ದಕ್ಷಿಣ ಕನ್ನಡ, ಜುಲೈ 03: ಮಂಗಳೂರಿನ (Mangaluru) ಬಲ್ಮಠ ಪ್ರದೇಶದಲ್ಲಿ ಕಾಮಗಾರಿ ವೇಳೆ ಭೂಕುಸಿತಗೊಂಡು (Landslide) ಮಣ್ಣಿನಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರ ಪೈಕಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಪವಾಡಸದೃಶ್ಯ ರೀತಿ ಪಾರಾಗಿದ್ದಾರೆ. ಚಂದನ್ ಕುಮಾರ್ ಮೃತ ಕಾರ್ಮಿಕ. ಮೂಲತಃ ಉತ್ತರ ಪ್ರದೇಶ ಮೂಲದವರು. ಸತತ ಆರೂವರೆ ಗಂಟೆ ಕಾರ್ಯಾಚರಣೆ ನಡೆಸಿ ಚಂದನ್ ಕುಮಾರ್ನನ್ನು ಹೊರತೆಗೆಯಲು ರಕ್ಷಣಾ ತಂಡ ಹರಸಾಹಸ ಪಟ್ಟಿತ್ತು. ಆದರೆ ರಾಡ್, ಮಣ್ಣು, ಹಲಗೆಯ ನಡುವೆ ಸಿಲುಕಿಕೊಂಡಿದ್ದರಿಂದ ಕಾರ್ಮಿಕ ಅಷ್ಟರಲ್ಲಿ ಉಸಿರು ಚೆಲ್ಲಿದ್ದಾರೆ.
ಹೊರತೆಗೆದ ಚಂದನ್ ಕುಮಾರ್ ಆರೋಗ್ಯವನ್ನು ವೈದ್ಯರು ತಪಾಸಣೆ ಮಾಡಿದ್ದರು. ಆತನ ಹೃದಯ ಭಾಗದಲ್ಲಿ ಕಾರ್ಡಿಯೋ ಪಲ್ಮನರಿ ಮಾಡುವ ಮೂಲಕ ಪುನರುಜ್ಜೀವನಕ್ಕೆ ಪ್ರಯತ್ನಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕಾರ್ಮಿಕ ಮೃತಪಟ್ಟಿದ್ದಾರೆ.
ಕಾರ್ಯಾಚರಣೆ ಮುಗಿದ ಬಳಿಕ ಡಿಸಿ ಮುಲ್ಲೈ ಮುಗಿಲನ್ ಪ್ರತಿಕ್ರಿಯಿಸಿದ್ದು, ಮಣ್ಣು ಕುಸಿತವಾಗಿ ಇಬ್ಬರು ಕಾರ್ಮಿಕರು ಸಿಲುಕಿಕೊಂಡಿದ್ದರು. NDRF, SDRF, ಅಗ್ನಿಶಾಮಕ ದಳದ ಮೂಲಕ ಕಾರ್ಯಾಚರಣೆ ನಡೆಸಿದ್ದೆವು. ತಡೆಗೋಡೆ ಬಳಿ ವಾಟರ್ ಫ್ರೂಫಿಂಗ್ ಕೆಲಸ ಮಾಡುತ್ತಿದ್ದರು. ಹಲಗೆಯ ಮೇಲೆ ಮಣ್ಣು ಬಿದ್ದಿತ್ತು. ಒಬ್ಬರು ಪ್ರಾರಂಭದಿಂದಲೂ ಮಾತನಾಡುತ್ತಿದ್ದರು. ಅವರನ್ನು ನಾಲ್ಕು ಗಂಟೆಗೆ ರಕ್ಷಣೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗ ಮಾರ್ಗದಿಂದಲೇ ಚಿಕಿತ್ಸೆ
ಇನ್ನೊಬ್ಬ ಕಾರ್ಮಿಕರ ಮೇಲೆ ಬಹಳ ದೊಡ್ಡ ಪ್ರಮಾಣದ ಮಣ್ಣು ಬಿದ್ದಿತ್ತು. ಕಾರ್ಯಾಚರಣೆಗೆ ಸ್ವಲ್ಪ ಸಮಯ ತೆಗೆದುಕೊಂಡಿತು. ರಕ್ಷಣಾ ಕಾರ್ಯಾಚರಣೆ ಸಂದರ್ಭ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ.
ಚಂದನ್ ಕುಮಾರ್ರನ್ನ ರಕ್ಷಣೆ ಮಾಡಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆತನ ಪರಿಸ್ಥಿತಿ ಗಂಭೀರವಾಗಿತ್ತು. ಪ್ರಾಥಮಿಕ ಚಿಕಿತ್ಸೆ ಕೂಡ ನೀಡಲಾಗಿದೆ. ಆದರೆ ಚಂದನ್ಗೆ ಪಲ್ಸ್ ರೇಟ್ ತುಂಬಾ ಕಡಿಮೆಯಾಗಿತ್ತು. ಮಣ್ಣು ಬಿದ್ದಿರುವಾಗಲೇ ಸಮಸ್ಯೆಯಾಗಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಭೂಕುಸಿತ; ಮಣ್ಣಿನಡಿ ಸಿಲುಕಿದ ಕಾರ್ಮಿಕರು
ಕಬ್ಬಿಣದ ರಾಡ್ನ ನಡುವೆ ಸಿಲುಕಿದ್ದ ಕಾರ್ಮಿಕ ಚಂದನ್ ಕುಮಾರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ರಕ್ಷಣಾ ತಂಡ ಕೊರೆದ ಸುರಂಗದಲ್ಲಿ ಆತನ ಕೈ ಮಾತ್ರ ಕಾಣುತ್ತಿತ್ತು. ರಕ್ತದೊತ್ತಡದ ಸಮಸ್ಯೆಯಿಂದ ಚಂದನ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಡ್ರಿಪ್ಸ್ ಹಾಗೂ ಆಕ್ಸಿಜನ್ ನೀಡುವ ಮೂಲಕ ಕಾರ್ಯಾಚರಣೆ ಮಧ್ಯೆಯೇ ಜಿಲ್ಲಾ ಆರೋಗ್ಯಾಧಿಕಾರಿ ತಂಡದಿಂದ ತುರ್ತು ಚಿಕಿತ್ಸೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:11 pm, Wed, 3 July 24