ಬೆಂಗಳೂರು: ಬಸ್ ಹತ್ತಿದ್ರೆ ಬರೆ.. ದೂರದ ಪ್ರಯಾಣ ಬಲು ಭಾರ.. ಕೆಎಸ್ಆರ್ಟಿಸಿ ಬಸ್ ಹತ್ಬೇಕು ಅಂದ್ರೆ ಹಿಂದೆ- ಮುಂದೆ ಯೋಚಿಸ್ಬೇಕು. ಜೇಬಲ್ಲಿ ಜಾಸ್ತಿ ದುಡ್ಡಿಲ್ಲ ಅಂದ್ರೆ ಮುಗೀತು. ಕಾರು.. ಟೂರಿಸ್ಟ್ ವೆಹಿಕಲ್ಸ್ನಲ್ಲಿ ಊರ್ಕಡೆ ಹೊರಟ್ರೆ ಒಳ್ಳೆಯದು. ಯಾಕಂದ್ರೆ ಕೆಂಪು ಬಸ್ ಪ್ರಯಾಣ ಬಲು ದುಬಾರಿಯಾಗಿದೆ.
ಕೆಂಪು ಬಸ್ ಪ್ರಯಾಣ ಇನ್ಮುಂದೆ ಬಲು ದುಬಾರಿ..! ಯೆಸ್.. ಕೆಎಸ್ಆರ್ಟಿಸಿ ಬಸ್ ಒಂದು ದಿನ ನಿಂತಲ್ಲೇ ನಿಂತ್ರೆ ದೂರದೂರಿನ ಕನಸು ನಿಲ್ದಾಣದಲ್ಲೇ ನಿಂತು ಹೋಗುತ್ತೆ. ಅದ್ರಲ್ಲೂ ಮಧ್ಯಮವರ್ಗದವರ ದಾರಿ ದೀಪವಾಗಿರೋ ಕೆಎಸ್ಆರ್ಟಿಸಿ ಬಸ್ ನಂಬ್ಕೊಂಡು ಅದೆಷ್ಟೋ ಜನ ಪ್ರಯಾಣಕ್ಕೆ ಪ್ಲ್ಯಾನ್ ಮಾಡ್ತಾರೆ. ಆದ್ರೀಗ, ರಾಜ್ಯದ ಜನರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಇಂದಿನಿಂದ ಕೆಎಸ್ಆರ್ಟಿಸಿ ಬಸ್ ಪ್ರಯಾಣದ ದರ ಮತ್ತಷ್ಟು ದುಬಾರಿ. ಬಸ್ ಟಿಕೆಟ್ ದರ ಶೇಕಡ 12ರಷ್ಟು ಏಕಾಏಕಿ ಹೆಚ್ಚಳ ಮಾಡಲಾಗಿದ್ದು, ಬೆಲೆ ಏರಿಕೆ ಬೆಂಕಿಯಲ್ಲಿ ಬೆಂದು ಹೋಗಿರೋ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪ್ರಯಾಣ ಬಲು ದುಬಾರಿ..! ಇನ್ನು, ಕೆಎಸ್ಆರ್ಟಿಸಿ ಕಳೆದ 2014 ರಲ್ಲಿ ದರ ಪರಿಷ್ಕರಣೆ ಮಾಡಿತ್ತು. ಆದ್ರೆ, ಬೈಎಲೆಕ್ಷನ್ ಹೊತ್ತಲ್ಲಿ ಬೇಡ ಅಂತ ಹಿಂದೇಟು ಹಾಕಿದ್ದ ರಾಜ್ಯ ಸರ್ಕಾರ ಇದೀಗ ಜನರ ಗಾಯಕ್ಕೆ ಖಾರದ ಪುಡಿ ಹಾಕಿದೆ. ಕೆಸ್ಆರ್ಟಿಸಿ ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಸಾರಿಗೆ ಸಚಿವರನ್ನ ಕೇಳಿದ್ರೆ, ತೈಲ ಬೆಲೆ ಏರಿಕೆ, ನೌಕರರಿಗೆ ತುಟ್ಟಿ ಭತ್ಯೆ ಕೊಡ್ಬೇಕು. ಪ್ರತಿ ವರ್ಷ ನಿಗಮಕ್ಕೆ 620 ಕೋಟಿ ನಷ್ಟವಾಗಿದೆ. ಹೀಗಾಗಿ ಬಸ್ ಟಿಕೆಟ್ ದರ ಏರಿಕೆ ಅನಿವಾರ್ಯ ಅಂತ ಕಾರಣ ಕೊಡ್ತಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಹೆಚ್ಡಿಕೆ ಕಿಡಿ..! ಇತ್ತ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ಮಾಧ್ಯಮ ಪ್ರಕಟಣೆ ಮೂಲಕ ಕಿಡಿ ಕಾರಿದ್ದಾರೆ. ಜನರು ಆರ್ಥಿಕ ಸಂಕಷ್ಟದಲ್ಲಿರುವಾಗ ಏಕಾಏಕಿ ಬಸ್ ದರ ಹೆಚ್ಚಿಸುವ ಅನಿವಾರ್ಹತೆ ಸರಿಯಲ್ಲ. ಜನರಿಗೆ ಹೊರೆ ಮಾಡಿರೋ ಸರ್ಕಾರದ ನಿರ್ಧಾರ ತೀವ್ರವಾಗಿ ಖಂಡಿಸುತ್ತೇನೆ. ಈ ಬಾರಿ ಬಜೆಟ್ನಲ್ಲಿ ಬೆಲೆ ಏರಿಕೆ ಮುನ್ಸೂಚನೆ ನೀಡಿದ್ದಾರೆ ಅಂತ ಕುಟುಕಿದ್ದಾರೆ.
ವೋಲ್ವೋ, ಐರಾವತ, ರಾಜಹಂಸ ಸಿಕ್ಕಾಪಟ್ಟೆ ಕಾಸ್ಟ್ಲಿ..!? ಕೆಂಪು ಬಸ್ಗಳ ದರ ಬಲು ದುಬಾರಿಯಾಗಿದ್ರೆ, ಎಸಿ ಬಸ್ಗಳಾದ ವೋಲ್ವೋ, ಐರಾವತ ಹಾಗೂ ನಾನ್ ಏಸಿ ರಾಜಹಂಸ ಬಸ್ಗಳ ಟಿಕೆಟ್ ದರ ಬರೋಬ್ಬರಿ 100 ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಆದ್ರೆ ಕೆಎಸ್ಆರ್ಟಿಸಿ ಮಾತ್ರ ದರ ಪಟ್ಟಿ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಇನ್ನೊಂದೆಡೆ ಬಿಎಂಟಿಸ್ ಬಸ್ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎನ್ನಲಾಗಿದೆ.
ಒಟ್ನಲ್ಲಿ ಆರ್ಥಿಕ ಸಂಕಷ್ಟ.. ಬೆಲೆ ಏರಿಕೆ ಹೊಡೆತ.. ನಿರುದ್ಯೋಗ.. ಹೀಗೆ ಸಾಲು ಸಾಲು ಸಂಕಷ್ಟದಲ್ಲಿ ಸಿಲುಕಿರೋ ಜನಸಾಮಾನ್ಯರಿಗೆ ಬಿಜೆಪಿ ಸರ್ಕಾರ ಶಾಕ್ ನೀಡಿದೆ. ಮೊದ್ಲೇ ಕಂಗೆಟ್ಟಿರೋ ರಾಜ್ಯದ ಜನತೆ ಶಾಕ್ ಆಗಿದ್ದಾರೆ. ಅದೇನೆ ಇರ್ಲಿ ಇವತ್ತಿನಿಂದ ಕೆಂಪು ಬಸ್ ಹತ್ಬೇಕು ಅಂದ್ರೆ ಜೇಬಲ್ಲಿ ಸ್ವಲ್ಪ ಜಾಸ್ತಿ ದುಡ್ಡು ಇಟ್ಕೊಂಡೆ ಪ್ರಯಾಣ ಬೆಳೆಸಿ.