ಹುಬ್ಬಳ್ಳಿ: ಕೊರೊನಾ ಕಾಲಘಟ್ಟದಲ್ಲಿ ಅತಿ ಹೆಚ್ಚು ಮನ್ನಣೆಯನ್ನು ಪಡೆದಿರುವುದು ಎಂದರೆ ಅದು ಜಿಲ್ಲಾಸ್ಪತ್ರೆಗಳು. ಅದರಲ್ಲೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಬೇರೆ ಬೇರೆ ಜಿಲ್ಲೆಗಳಿಂದ ಜನರು ಇಲ್ಲಿಗೆ ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಈ ಕಾರಣಕ್ಕೆ ಉತ್ತರ ಕರ್ನಾಟಕದ ಬಡವರ ಸಂಜೀವಿನಿ ಎಂದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯನ್ನು ಕರೆಯಲಾಗುತ್ತದೆ. ಕಿಮ್ಸ್ ಆಸ್ಪತ್ರೆ ಇಷ್ಟು ಮನ್ನಣೆ ಪಡೆಯಲು ಕಾರಣ ಇಲ್ಲಿನ ವೈದ್ಯರ ತಂಡ. ಈ ಆಸ್ಪತ್ರೆಯ ವೈದ್ಯರ ಸೇವೆ ಇತರರಿಗೆ ಮಾದರಿಯಾಗಿದ್ದು, ಇದನ್ನು ಮನಗಂಡ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಜತೆಗೆ ಲಕ್ಷ್ಯ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಪ್ರತಿನಿತ್ಯ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಜನರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಇದರ ನಡುವೆ ಕಿಮ್ಸ್ ಆಸ್ಪತ್ರೆಯಲ್ಲಿ ಕೊವಿಡ್-19 ಸೋಂಕಿತ 370 ಕ್ಕೂ ಅಧಿಕ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ ಮಾಡಿಸುವ ಮೂಲಕ ಕಿಮ್ಸ್ ದಾಖಲೆ ಬರೆದಿದೆ. ಕೊರೊನಾದಿಂದ ಬಳಲುತ್ತಿದ್ದವರಿಗೆ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದೆ ವೇಳೆ ಸೋಂಕು ಕಾಣಿಸಿಕೊಂಡ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದೆ. ಹೀಗಾಗಿ ಕಿಮ್ಸ್ನ ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗಕ್ಕೆ ರಾಜ್ಯ ಹಾಗೂ ರಾಷ್ಟ್ರೀಯ ಮಾನ್ಯತೆ ಸಿಕ್ಕಿದ್ದು, ಕಿಮ್ಸ್ನ ಗರಿಮೆ ಹೆಚ್ಚಿದೆ. ಇಲ್ಲಿನ ಡಾಕ್ಟರ್ ಕಸ್ತೂರಿ ಡೋನಿಮಠ ನೇತ್ರತ್ವದ 21 ವೈದ್ಯರ ತಂಡ ತೋರಿದ ಸಾಧನೆಗೆ ಕೇಂದ್ರ ಸರಕಾರದ ಲಕ್ಷ್ಯ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.
ಪ್ರತಿದಿನ ಕಿಮ್ಸ್ನಲ್ಲಿ 20ಕ್ಕೂ ಹೆಚ್ಚು ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗುತ್ತಿದೆ. ಮಾರ್ಚ್ನಿಂದ ಇಲ್ಲಿಯವರೆಗೆ ಬರೋಬ್ಬರಿ 1000ಕ್ಕೂ ಹೆಚ್ಚು ಹೆರಿಗೆಗಳಾಗಿವೆ. ಅವುಗಳಲ್ಲಿ ಕೊರೊನಾ ಸೋಂಕಿತ 370 ಕ್ಕೂ ಅಧಿಕ ಗರ್ಭಿಣಿಯರಿಗೆ ಹೆರಿಗೆ ಮಾಡಲಾಗಿದೆ. ಹೆರಿಗೆಗೆ ಬರುವ ಪ್ರತಿಯೊಬ್ಬ ಗರ್ಭಿಣಿಯರನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸುತ್ತೇವೆ. ಕೊವಿಡ್ ದೃಢಪಟ್ಟ ಗರ್ಭಿಣಿಯರ ಹೆರಿಗೆಗೆ ವಿಶೇಷ ತಂಡ ರಚಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುಲಾಗುತ್ತದೆ. ಈ ಕಾರಣಕ್ಕಾಗಿಯೇ ಇಂದು ರಾಜ್ಯ ಹಾಗೂ ರಾಷ್ಟ್ರೀಯ ಮಾನ್ಯತೆ ಲಭಿಸಿದ್ದು, ಜನಸಾಮಾನ್ಯರಿಂದಲೂ ಕಿಮ್ಸ್ನ ಸಿಬ್ಬಂದಿಗಳ ಕಾರ್ಯಕ್ಕೆ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಓಬಿಜಿ ವಿಭಾಗದ ಮುಖ್ಯಸ್ಥರಾದ ಡಾ.ಕಸ್ತೂರಿ ಡೋನಿಮಠ ಹೇಳಿದ್ದಾರೆ.
ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವಿರುದ್ಧ ಕಿಮ್ಸ್ ಆಸ್ಪತ್ರೆ ಶತಾಯ-ಗತಾಯ ಹೋರಾಟ ನಡೆಸಿದೆ. ಇನ್ನು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡ ಕಿಮ್ಸ್ ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯು ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆಯಲ್ಲದೇ, ಆಸ್ಪತ್ರೆಯ ಈ ಸಾಧನೆಗೆ ರಾಷ್ಟ್ರೀಯ ಮಟ್ಟದ ಮಾನ್ಯತೆಯ ಗರಿ ಲಭಿಸಿರುವುದು ನಿಜಕ್ಕೂ ಸಂತಸದ ವಿಷಯ.
ಇದನ್ನೂ ಓದಿ:
Published On - 9:44 am, Wed, 30 June 21