ಮೈಸೂರು, ಜುಲೈ 07: ಮುಡಾ (MUDA) ಕೋಟಿ ಕೋಟಿ ರೂ. ಹಗರಣ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಪತ್ನಿ ಮಾಲೀಕತ್ವದ ಸೈಟ್ ಭಾರೀ ವಿವಾದವನ್ನೇ ಸೃಷ್ಟಿಸಿದೆ. ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಇದೀಗ ಮತ್ತೊಂದು ಸ್ಫೋಟಕ ಆರೋಪ ಕೇಳಿಬಂದಿದೆ. 2010ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಸಹೋದರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ 3 ಎಕರೆ 16 ಗುಂಟೆ ಜಮೀನು ಗಿಫ್ಟ್ ನೀಡಿದ್ದಾರೆ. 2018ರ ಅಫಿಡವಿಟ್‌ನಲ್ಲಿ ಇದನ್ನು ಸ್ವತಃ ಸಿದ್ದರಾಮಯ್ಯರಿಂದ ಘೋಷಣೆ ಮಾಡಿದ್ದಾರೆ. ಆದರೆ 2013ರ ಚುನಾವಣಾ ಅಫಿಡವಿಟ್‌ನಲ್ಲಿ ಈ ಜಮೀನಿನ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ಮತ್ತೊಂದು ಆರೋಪ ಮಾಡಿದ್ದಾರೆ.
ಈ ಕುರಿತಾಗಿ ನಗರದಲ್ಲಿ ಟಿವಿ9 ಜೊತೆಗೆ ಮಾತನಾಡಿದ ಅವರು, ಬಹುಶಃ ಇದು 2014ರಲ್ಲಿ ನಕಲಿ ದಾಖಲೆ ಮಾಡಿಕೊಂಡಿದ್ದಾರೆ. ಆ ಕಾರಣಕ್ಕೆ 2013ರ ಅಫಿಡವಿಟ್‌ನಲ್ಲಿ ಸಿದ್ದರಾಮಯ್ಯ ಅವರು ತಿಳಿಸಿಲ್ಲ. ಏಕೆಂದರೆ ಚುನಾವಣಾ ಅಫಿಡವಿಟ್ ಸಾಕಷ್ಟು ಮಹತ್ವವಾದ್ದು. ಅದರಲ್ಲಿರುವುದೆಲ್ಲಾ ಸತ್ಯ ಎಂದು ಒಪ್ಪಿ ನೀಡಿರುವ ಅಫಿಡವಿಟ್.
ಇದನ್ನೂ ಓದಿ: ಮುಡಾದ ಪ್ರತಿ ಸಭೆಯಲ್ಲೂ ಶಾಸಕರ ಫೈಲ್ಗಳೇ ಇರುತ್ತಿದ್ದವು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬಿಜೆಪಿ MLA
ಅದೇ ಚುನಾವಣೆಯಲ್ಲಿ ಗೆದ್ದು ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಹಾಗಾದರೆ ಯಾವುದು ಸತ್ಯ ಸಿದ್ದರಾಮಯ್ಯ ಅವರೇ ತಿಳಿಸಲಿ. ಅದಕ್ಕೆ ನಾನು ಹೇಳಿದ್ದು ನಿವೇಶನ ವಾಪಸ್ಸು ಮುಡಾಗಿ ನೀಡಿ ಮಾದರಿಯಾಗಿ. ಸಮಗ್ರ ಮುಡಾ ಪ್ರಕರಣ ಸಿಬಿಐಗೆ ವಹಿಸಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮುಡಾ ಅಕ್ರಮ: ಬದಲಿ ಭೂಮಿ ಪಡೆದವರ ಪಟ್ಟಿ ಜಾಹಿರಾತು ಮೂಲಕ ಬಿಡುಗಡೆ; ಮಹದೇವಪ್ಪ
ತಮ್ಮ ಜಮೀನು ವಶಪಡಿಸಿಕೊಂಡಿದ್ದಕ್ಕೆ ಬದಲಿಗೆ ವಿಜಯನಗರದಲ್ಲಿ 14 ನಿವೇಶನ ನೀಡಲಾಗಿತ್ತು. ವಾಪಸ್ಸು ಕೊಡಲು 62 ಕೋಟಿ ರೂ. ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ. ಅದರ ಬೆಲೆಯೇ 25 ಲಕ್ಷ ರೂ. ಏಕೆ 62 ಕೋಟಿ ರೂ. ಕೊಡಬೇಕು ಎಂದು ಗಂಗರಾಜು ಪ್ರಶ್ನೆ ಮಾಡಿದ್ದಾರೆ. ತಮ್ಮ ಜಮೀನಿನ ಬೆಲೆ 25 ಲಕ್ಷ ರೂ. ಎಂದು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ.
2018ರ ಚುನಾವಣಾ ಅಫಿಡವಿಟ್‌ನಲ್ಲಿ 3.16 ಗುಂಟೆ ಜಮೀನು ತಮ್ಮ ಪತ್ನಿ ಹೆಸರಲ್ಲಿದ್ದು, ಸಹೋದರನಿಂದ ಗಿಫ್ಟ್ ಬಂದಿರುವ ಬಗ್ಗೆಯೂ ಮಾಹಿತಿ ಇದೆ. ಅದರ ಮೌಲ್ಯ 25 ಲಕ್ಷ ರೂ. ಎಂದು ಮಾಹಿತಿ ನೀಡಿದ್ದಾರೆ. ಸಿದ್ದರಾಮಯ್ಯ. 2023ರ ಚುನಾವಣಾ ಅಫಿಡೆವೆಟ್‌ನಲ್ಲಿ ಬದಲಿ ನಿವೇಶನಗಳ ಘೋಷಣೆ ಮಾಡಿದ್ದು, ಮುಡಾ ನೀಡಿದ 14 ನಿವೇಶನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಒಟ್ಟು ಮೌಲ್ಯ 8 ಕೋಟಿ ರೂ. ಎಂದು ಘೋಷಣೆ ಮಾಡಿದ್ದು, 25 ಲಕ್ಷ ರೂ. ಮೌಲ್ಯದ ಜಮೀನಿನಿಂದ 8 ಕೋಟಿ ರೂ. ನಿವೇಶನದ ಬದಲಿ ಪರಿಹಾರ ಪಡೆದಿದ್ದಾರೆ. ಇದೀಗ ಯಾವ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ 62 ಕೋಟಿ ರೂ. ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.