ಬೆಂಗಳೂರು: ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದಿಂದ ಜನಸಾಮಾನ್ಯರಿಗೆ ಭಾರಿ ತೊಂದರೆಯಾಗುತ್ತಿರುವ ಜೊತೆಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಎಲ್ಲ ನಾಲ್ಕು ನಿಗಮಗಳು ಅಪಾರ ನಷ್ಟ ಅನುಭವಿಸುತ್ತಿದೆ. ಇಲಾಖೆಯ ಮೂಲಗಳ ಪ್ರಕಾರ ಮುಷ್ಕರ ಆರಂಭವಾದ ದಿನದಿಂದ ಇಲ್ಲಿಯವರೆಗೆ ಅಂದರೆ ಕಳೆದ ಸಂಸ್ಥೆಯು ಮೂರು ದಿನಗಳಲ್ಲಿ ಸುಮಾರು 51 ಕೋಟಿ ರೂಪಾಯಿ ನಷ್ಟ ಅನುಭವಿಸಿವೆ. ಕೆಎಸ್ಆರ್ಟಿಸಿಗೆ ಅಂದಾಜು ರೂ 21 ಕೋಟಿ ನಷ್ಟ ಎದುರಾಗಿದ್ದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಮ್ಟಿಸಿ) ಹೆಚ್ಚು ಕಡಿಮೆ 9 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ವಾಯುವ್ಯ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳು ತಲಾ 10.5 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿವೆ ಎಂದು ಮೂಲಗಳು ಹೇಳಿವೆ.
ಮೂಲಗಳ ಪ್ರಕಾರ, ಕೆಎಸ್ಆರ್ಟಿಸಿಯ ದೈನಂದಿನ ಆದಾಯ ಸುಮಾರು ರೂ. 7 ಕೋಟಿಗಳಷ್ಟಿದೆ. ಹಾಗೆಯೇ, ಬಿಎಮ್ಟಿಸಿಯ ಒಂದು ದಿನದ ಆದಾಯ 2.5 ಕೋಟಿ ರೂಪಾಯಿಗಳಿಂದ 3 ಕೋಟಿ ರೂಪಾಯಿಗಳಷ್ಟಿದೆ. ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ಪ್ರತಿದಿನದ ಆದಾಯ ತಲಾ 2 ಕೋಟಿ ರೂಪಾಯಿಗಳಷ್ಟಿದೆ. ಓದುಗರಿಗೆ ನೆನಪಿರಬಹುದು, ಕಳೆದ ವರ್ಷ ಕೊವಿಡ್-19 ಪಿಡುಗುನಿಂದಾಗಿ ಬಸ್ಗಳು ಓಡಾಟ ನಿಲ್ಲಿಸಿದ್ದಾಗ ಸಾರಿಗೆ ಸಂಸ್ಥೆಗೆ 2,250 ಕೋಟಿ ರೂಪಾಯಿ ನಷ್ಟ ಎದುರಾಗಿತ್ತು ಮತ್ತು ಜನಸಾಮಾನ್ಯರು ಸಹ ಬಹಳ ತೊಂದರೆ ಅನುಭವಿಸಿದ್ದರು.
ಸಾರಿಗೆ ಸಂಸ್ಥೆ ನಿಗಮಗಳ ನೌಕರರು ಮುಷ್ಕರಕ್ಕೆ ಮುಂದಾದಗಲೆಲ್ಲ ಅತಿ ಹೆಚ್ಚು ಸಮಸ್ಯೆ ಎದುರಿಸುವರೆಂದರೆ ಸಾರ್ವಜನಿಕರು. ತಮ್ಮ ಸ್ವಂತ ಊರಿನಿಂದ ಯವುದೋ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿ ವಾಪಸ್ಸು ಊರಿಗೆ ಹಿಂತಿರುಗುವಾಗ ಬಸ್ಸಿಲ್ಲದೆ ಅವರರು ಪರದಾಡುವ ಪರಿ ಸಾಮಾನ್ಯ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಕೆಲವರು ಕೇವಲ ಬಸ್ ಖರ್ಚಿಗೆ ಅಂತ ದುಡ್ಡು ಇಟ್ಕೊಂಡಿರುತ್ತಾರೆ. ಬಸ್ ಇಲ್ಲವೆಂದು ಗೊತ್ತಾದಾಗ ಅವರು ಬರೆ ಹೊಟ್ಟೆಯಲ್ಲಿ ಬಸ್ ನಿಲ್ದಾಣದಲ್ಲಿ ಕಳೆಯಬೇಕಾಗುತ್ತದೆ. ಅವರ ಹಸಿದ ದೇಹದ ರಕ್ತ ಬಸ್ ನಿಲ್ದಾಣದ ಸೊಳ್ಳೆಗಳ ಪಾಲಾಗುತ್ತದೆ. ಪುರುಷರು ಆದರೆ ಓಕೆ, ಮಕ್ಕಳು ಮತ್ತು ಮಹಿಳೆಯರ ಗತಿಯೇನು? ಇದನ್ನು ಮಷ್ಕರ ನಿರತ ನೌಕರರಾಗಲೀ, ಸರ್ಕಾರವಾಗಲೀ ಯೋಚನೆ ಮಾಡುವುದಿಲ್ಲ.
ಬೆಂಗಳೂರಿನ ಬಿಎಮ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾದೂ ಕಾದೂ ಹೈರಾಣಾದ ವಿಶೇಷ ಚೇತನ ವ್ಯಕ್ತಿಯೊಬ್ಬ ಹೃದಯಾಘಾತಕ್ಕೊಳಗಾಗಿ ಪ್ರಾಣ ಬಿಟ್ಟಿದ್ದಾರೆ. ಈ ಸಾವಿಗೆ ಯಾರು ಹೊಣೆ? ಹಾಗೆಯೇ, ಯಾದಗಿರಿಯಲ್ಲಿ ತುಂಬು ಗರ್ಭಿಣಿ ಮಹಿಳೆಯೊಬ್ಬರು ಬಸ್ನಿಲ್ದಾಣದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಹಿಳೆ ಮತ್ತು ನವಜಾತ ಶಿಶು ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಯಾರೋ ಪುಣ್ಯಾತ್ಮರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೆಂದು ಗೊತ್ತಾಗಿದೆ.
ಏತನ್ಮಧ್ಯೆ, ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷರು ಮತ್ತು ಈ ಮುಷ್ಕರದ ನೇತೃತ್ವ ವಹಿಸಿಕೊಂಡಿರುವ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರು ಪ್ರತಿಭಟನೆಯನ್ನು ನಿಲ್ಲಿಸುವ ಮಾತಾಡಿಲ್ಲ. ಬೆಂಗಳೂರಿನಲ್ಲಿ ಇಂದು ಮಾತಾಡಿದ ಕೋಡಿಹಳ್ಳಿ ಅವರು, ನೌಕರರ ಎಲ್ಲ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಹೊರತು ಮುಷ್ಕರ ನಿಲ್ಲಿಸುವುದಿಲ್ಲ ಎಂದು ಹೇಳಿದರು. ಅದರರ್ಥ ಜನಸಾಮಾನ್ಯರ ಬವಣೆ ಕೊನೆಗೊಳ್ಳುವ ಲಕ್ಷಣಗಳು ಸದ್ಯಕ್ಕಂತೂ ಇಲ್ಲ.
ಇದನ್ನೂ ಓದಿ: KSRTC BMTC Strike: ಮುಷ್ಕರಕ್ಕೆ ಬೆಂಬಲ ನೀಡದೆ ಬಸ್ ಚಲಾಯಿಸಿದ ಚಾಲಕನ ವಿರುದ್ಧ ಸಹೋದ್ಯೋಗಿಗಳಿಂದ ಗಂಭೀರ ಆರೋಪ
Published On - 5:34 pm, Fri, 9 April 21