ಬ್ರ್ಯಾಂಡ್ ಕರ್ನಾಟಕವೋ ಅಥವಾ ಬ್ರೇಕ್‌ಡೌನ್ ಕರ್ನಾಟಕವೋ?: ಕೆಎಸ್‌ಆರ್‌ಟಿಸಿ ಬಸ್‌ಗಳ ಭೀಕರ ದುಸ್ಥಿತಿ ಬಿಚ್ಚಿಟ್ಟ ಸವಾರರು!

ಕೆಎಸ್‌ಆರ್‌ಟಿಸಿ ಬಸ್‌ಗಳ ದುಸ್ಥಿತಿ ಪ್ರಯಾಣಿಕರ ಪ್ರಾಣಕ್ಕೆ ಅಪಾಯ ತರುತ್ತಿದೆ. ಹರಿದ ಆಕ್ಸಿಲರೇಟರ್, ತಂತಿಯಿಂದ ಕಟ್ಟಿದ ಚಾಲಕನ ಸೀಟು ಮತ್ತು ತೈಲ ಸೋರಿಕೆಗಳಂತಹ ತಾಂತ್ರಿಕ ದೋಷಗಳು ಸಂಸ್ಥೆಯ ನಿರ್ವಹಣಾ ಲೋಪವನ್ನು ಎತ್ತಿ ತೋರಿಸುತ್ತವೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ "ಬ್ರ್ಯಾಂಡ್ ಕರ್ನಾಟಕ"ಕ್ಕೆ ಧಕ್ಕೆ ಉಂಟಾಗಿದ್ದು, ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಕೂಡಲೇ ಎಲ್ಲಾ ಬಸ್‌ಗಳ ತಪಾಸಣೆ ನಡೆಸಿ, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಬ್ರ್ಯಾಂಡ್ ಕರ್ನಾಟಕವೋ ಅಥವಾ ಬ್ರೇಕ್‌ಡೌನ್ ಕರ್ನಾಟಕವೋ?: ಕೆಎಸ್‌ಆರ್‌ಟಿಸಿ ಬಸ್‌ಗಳ ಭೀಕರ ದುಸ್ಥಿತಿ ಬಿಚ್ಚಿಟ್ಟ ಸವಾರರು!
ಕೆಎಸ್‌ಆರ್‌ಟಿಸಿ ಬಸ್ ಸುರಕ್ಷತೆ ನೋಡಿ

Updated on: Apr 07, 2026 | 4:09 PM

ಬೆಂಗಳೂರು, ಏ.7: ಕಳೆದ ಮೂರು ವರ್ಷದಿಂದ ಬ್ರ್ಯಾಂಡ್ ಕರ್ನಾಟಕ… ಬ್ರ್ಯಾಂಡ್ ಕರ್ನಾಟಕ ಎನ್ನುವ ಕಾಂಗ್ರೆಸ್​​ ಸರ್ಕಾರಕ್ಕೆ ಈ ಬಸ್ಸುಗಳನ್ನು ಬ್ರ್ಯಾಂಡ್ ಮಾಡುವ ಯೋಚನೆಯೇ ಮಾಡಿಲ್ಲ ಎಂದು ಅನ್ನಿಸುತ್ತದೆ. ಕಳೆದ ಹಲವು ದಿನಗಳಿಂದ ಸರ್ಕಾರಿ ಬಸ್ಸುಗಳ ಬಗ್ಗೆ ಒಂದಲ್ಲ ಒಂದು ದೂರುಗಳು ಬರುತ್ತಲೇ ಇದೆ. ಇದೀಗ @KarnatakaPortfolio ಹಂಚಿಕೊಂಡಿರುವ ವಿಡಿಯೋ ನೋಡಿದ್ರೆ ಕೆಎಸ್​​ಆರ್​​ಟಿಸಿ ಬಸ್ಸುಗಳು ಎಷ್ಟು ಅಪಾಯಕಾರಿಯಾಗಿದೆ ಎಂಬುದನ್ನು ನೋಡಬಹುದು. ಇದೀಗ ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಇದೀಗ ಈ ತಾಂತ್ರಿಕ ದೋಷ ಜನರ ಜೀವನಕ್ಕೆ ಎಷ್ಟೊಂದು ಅಪಾಯಕಾರಿಯಾಗಿದೆ ಎಂಬುದನ್ನು ಹಾಗೂ ಸಂಸ್ಥೆಯ ನಿರ್ವಹಣಾ ಲೋಪವನ್ನು ಬೆತ್ತಲೆ ಮಾಡಿವೆ.

ಬಸ್ಸಿನ ವೇಗವನ್ನು ನಿಯಂತ್ರಿಸುವ ಆಕ್ಸಿಲರೇಟರ್ ಕಿತ್ತು ಬಂದಿದ್ದು, ಅದನ್ನು ಲೋಹದ ಬದಲು ಒಂದು ಸಾಧಾರಣ ಬಟ್ಟೆಯ ಪಟ್ಟಿಯಿಂದ ಕಟ್ಟಿ ನಿಲ್ಲಿಸಲಾಗಿದೆ. ಒಂದು ವೇಳೆ ಈ ಬಟ್ಟೆ ತುಂಡಾದರೆ ಅಪಘಾತ ಖಂಡಿತ. ಇಂತಹ ಬೇಜಾವ್ದಾರಿತನದಿಂದ ಜನರ ಪ್ರಾಣಕ್ಕೆ ಅಪಾಯ ತರುವುದು ಎಷ್ಟು ಸರಿ ಎಂದು ಜನ ಪ್ರಶ್ನೆ ಮಾಡಿದ್ದಾರೆ. ದಿನವಿಡೀ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯಬೇಕಾದ ಚಾಲಕನ ಸೀಟನ್ನು ಸರಿಯಾಗಿ ರಿಪೇರಿ ಮಾಡುವ ಬದಲು, ಕಬ್ಬಿಣದ ತಂತಿಗಳಿಂದ ಕಟ್ಟಲಾಗಿದೆ. ಪಾಪ ಅವರಿಗೂ ಕೂಡ ಸರಿಯಾದ ವ್ಯವಸ್ಥೆಯನ್ನು ಕೂಡ ಮಾಡಲು ನಮ್ಮ ಸರ್ಕಾರದ ಬಳಿ ಹಣವಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಇನ್ನು ಟೈರ್ ಬಳಿ ಆಯಿಲ್ ಸೋರಿಕೆಯಾಗಿರುವುದು ಕೂಡ ಈ ಬಸ್ಸಿನಲ್ಲಿ ಕಂಡು ಬಂದಿದೆ. ಇದರಿಂದ ಇದು ಬ್ರೇಕ್ ಫೇಲ್ಯೂರ್ ಅಥವಾ ಗೇರ್ ಬಾಕ್ಸ್ ಸಮಸ್ಯೆಯಾಗುವ ಸಾಧ್ಯತೆ ಕೂಡ ಇದೆ. ಪ್ರತಿದಿನ ಲಕ್ಷಾಂತರ ಶಾಲಾ ಮಕ್ಕಳು, ಕಾರ್ಮಿಕರು ಮತ್ತು ಸಾಮಾನ್ಯ ಜನರು ಈ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಬಸ್‌ಗಳ ಈ ದುಸ್ಥಿತಿಗೆ ಒತ್ತಡದಲ್ಲಿ ಕೆಲಸ ಮಾಡುವ ಚಾಲಕರನ್ನು ಹೊಣೆ ಮಾಡುವಂತಿಲ್ಲ. ಇದು ಸಂಪೂರ್ಣವಾಗಿ ಸಾರಿಗೆ ಇಲಾಖೆ ಮತ್ತು ಸರ್ಕಾರದ ನಿರ್ಲಕ್ಷ್ಯವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಾವುದಾದರೂ ದೊಡ್ಡ ದುರಂತ ಸಂಭವಿಸಿದ ಮೇಲೆ ಇಲಾಖೆ ಎಚ್ಚೆತ್ತುಕೊಳ್ಳುತ್ತದೆಯೇ?” ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಮಹಿಳೆ ಬಟ್ಟೆ ವಾಷ್​ಗೆ ಹಾಕಲು ಬಂದಾಗ ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ

ಸಾರ್ವಜನಿಕ ಸಾರಿಗೆಯು ನಂಬಿಕಾರ್ಹ ಮತ್ತು ಸುರಕ್ಷಿತವಾಗಿರಬೇಕು. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಪ್ರಯಾಣಿಕರು ಪ್ರತಿ ಕ್ಷಣವೂ ಪ್ರಾಣಭಯದಲ್ಲೇ ಸಂಚರಿಸುವಂತಾಗಿದೆ. ಕೂಡಲೇ ಎಲ್ಲಾ ಬಸ್‌ಗಳ ತಾಂತ್ರಿಕ ತಪಾಸಣೆ ನಡೆಸಿ, ಅನರ್ಹ ವಾಹನಗಳನ್ನು ರಸ್ತೆಯಿಂದ ಹಿಂಪಡೆಯಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us