ಬೆಳಗಾವಿ, ಮಾರ್ಚ್ 28: ಹುಬ್ಬಳ್ಳಿ-ಧಾರವಾಡದ ಜನ ಹೊರ ಹಾಕಿದ್ದಾರೆ. ಹೊರಗೆ ಹಾಕಿಸಿಕೊಂಡು ಇಲ್ಲಿ ಬಂದು ಮಾತನಾಡುತ್ತಿದ್ದಾರೆ. ಇದು ನನ್ನ ಕರ್ಮ ಭೂಮಿ ಅಂದ್ರೆ ಸುಮ್ಮನಿರಬೇಕಾ? ಹುಬ್ಬಳ್ಳಿಗೆ ನನ್ನ ಕರ್ಮಭೂಮಿ ಅಂದ್ರೆ ಆ ಜನ ಒಪ್ತಾರಾ? ನಾವೇನು ಹುಚ್ಚರಿದ್ದೇವಾ ಎಂದು ಜಗದೀಶ್ ಶೆಟ್ಟರ್ ವಿರುದ್ಧ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಜನರನ್ನ ಬಕ್ರಾ ಮಾಡಲು ಬಂದಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಬೆಳಗಾವಿ ಜಿಲ್ಲೆಗೆ ಜಗದೀಶ್ ಶೆಟ್ಟರ್ ಕೊಡುಗೆ ಏನು? ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.
ಬಿಜೆಪಿಯಿಂದ ಶೆಟ್ಟರ್ ಆರು ಬಾರಿ ಆರಿಸಿ ಬಂದಿದ್ದಾರೆ. ಸಿಎಂ, ಮಂತ್ರಿಯಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಜಿಲ್ಲೆ ಮತ್ತು ಕಾರ್ಯಕರ್ತರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಅವರ ಕಾರ್ಯಕರ್ತರೇ ಗೋಬ್ಯಾಕ್ ಎಂದು ಹೇಳುತ್ತಿದ್ದಾರೆ ಎಂದರು.
‘ಚುನಾವಣೆಗಾಗಿ ಕಾಂಗ್ರೆಸ್ ಕೇಸರಿ ಶಾಲಿನ ಮೊರೆ ಹೋಗಿದೆ’. ಇವೆಲ್ಲಾ ಚುನಾವಣೆ ವಿಚಾರಗಳೇ ಅಲ್ಲ. ಸಂಸದರು ಯಾರು, ಅವರ ಜವಾಬ್ದಾರಿ ಏನು ಜನ ತೀರ್ಮಾನಿಸುತ್ತಾರೆ. ಒಂದೇ ವರ್ಷದಲ್ಲಿ ಒಂದು ಸಾವಿರ ಕೋಟಿ ಅನುದಾನ ತಂದಿದ್ದೇನೆ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಸಂಸತ್ತಿನಲ್ಲಿ ಜನರ ಧ್ವನಿಯಾಗಿ ಮಾತನಾಡುವ ನಾಯಕ ಬೇಕು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಬೇರೆ ರಾಜ್ಯದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಶೆಟ್ಟರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಶೆಟ್ಟರ್, ಮೋದಿ ಹಾಗೂ ರಾಹುಲ್ ಗಾಂಧೀಯಷ್ಟು ದೊಡ್ಡವರಾ? ಜಿಲ್ಲೆಗೆ ಅವರ ಕೊಡುಗೆ ಏನೂ? ಕೊವಿಡ್ ಸಂದರ್ಭದಲ್ಲಿ ನಮಗೆ ಅಲಾಟ್ ಆಗಿದ್ದ ಆಕ್ಸಿಜನ್ ಹುಬ್ಬಳ್ಳಿ ಧಾರವಾಡಕ್ಕೆ ತಗೊಂಡು ಹೋಗಿದ್ದಾರೆ. ಇವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕರ್ಮಭೂಮಿಗೆ ಎಷ್ಟು ನ್ಯಾಯ ಒದಗಿಸಿದ್ದಾರೆ ಎಂದು ಏಕವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಇದೆ: ಲಕ್ಷ್ಮಣ ಸವದಿ, ಶಾಸಕ
ಅರಬಾವಿ, ಗೋಕಾಕ್ದಲ್ಲಿ ಕಾಂಗ್ರೆಸ್ಗೆ ಮತ ಬರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣ ನಿಂತ ನೀರಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದ ಇತಿಹಾಸ ಇರಲಿಲ್ಲ. ಒಂದಲ್ಲ ಎರಡು ಬಾರಿ ಅಲ್ಲಿ ಗೆದ್ದು ಇತಿಹಾಸ ನಿರ್ಮಾಣ ಆಗಿದೆ. ನಾವು ಅಲ್ಲಿ ಕೆಲಸ ಮಾಡಿ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದೇವೆ. ಗ್ರಾಮೀಣ ಕ್ಷೇತ್ರದಲ್ಲಿ ನಮ್ಮ ಜಾತಿಯೇ ಇಲ್ಲ ಅಲ್ಲಿಯೇ ನಾವು ಇತಿಹಾಸ ನಿರ್ಮಿಸಿದ್ದೇವೆ. ಅರಬಾವಿ, ಗೋಕಾಕ್ನಲ್ಲಿ ಜನ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.