಾಡಲಾಗಿದೆ.

ಆಡಳಿತಾತ್ಮಕ ಕಾರಣ ನೀಡಿ ಸಾರಿಗೆ ನೌಕರರನ್ನು ವರ್ಗಾವಣೆ ಮಾಡಲಾಗಿದ್ದು, ಚಿತ್ರದುರ್ಗ ವಿಭಾಗದಲ್ಲಿ 10 ಸಾರಿಗೆ ನೌಕರರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಅಂತೆಯೇ, ಮಂಡ್ಯ ವಿಭಾಗದ 14 ನೌಕರರು ಹಾಗೂ ಮೈಸೂರು ವಿಭಾಗದ 33 ನೌಕರರಿಗೂ ವರ್ಗಾವಣೆ ನೀಡಲಾಗಿದೆ. ಮೈಸೂರಿನಿಂದ ಮಂಗಳೂರು, ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿರುವುದಾಗಿ ತಿಳಿದುಬಂದಿದೆ. ಮುಷ್ಕರದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆಯಾದರೂ ವರ್ಗಾವಣೆಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಕಾರಣ ನೀಡಲಾಗಿದೆ.

ಈ ಮಧ್ಯೆ, ಸರ್ಕಾರ ಹಾಗೂ ಸಾರಿಗೆ ಅಧಿಕಾರಿಗಳ ಯಾವ ಆದೇಶಕ್ಕೂ ಜಗ್ಗದ ನೌಕರರು ಕರ್ತವ್ಯಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ. ನಾಲ್ಕು ನಿಗಮಗಳ ನೌಕರರೂ ಕರ್ತವ್ಯಕ್ಕೆ ಹಾಜರಾಗದೇ ದೂರ ಉಳಿದಿದ್ದು, ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ಮುಖಂಡರು ತಯಾರಿಯಲ್ಲಿ ತೊಡಗಿದ್ದು, ಕೋಡಿಹಳ್ಳಿ ಚಂದ್ರಶೇಖರ್ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಬೆಳಗಾವಿ ಹಾಗೂ ಕಲಬುರ್ಗಿಯಲ್ಲಿ ಸಾರಿಗೆ ಮುಖಂಡರು ಹಾಗೂ ನೌಕರರು ಸಭೆ ನಡೆಸಲಿದ್ದು, ಯಾವ ರೀತಿ ಮುಷ್ಕರವನ್ನು ಮುಂದುವರೆಸಬೇಕೆಂದು ತೀರ್ಮಾನಿಸಲಿದ್ದಾರೆ.

ಸರ್ಕಾರಿ ಬಸ್​ ಬಿಡಲು ಖಾಸಗಿ ಬಸ್​ ಮಾಲೀಕರ ವಿರೋಧ ರಾಜ್ಯ ಸರ್ಕಾರದ ವಿರುದ್ಧ ಮುಷ್ಕರ ಹೂಡಿರುವ ಸಾರಿಗೆ ನೌಕರರು ಪಟ್ಟು ಸಡಿಲಿಸಲು ಒಪ್ಪದ ಕಾರಣ ನಾಲ್ಕನೇ ದಿನವೂ ರಾಜ್ಯದಲ್ಲಿ ಸರ್ಕಾರಿ ಬಸ್​ಗಳು ರಸ್ತೆಗಿಳಿದಿಲ್ಲ. ಕೆಲವೆಡೆ ತರಬೇತಿ ನಿರತ ಸಿಬ್ಬಂದಿ ಮೂಲಕ ಬಸ್​ ಚಲಾಯಿಸಲಾಗುತ್ತಿದೆಯಾದರೂ ಬೆರಳೆಣಿಕೆ ಸಂಖ್ಯೆಯಲ್ಲಿ ಮಾತ್ರ ಅದು ಸಾಧ್ಯವಾಗಿದೆ. ಹೀಗಾಗಿ ಸಾರಿಗೆ ನಿಗಮದ ಅಧಿಕಾರಿಗಳು ಖಾಸಗಿ ಬಸ್​ಗಳನ್ನೇ ಮುಂದಿಟ್ಟುಕೊಂಡು ಸಂಚಾರ ವ್ಯವಸ್ಥೆ ನಿರ್ವಹಿಸುತ್ತಿದ್ದಾರೆ. ಆದರೆ, ಇದೇ ಅವರಿಗೆ ಮುಳುವಾಗಿದ್ದು ಕೆಲವೆಡೆ ಸರ್ಕಾರಿ ಬಸ್​ ಬಿಡೋಣವೆಂದರೂ ಖಾಸಗಿ ಬಸ್ ಮಾಲೀಕರು ತಕರಾರು ತೆಗೆಯುತ್ತಿದ್ದಾರೆ. ಇದರಿಂದಾಗಿ ಸಾರಿಗೆ ನೌಕರರ ಮುಷ್ಕರದ ಸಂಕಷ್ಟ ಅನುಭವಿಸುತ್ತಿರುವ ಅಧಿಕಾರಿಗಳಿಗೆ ಈಗ ಖಾಸಗಿ ಬಸ್​ ಮಾಲೀಕರ ಮನವೊಲಿಸುವ ಅನಿವಾರ್ಯತೆಯೂ ಎದುರಾಗಿದ್ದು ಅವರ ಪರಿಸ್ಥಿತಿ ಕೋಲು ಕೊಟ್ಟು ಪೆಟ್ಟು ತಿಂದಂತಾಗಿದೆ.

ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲಿಸಿದವರಿಗೆ ಸರ್ಕಾರದಿಂದ ನೋಟಿಸ್​ 

Bus Strike: ಸರ್ಕಾರಿ ಬಸ್​ ಸಂಚಾರಕ್ಕೆ ಖಾಸಗಿ ಮಾಲೀಕರಿಂದ ವಿರೋಧ; ಕೋಲು ಕೊಟ್ಟು ಪೆಟ್ಟು ತಿಂದಂತಾದ ಅಧಿಕಾರಿಗಳು

(KSRTC BMTC Workers Strike: KSRTC Employees Transferred amid of Protest)